ತಿರುಪತಿ(ಡಿ.13): ತಿರುಮಲದ ವಿಶ್ವಪ್ರಸಿದ್ಧ ವೆಂಕಟೇಶ್ವರ ದೇವಸ್ಥಾನದಲ್ಲಿ ಇನ್ನು ಮುಂದೆ 10 ವರ್ಷದ ಒಳಗಿನ ಮಕ್ಕಳು, 65 ವರ್ಷ ಮೇಲ್ಪಟ್ಟವೃದ್ಧರು ಹಾಗೂ ಗರ್ಭಿಣಿಯರಿಗೂ ದೇವರ ದರ್ಶನಭಾಗ್ಯ ಲಭಿಸಲಿದೆ.

ಕೊರೋನಾ ಲಾಕ್‌ಡೌನ್‌ ಕಾರಣ ಬಂದ್‌ ಆಗಿದ್ದ ದೇವರ ದರ್ಶನ ಜೂನ್‌ನಲ್ಲಿ ಆರಂಭವಾಗಿತ್ತಾದರೂ ಈ ಮೂರೂ ವರ್ಗದವರಿಗೆ ದೇಗುಲದ ಪ್ರವೇಶ ನಿರ್ಬಂಧಿಸಲಾಗಿತ್ತು. ಆರೋಗ್ಯದ ಹಿತದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿತ್ತು. ಆದರೆ ಇವರಿಗೂ ದರ್ಶನ ಅವಕಾಶ ನೀಡುವಂತೆ ಭಕ್ತಗಣದಿಂದ ಒತ್ತಡ ಹೆಚ್ಚಿತ್ತು.

ಇದಕ್ಕೆ ಮಣಿದಿರುವ ತಿರುಪತಿ ತಿರುಮಲ ದೇವಸ್ಥಾನ ಸಮಿತಿ (ಟಿಟಿಡಿ), ಭಕ್ತರು ತಮ್ಮದೇ ‘ರಿಸ್ಕ್‌’ನಲ್ಲಿ ಇನ್ನು ಆಗಮಿಸಬಹುದು. ಆನ್‌ಲೈನ್‌ನಲ್ಲಿ ಮಾತ್ರ ದರ್ಶನ ಟಿಕೆಟ್‌ ಪಡೆಯಬೇಕು. ಕೇಂದ್ರ ಸರ್ಕಾರದ ಕೋವಿಡ್‌-19 ನಿಯಮಗಳಿಗೆ ಬದ್ಧರಾಗಿರಬೇಕು ಎಂದು ಸೂಚಿಸಿದೆ.

ಚಿಕ್ಕಮಕ್ಕಳಿಗೆ ತಿಮ್ಮಪ್ಪನ ಸನ್ನಿಧಿಯಲ್ಲಿ ಅನ್ನಪ್ರಾಶನ, ಕಿವಿ ಚುಚ್ಚಿಸುವಿಕೆ, ಕೇಶಮುಂಡನ- ಇತ್ಯಾದಿ ಸಂಪ್ರದಾಯಗಳನ್ನು ಭಕ್ತರು ಪಾಲಿಸುತ್ತಾರೆ.