2024ರಲ್ಲಿ ತಿರುಪತಿ ದೇವಸ್ಥಾನಕ್ಕೆ 2.55 ಕೋಟಿ ಭಕ್ತರ ಭೇಟಿ, ಕಾಣಿಕೆ ಹುಂಡಿಯಲ್ಲಿ ಬಿದ್ದ ಹಣವೆಷ್ಟು?

2024ರಲ್ಲಿ ತಿರುಪತಿಗೆ 2.55 ಕೋಟಿ ಭಕ್ತರು ಭೇಟಿ ನೀಡಿ, 1365 ಕೋಟಿ ರೂ. ಕಾಣಿಕೆ ಸಂಗ್ರಹವಾಗಿದೆ. ಚಿನ್ನ, ರತ್ನಗಳು, ವಿದೇಶಿ ಕರೆನ್ಸಿ ಸೇರಿದಂತೆ ಹಲವು ವಸ್ತುಗಳನ್ನು ಕಾಣಿಕೆಯಾಗಿ ನೀಡಲಾಗಿದೆ. 99 ಲಕ್ಷ ಭಕ್ತರು ಮುಡಿ ನೀಡಿದ್ದಾರೆ.

Tirupati Temple Receives Rs 1365 Crore in Hundi Collection in 2024 san

ಬೆಂಗಳೂರು (ಜ.2): ದೇಶದ ಜನರು ದೊಡ್ಡ ಪ್ರಮಾಣದಲ್ಲಿ ಭೇಟಿ ನೀಡುವ ತೀರ್ಥಕ್ಷೇತ್ರ ತಿರುಪತಿ ಎನ್ನುವುದು ಈಗಾಗಲೇ ತಿಳಿದಿದೆ. ಪ್ರತಿದಿನ ಕೋಟ್ಯಂತರ ರೂಪಾಯಿ ಹಣ ಇಲ್ಲಿ ಕಾಣಿಕೆ ರೂಪದಲ್ಲಿ ಬರುತ್ತದೆ. ವಿಶ್ವದ ಅತ್ಯಂತ ಶ್ರೀಮಂತ ದೇವರು ಎಂದು ಹೇಳಲಾಗುವ ವೆಂಕಟಗಿರಿವಾಸ  ವೆಂಕಟೇಶನಿಗೆ 2024ರಲ್ಲಿ ಭಕ್ತರು ನೀಡಿದ ಕಾಣಿಕೆಯ ಪಮಾಹಿತಿ ಹೊರಬಿದ್ದಿದೆ. ತಿರುಪತಿಗೆ ವರ್ಷದಿಂದ ವರ್ಷಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆ ಏರಿಕೆ ಆಗುತ್ತಿದೆ. ಕಾಣಿಕೆ ಹುಂಡಿಯಿಂದ ಬರುವ ಆದಾಯವೂ ದೊಡ್ಡ ಪ್ರಮಾಣದಲ್ಲಿ ಏರಿಕೆಯಾಗಿದೆ. ಮುಂದಿನ ವರ್ಷಗಳಲ್ಲಿ ಇದು ಇನ್ನಷ್ಟು ಹೆಚ್ಚಾಗಬಹುದು ಎಂದು ಹೇಳಲಾಗುತ್ತಿದೆ. 2024 ವರ್ಷ ಮುಗಿದು 2025 ಆರಂಭವಾಗಿದೆ.ವೈಕುಂಠ ಏಕಾದಶಿ ಕೂಡ ಸಮೀಪಿಸುತ್ತಿರುವ ಕಾರಣ ತಿರುಮಲ ತಿರುಪತಿ ದೇವಸ್ಥಾನಕ್ಕೆ ಭಕ್ತರ ಭೇಟಿ ಕೂಡ ಏರಿಕೆಯಾಗಿದೆ. ಜನವರಿ 10 ರಿಂದ ತಿರುಪತಿಯಲ್ಲಿನ ದರ್ಶನ ವ್ಯವಸ್ಥೆಯಲ್ಲಿ ಬದಲಾವಣೆಯಾಗಲಿರುವುದರಿಂದ, ತಿರುಪತಿ ದರ್ಶನಕ್ಕಾಗಿ ಈಗಾಗಲೇ ಅನೇಕ ಜನರು ಕುಟುಂಬ ಸಮೇತ ತಿರುಪತಿಗೆ ಆಗಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ತಿರುಪತಿ ದೇವಸ್ಥಾನಕ್ಕೆ 2024ರಲ್ಲಿ ಭೇಟಿ ನೀಡಿದ ಭಕ್ತರು, ದೇವಸ್ಥಾನಕ್ಕೆ ಬಂದ ಆದಾಯ ಇತ್ಯಾದಿ ವಿವರಗಳನ್ನು ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಬಿಡುಗಡೆ ಮಾಡಿದೆ.

ಟಿಟಿಡಿ ನೀಡಿರುವ ಮಾಹಿತಿಯ ಪ್ರಕಾರ, 2024ರಲ್ಲಿ ಒಟ್ಟು 2.55 ಕೋಟಿ ಭಕ್ತಾದಿಗಳು ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಇದರಿಂದಾಗಿ ಕಾಣಿಕೆ ಹುಂಡಿಯಲ್ಲಿ ದಾಖಲೆಯ 1365 ಕೋಟಿ ರೂಪಾಯಿ ಹಣ ಸಂಗ್ರಹವಾಗಿದೆ ಎಂದು ಮಾಹಿತಿ ನೀಡಿದೆ. ಅದರೊಂದಿಗೆ ಇನ್ನೂ ಕೆಲವರು ಚಿನ್ನ, ಮೌಲ್ಯಯುತ ರತ್ನಗಳು, ವಿದೇಶಿ ಕರೆನ್ಸಿ, ಬೆಲ್ಲ, ತರಕಾರಿ, ಹಾಲು, ತುಪ್ಪ, ಹೊಸ ಧಾನ್ಯ, ದನ, ಭೂಮಿ ಹಾಗೂ ಇನ್ನೂ ಕೆಲವು ವಸ್ತುಗಳನ್ನು ಕಾಣಿಕೆ ರೂಪದಲ್ಲಿ ನೀಡಿದ್ದಾಗಿ ತಿಳಿಸಿದೆ. ಒಟ್ಟು 99 ಲಕ್ಷ ಮಂದಿ ಮುಡಿ ನೀಡಿದ್ದಾಗಿ ತಿಳಿಸಲಾಗಿದೆ.

ಇದು ತಿರುಪತಿ ದೇವಸ್ಥಾನದಲ್ಲಿ ಹಿಂದೆಂದೂ ಸಂಗ್ರಹವಾಗದ ಕಾಣಿಕೆ ಹುಂಡಿ ಮೊತ್ತವಾಗಿದೆ. ಅಂದಾಜು 150 ಕೋಟಿ ರೂಪಾಯಿ ಮೌಲ್ಯದ ಸ್ಥಿರಾಸ್ತಿಯನ್ನು ದಾನವಾಗಿ ದೇವಸ್ಥಾನಕ್ಕೆ ನೀಡಿದ್ದಾರೆ.  2024ರಲ್ಲಿ ವಾರದ ದಿನಗಳಲ್ಲಿ 3.6 ಕೋಟಿ ರೂಪಾಯಿ ಸರಾಸರಿ ಹುಂಡಿ ಕಲೆಕ್ಷನ್‌ ಆಗಿದೆ. ವಾರಾಂತ್ಯದಲ್ಲಿ ಇದರ ಪ್ರಮಾಣ 3.85 ಕೋಟಿ ರೂಪಾಯಿ ಆಗಿದೆ ಎಂದು ಟಿಟಿಡಿ ವಿವರಿಸಿದೆ. ವರ್ಷದ ಕೊನೆಯ ದಿನವಾದ ಡಿಸೆಂಬರ್‌ 31 ರಂದು ದೇವಸ್ಥಾನ 4.10 ಕೋಟಿ ರೂಪಾಯಿ ಹಣವನ್ನು ಕಾಣಿಕೆಯಾಗಿ ಪಡೆದಿದೆ.

ಕಳೆದ ಮೂರು ವರ್ಷಗಳಲ್ಲಿ ಪ್ರತಿದಿನ 70 ಸಾವಿರ ಭಕ್ತಾದಿಗಳಿಗೆ ಮಾತ್ರವೇ ತಿರುಪತಿಯಲ್ಲಿ ದರ್ಶನಕ್ಕೆ ಬಿಡಲಾಗುತ್ತಿತ್ತು. ಇದರಿಂದಾಗಿ ವಾರ್ಷಿಕ ಕಾಣಿಕೆ ಹುಂಡಿ ಆದಾಯ ಅಂದಾಜು 1200 ರೂಪಾಯಿಗಳಷ್ಟು ರೀಚ್‌ ಆಗುತ್ತಿತ್ತು. ಆದರೆ, ಕೋವಿಡ್‌ ನಂತರ, ಪ್ರತಿದಿನ 80 ಸಾವಿರ ಭಕ್ತರಿಗೆ ದರ್ಶನ ವ್ಯವಸ್ಥೆ ಕಲ್ಪಿಸಲಾಗುತ್ತಿತ್ತು. ಇದರಿಂದಾಗಿ ಕಾಣಿಕೆ ಹುಂಡಿಯ ಆದಾಯವೂ ಏರಿಕೆಯಾಗಿದೆ.  2024ರಲ್ಲಿ 6.30 ಕೋಟಿ ಭಕ್ತರಿಗೆ ಅನ್ನಪ್ರಸಾದವನ್ನು ನೀಡಲಾಗಿದೆ. ಇದು ದರ್ಶನಕ್ಕೆ ಬಂದ ಭಕ್ತಾದಿಗಳು ಹಾಗೂ ಬ್ರಹ್ಮೋತ್ಸವಕ್ಕೆ ಬಂದ ಸ್ವಯಂಸೇವಕರ ಡೇಟಾ ಕೂಡ ಸೇರಿದೆ.

ಒಂದು ಗಂಟೆಯಲ್ಲಿ ತಿಮ್ಮಪ್ಪನ ದರ್ಶನ; ಟಿಟಿಡಿ ಆಡಳಿತ ಮಂಡಳಿಯಿಂದ ಹೇಳಿಕೆ ಬಿಡುಗಡೆ

2025ರಲ್ಲಿ ಆದಾಯ ಮತ್ತೆ ಏರಿಕೆ: 2025ರಲ್ಲಿ ದೇವಸ್ಥಾನದ ಆದಾಯ ಮತ್ತಷ್ಟು ಏರಿಕೆ ಆಗಬಹುದು ಎಂದು ಅಂದಾಜಿಸಲಾಗಿದೆ. ಏಕೆಂದರೆ 2025 ರಲ್ಲಿ ವಾರಾಂತ್ಯದಲ್ಲಿ ಅನೇಕ ರಜಾದಿನಗಳು ಸೇರಿಕೊಳ್ಳುತ್ತವೆ ಮತ್ತು ಎರಡು ವೈಕುಂಠ ಏಕಾದಶಿಗಳು ಸೇರಿದಂತೆ ಹಲವಾರು ಪ್ರಮುಖ ಹಬ್ಬಗಳು ನಡೆಯಲಿವೆ. ತಿರುಮಲಕ್ಕೆ ಬರುವ ಭಕ್ತರ ಸಂಖ್ಯೆ ಹಾಗೂ ಅವರ ಮೂಲಕ ಸಿಗುವ ಕಾಣಿಕೆಯಿಂದ ಬರುವ ಆದಾಯ ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಬೇಕು 20 ತಾಸು: ಕಾರಣವೇನು?

Latest Videos
Follow Us:
Download App:
  • android
  • ios