ನವದೆಹಲಿ(ಮಾ.01): ಫ್ರಾನ್ಸ್‌ನ ಡಸಾಲ್ಟ್‌ ಕಂಪನಿ ಅಭಿವೃದ್ಧಿಪಡಿಸಿರುವ 3 ರಫೇಲ್‌ ಯುದ್ಧವಿಮಾನಗಳು ಬುಧವಾರ ರಾತ್ರಿ ಭಾರತೀಯ ವಾಯುಪಡೆಯ ಜಾಮ್‌ನಗರ ವಾಯುನೆಲೆಗೆ ಬಂದಿಳಿದಿವೆ.

ಈ ಮೂಲಕ ವಾಯುಪಡೆ ತೆಕ್ಕೆಯಲ್ಲಿರುವ ರಫೇಲ್‌ ಯುದ್ಧ ವಿಮಾನಗಳ ಸಂಖ್ಯೆ 14ಕ್ಕೆ ಏರಿಕೆಯಾಗಿದ್ದು, ಇದರೊಂದಿಗೆ ಭಾರತೀಯ ಸೇನೆಯ ಸಾಮರ್ಥ್ಯ ಇನ್ನಷ್ಟುಬಲಗೊಂಡಿದೆ.

ಮಾ.31ರಂದು ಫ್ರಾನ್ಸ್‌ನಿಂದ ಹೊರಟ ವಿಮಾನಗಳು ನೇರವಾಗಿ ತಡೆರಹಿತ ಹಾರಾಟದ ಮೂಲಕ ಭಾರತಕ್ಕೆ ಬಂದಿಳಿದಿದ್ದು, ಭಾರತದ ಮಿತ್ರ ರಾಷ್ಟ್ರ ಯುಎಇ ಆಗಸದಲ್ಲೇ ಇಂಧನ ಭರ್ತಿ ಮಾಡಿಕೊಟ್ಟಿದೆ ಎಂದು ವರದಿಯಾಗಿದೆ.

2016ರಲ್ಲಿ ಭಾರತ ಸರ್ಕಾರ ಫ್ರಾನ್ಸ್‌ನಿಂದ 36 ರಫೇಲ್‌ ಯುದ್ಧ ವಿಮಾನ ಖರೀದಿಗೆ ಒಪ್ಪಂದ ಮಾಡಿಕೊಂಡಿತ್ತು. ಡಬಲ್‌ ಎಂಜಿನ್‌ ಹೊಂದಿರುವ ರಫೇಲ್‌ ಯುದ್ಧ ವಿಮಾನಗಳು ಯಾವುದೇ ಸ್ಥಿತಿಯಲ್ಲೂ ಅತ್ಯಂತ ನಿಖರವಾಗಿ ಕಾರ್ಯಾಚರಣೆ ನಡೆಸುವ ಸಾಮರ್ಥ್ಯ ಹೊಂದಿವೆ.