ಕೋಲ್ಕತ್ತಾ(ಜೂ.05): ಪಶ್ಚಿಮ ಬಂಗಾಳದಲ್ಲಿ ವಿಧಾನಸಭೆ ಚುನಾವಣೆ ಬಳಿಕ ನಡೆದ ಹಿಂಸಾಚಾರ ಪ್ರಕರಣದ ಬಿಸಿ ಇನ್ನೂ ಆರಿಲ್ಲ, ಆಧರೆ ಅಷ್ಟರಲ್ಲಾಗಲೇ ಟಿಎಂಸಿ ಹೊರಡಿಸಿರುವ ಆದೇಶವೊಂದು ಎಲ್ಲರನ್ನೂ ಬೆಚ್ಚಿ ಬೀಳುವಂತೆ ಮಾಡಿದೆ. ಟಿಎಂಸಿ ಕೆಲ ಬಿಜೆಪಿಗರ ಲಿಸ್ಟ್ ಜಾರಿಗೊಳಿಸಿ, ಈ ಪಟ್ಟಿಯಲ್ಲಿರುವವರಿಗೆ ದಿನಸಿ ನೀಡಬಾರದೆಂದು ಅಂಗಡಿ ವ್ಯಾಪಾರಿಗಳಿಗೆ ಆದೇಶಿಸಿದೆ. ಸಾಲದೆಂಬಂತೆ ಚಹಾ ಮಾರಾಟಗಾರರಿಗೂ ಇವರಿಗೆ ಟೀ ವಿತರಿಸದಂತೆ ಸೂಚಿಸಿದೆ. ಮೌಖಿಕ ಆದೇಶದೊಂದಿಗೆ ಈ ಪಟ್ಟಿಯನ್ನು ಅಂಗಡಿ ವ್ಯಾಪಾರಿಗಳಿಗೆ ರವಾನಿಸಲಾಗಿದೆ.

ಇದು ಕಪ್ಪು ಪಟ್ಟಿ ಎಂದ ಬಿಜೆಪಿ ರಾಜ್ಯಸಭಾ ಸಂಸದ ಸ್ವಪನ್ ದಾಸ್‌ಗುಪ್ತಾ

ಬಿಜೆಪಿ ರಾಜ್ಯಸಭಾ ಸದಸ್ಯರ ಸ್ವಪನ್ ದಾಸ್‌ಗುಪ್ತಾರವರು ಪಶ್ಚಿಮ ಬಂಗಾಳದ ಮಹಿಳಾ ಮೋರ್ಚಾದ ಉಪಾಧ್ಯಕ್ಷೆ ಕೇಯಾ ಘೋಷ್‌ರವರ ಟ್ವೀಟ್‌ ರೀಟ್ವೀಟ್‌ ಮಾಡುತ್ತಾ ಈ ವಿಚಾರವನ್ನು ಎತ್ತಿ ಹಿಡಿದಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಆಡಳಿತಾರೂಢ ಪಕ್ಷದ ಪ್ರಾದೇಶಿಕ ಕಚೇರಿ ತಯಾರಿಸಿದ ಪಟ್ಟಿ ಅದ್ವಿತೀಯ. ಇಲ್ಲಿ ಸಕ್ರಿಯ ಬಿಜೆಪಿ ಕಾರ್ಯಕರ್ತರಿಗೆ 'ಜಾತ್ಯತೀತ ನ್ಯಾಯ'ದಲ್ಲಿ ಕಾನೂನುಬಾಹಿರ ಎಂದು ನಿಷೇಧಿಸಲಾಗಿದೆ. ಇದು ಮಾಧ್ಯಮಗಳ ಮೌನ ಹಾಗೂ ಪೊಲೀಸರ ಸಂಚನ್ನು ಬಳಸಿಕೊಂಡು ಬಿಜೆಪಿ ಕಾರ್ಯಕರ್ತರ ಸ್ಥೈರ್ಯ ಮತ್ತು ಆರ್ಥಿಕ ಬೆನ್ನೆಲುಬು ಮುರಿಯುವ ಉಪಾಯವಾಗಿದೆ ಎಂದು ದಾಸ್‌ಗುಪ್ತಾ ಆರೋಪಿಸಿದ್ದಾರೆ.

ಇನ್ನು ಬಿಜೆಪಿ ಕಾರ್ಯಕರ್ತರನ್ನು ಕೊರೋನಾ ಲಸಿಕೆ ಪಡೆಯುವುದರಿಂದಲೂ ವಂಚಿತರಾಗಿಸಿದ್ದಾರೆಂಬ ಮಾಹಿತಿ ನನಗೆ ಸಿಕ್ಕಿದೆ ಎಂದೂ ಸ್ವಪನ್ ಗುಪ್ತಾ ಬರೆದಿದ್ದಾರೆ.

ಟ್ವೀಟ್‌ ಮಾಡಿ ಪಟ್ಟಿ ಬಹಿರಂಗಪಡಿಸಿದ ಕೇಯಾ ಘೋಷ್

ಬಂಗಾಳದಲ್ಲಿ ಬಿಜೆಪಿ ಮಹಿಳಾ ಮೋರ್ಚಾದ ಉಪಾಧ್ಯಕ್ಷೆ ಕೇಯಾ ಘೋಷ್ ಟಿಎಂಸಿ ಜಾರಿಗೊಳಿಸಿದ ಲಿಸ್ಟ್‌ನ್ನು ಟ್ವೀಟ್ ಮಾಡಿದ್ದಾರೆ. ಅಲ್ಲದೇ ಇದು ಅದ್ಭುತ ಎಂದೂ ಅವರು ಬರೆದಿದ್ದಾರೆ. ಯಾವುದೇ ಕಾರಣವಿಲ್ಲದೇ ಈ ನಿರ್ಬಂಧ ಹೇರಲಾಗಿದೆ. ಇದು ಬಂಗಾಳದಲ್ಲಿ ನಡೆಯುತ್ತಿರುವ ಮೂಲಭೂತ ಹಕ್ಕುಗಳ ಅಪಹಾಸ್ಯ ಹೊರತು ಬೇರೇನೂ ಅಲ್ಲ ಎಂದಿದ್ದಾರೆ.