ನವದೆಹಲಿ[ಡಿ.27]: ಪೌರತ್ವ ಕಾಯ್ದೆ ತಿದ್ದುಪಡಿ ವಿರೋಧಿಸಿ ಹಿಂಸಾಚಾರ ನಡೆಯುವಂತೆ ಮಾಡಿದ ‘ತುಕ್ಡೇ ತುಕ್ಡೇ ಗ್ಯಾಂಗ್‌’ಗಳನ್ನು ಶಿಕ್ಷಿಸುವ ಸಮಯ ಬಂದಿದೆ ಎಂದು ಹೇಳುವ ಮೂಲಕ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಪ್ರತಿಪಕ್ಷಗಳು ಹಾಗೂ ಎಡಪಂಥೀಯ ವಿಚಾರಧಾರೆಯ ಬುದ್ಧಿಜೀವಿಗಳ ವಿರುದ್ಧ ಹರಿಹಾಯ್ದಿದ್ದಾರೆ.

ಇನ್ನೆರಡು ತಿಂಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಬೇಕಾಗಿರುವ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸರ್ಕಾರಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿ ಗುರುವಾರ ಮಾತನಾಡಿದ ಅವರು, ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಕುರಿತು ಕಾಂಗ್ರೆಸ್‌ ನೇತೃತ್ವದಲ್ಲಿ ಪ್ರತಿಪಕ್ಷಗಳು ಗೊಂದಲ ಸೃಷ್ಟಿಸಿದವು. ಜನರನ್ನು ದಾರಿ ತಪ್ಪಿಸಿದವು. ತನ್ಮೂಲಕ ದೆಹಲಿಯ ಶಾಂತಿಯ ವಾತಾವರಣವನ್ನೇ ಹಾಳು ಮಾಡಿದವು ಎಂದು ಕಿಡಿಕಾರಿದರು.

ಸಂಸತ್ತಿನಲ್ಲಿ ಸಿಎಎ ಚರ್ಚೆಯಾದಾಗ ಪ್ರತಿಪಕ್ಷಗಳು ಸಂಸತ್ತಿನಲ್ಲಿ ಏಕೆ ಮೌನದಿಂದ ಇದ್ದವು? ಮಸೂದೆ ಅಂಗೀಕಾರವಾದ ಬಳಿಕ ಸುಳ್ಳು ಸುದ್ದಿಗಳನ್ನು ಹಬ್ಬಿಸಲು ಏಕೆ ಆರಂಭಿಸಿದವು ಎಂದು ಕೇಳಿದರು.

ಕೇಜ್ರಿವಾಲ್‌ ನೇತೃತ್ವದ ದೆಹಲಿ ಸರ್ಕಾರ ಅಧಿಕಾರದಿಂದ ಕೆಳಗಿಳಿಯುವ ಸಮಯ ಬಂದಿದೆ. ದೆಹಲಿಯಲ್ಲಿ ಕಮಲ ಅರಳಲಿದೆ. ದೆಹಲಿ ಜನ ಲೋಕಸಭೆ ಚುನಾವಣೆಯಲ್ಲಿ ಎಲ್ಲ 7 ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲಿಸಿದ್ದೀರಿ. ಮುಂದಿನ ಚುನಾವಣೆಯಲ್ಲಿ ರಾಷ್ಟ್ರ ರಾಜಧಾನಿಯ ಅಭಿವೃದ್ಧಿ ದೃಷ್ಟಿಯಿಂದ ಬಿಜೆಪಿ ಶಾಸಕರನ್ನು ಗೆಲ್ಲಿಸಬೇಕಾಗಿದೆ ಎಂದು ತಿಳಿಸಿದರು.

ದೆಹಲಿಯಲ್ಲಿ ಕೇಜ್ರಿವಾಲ್‌ ಏನೂ ಕೆಲಸ ಮಾಡುತ್ತಿಲ್ಲ. ಬದಲಿಗೆ ಕೇಂದ್ರ ಸರ್ಕಾರ ಮಾಡಿರುವ ಕೆಲಸಗಳಿಗೆ ತಮ್ಮ ಹೆಸರು ಹಾಕಿಕೊಂಡು, ಶ್ರೇಯವನ್ನು ಕದಿಯುತ್ತಿದ್ದಾರೆ ಎಂದು ಹರಿಹಾಯ್ದರು.