ಹೊಸ ಸಂಸತ್ ಭವನ ಉದ್ಘಾಟನೆ ಪ್ರಧಾನಿ ಮೋದಿ ಮಾಡಬಾರದು ಎಂದು ಪಟ್ಟು ಹಿಡಿದಿರುವ ವಿಪಕ್ಷಗಳು ಇದೀಗ ಉದ್ಘಾಟನಾ ಸಮಾರಂಭ ಬಹಿಷ್ಕರಿಸುವ ಹೈಡ್ರಾಮ ನಡೆಯುತ್ತಿದೆ. ಟಿಎಂಸಿ ಬೆನ್ನಲ್ಲೇ ಇದೀಗ ಸಿಪಿಐ ಕೂಡ ಉದ್ಘಾಟನೆ ಬಹಿಷ್ಕರಿಸುವುದಾಗಿ ಘೋಷಿಸಿದೆ.
ನವದೆಹಲಿ(ಮೇ.23): ಹೊಸ ಸಂಸತ್ ಭವನ ಕಾಮಗಾರಿ ಪೂರ್ಣಗೊಂಡಿದ್ದು ಉದ್ಘಾಟನೆಗೆ ಸಜ್ಜಾಗಿದೆ. ಕೇಂದ್ರ ಬಿಜೆಪಿ ಸರ್ಕಾರ ನಿಗದಿಪಡಿಸಿದ ದಿನಾಂಕದಲ್ಲಿ ಕಾಮಗಾರಿ ಮುಗಿಸಿ ಉದ್ಘಾಟನೆ ಮಾಡುತ್ತಿರುವ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಹೊಸ ಸಂಸತ್ ಭವನವೂ ಸೇರಿದೆ. ಇದು ವಿಪಕ್ಷಗಳ ಕಣ್ಣು ಕೆಂಪಾಗಿಸಿದೆ. ಹೊಸ ಸಂಸತ್ ಭವನದ ಅಶೋಕ ಸ್ಥಂಬದ ಬಗ್ಗೆ ಖ್ಯಾತೆ ತೆಗೆದು ಕೈಸುಟ್ಟುಕೊಂಡ ಕಾಂಗ್ರೆಸ್ ಹಾಗೂ ವಿಪಕ್ಷಗಳು ಇದೀಗ ಪ್ರಧಾನಿ ಮೋದಿಯಿಂದ ಸಂಸತ್ ಭವನ ಉದ್ಘಾಟಿಸಬಾರದು ಎಂದು ಪಟ್ಟು ಹಿಡಿದೆ. ರಾಷ್ಟ್ರಪತಿ ಸಂಸತ್ ಭವನ ಉದ್ಘಾಟಿಸಬೇಕು ಎಂದು ಆಗ್ರಹಿಸಿದೆ. ಇತ್ತ ಟಿಎಂಸಿ ಹಾಗೂ ಸಿಪಿಐ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಉದ್ಘಾಟನಾ ಸಮಾರಂಭ ಬಹಿಷ್ಕರಿಸಲು ಮುಂದಾಗಿದೆ.
ಮೇ.28 ರಂದು ನೂತನ ಸಂಸತ್ ಭವನ ಉದ್ಘಾಟನೆಯಾಗಲಿದೆ. ಪ್ರಧಾನಿ ಮೋದಿ ಉದ್ಘಾಟನೆ ಮಾಡುವುದು ವಿಪಕ್ಷಗಳಿಗೆ ಸುತಾರಾಂ ಇಷ್ಟವಿಲ್ಲ. ಮೋದಿ ಬದಲು ರಾಷ್ಟ್ರಪತಿ ಉದ್ಘಾಟನೆ ಮಾಡಲಿ ಎಂದು ಒತ್ತಡ ಹೇರಿದೆ. ಸಂಸತ್ ಭವನ ಭಾರತದ ಪ್ರಜಾಪ್ರಭುತ್ವದ ಅಡಿಪಾಯವಾಗಿದೆ. ಇದು ಕೇವಲ ಕಟ್ಟಡವಲ್ಲ. ಮೋದಿ ಉದ್ಘಾಟನೆ ಮಾಡುವುದಾದರೆ ನಾವು ಕಾರ್ಯಕ್ರಮ ಬಹಿಷ್ಕರಿಸುತ್ತೇವೆ ಎಂದು ಟಿಎಂಸಿ ಹೇಳಿದೆ.
ಮೇ 28ಕ್ಕೆ ನೂತನ ಸಂಸತ್ ಭವನ ಉದ್ಘಾಟನೆ? ಮೋದಿ ಸರ್ಕಾರಕ್ಕೆ 9 ವರ್ಷ ತುಂಬಿದ ಬೆನ್ನಲ್ಲೇ ಲೋಕಾರ್ಪಣೆ
ಉದ್ಘಾಟನಾ ಕಾರ್ಯಕ್ರಮವನ್ನು ವೀರ್ ಸಾವರ್ಕರ್ ಅವರ ಜನ್ಮ ಜಯಂತಿಯಂದು ನಡೆಸುತ್ತಿರುವುದು ಸರಿಯಲ್ಲ ಎಂದು ಸಂಸದ ಸುದೀಪ್ ಬಂಡೋಪಧ್ಯಾಯ ಹೇಳಿದ್ದಾರೆ. ‘ಮೇ 28ರಂದು ನಡೆಯಲಿರುವ ಸಂಸತ್ ಕಟ್ಟಡ ಉದ್ಘಾಟನಾ ಸಮಾರಂಭವನ್ನು ಬಹಿಷ್ಕರಿಸಲು ನಾವು ನಿರ್ಧರಿಸಿದ್ದೇವೆ. ಈ ಉದ್ಘಾಟನೆಯನ್ನು ಗಣರಾಜ್ಯೋತ್ಸವದ ದಿನ ಅಥವಾ ಸ್ವಾತಂತ್ರ್ಯ ದಿನಾಚರಣೆಯ ದಿನ ನಡೆಸಬೇಕಿತ್ತು. ಇಲ್ಲವೇ ಗಾಂಧಿ ಜಯಂತಿ ದಿನ ನಡೆಸಬೇಕಿತ್ತು. ಇದನ್ನು ಸಾವರ್ಕರ್ ಜಯಂತಿ ದಿನ ನಡೆಸುತ್ತಿರುವುದು ಸರಿಯಾದ ಕ್ರಮ ಅಲ್ಲ. ಅಲ್ಲದೇ ಹಳೆ ಸಂಸತ್ ಭವನ ಏನಾಗಲಿದೆ ಎಂಬುದರ ಕುರಿತಾಗಿ ವಿಪಕ್ಷಗಳಿಗೆ ಯಾವುದೇ ಮಾಹಿತಿ ನೀಡಿಲ್ಲ. ಈ ವಿಷಯದಲ್ಲಿ ಸರ್ಕಾರ ಸಂಪೂರ್ಣ ಮೌನವನ್ನು ಪೋಷಿಸುತ್ತಿದೆ’ ಎಂದು ಅವರು ಹೇಳಿದರು.
ಇತ್ತ ಸಿಪಿಎಂ ಕೂಡ ಇದೇ ಮಾತನ್ನು ಹೇಳಿದೆ. ಪ್ರಧಾನಿ ಮೋದಿ ಉದ್ಘಾಟನೆ ಮಾಡಿದರೆ ಕಾರ್ಯಕ್ರಮದಿಂದ ಹಿಂದೆ ಸರಿಯುತ್ತೇವೆ ಎಂದು ಸಿಪಿಐ ಪ್ರಧಾನ ಡಿ ರಾಜ ಹೇಳಿದ್ದಾರೆ.
ಕಾಶ್ಮೀರ ಹಿಂದಿನಂತಿಲ್ಲ, ಜಿ20ಗಾಗಿ ಭೂಲೋಕದ ಸ್ವರ್ಗವಾದ ಪಂಡಿತರ ನಾಡು!
ನೂತನ ಸಂಸತ್ ಭವನವನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಉದ್ಘಾಟಿಸಬಾರದು. ರಾಷ್ಟ್ರಪತಿ ದ್ರೌಪದಿ ಮುರ್ಮು ಉದ್ಘಾಟನೆ ಮಾಡಬೇಕು’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆಗ್ರಹಿಸಿದ್ದಾರೆ. ಈ ಸಂಬಂಧ ಅವರು ಭಾನುವಾರ ಟ್ವೀಟ್ ಮಾಡಿದ್ದರು. ಕಳೆದ ಬುಧವಾರ ಪ್ರಧಾನಿ ಭೇಟಿಯಾಗಿದ್ದ ಲೋಕಸಭಾ ಸಭಾಪತಿ ಓಂ ಬಿರ್ಲಾ ಅವರು ಸಂಸತ್ ಭವನ ಉದ್ಘಾಟನೆ ಮಾಡುವಂತೆ ಆಮಂತ್ರಣ ನೀಡಿದ್ದರು. ಆ ಪ್ರಕಾರ ಮೇ 28 ರಂದು ಪ್ರಧಾನಿ ನರೇಂದ್ರ ಮೋದಿ ಸಂಸತ್ ಭವನವನ್ನು ಉದ್ಘಾಟಿಸಲಿದ್ದಾರೆ.
