ರಾಮ ಮಂದಿರದಲ್ಲಿ 3 ಲಕ್ಷ ಭಕ್ತರಿಂದ ಬಾಲರಾಮನ ದರ್ಶನ, ದಾಖಲೆ ಬರೆದ ಅಯೋಧ್ಯೆ!
500 ವರ್ಷಗಳ ಬಳಿಕ ರಾಮಜನ್ಮಭೂಮಿಯಲ್ಲಿ ಭವ್ಯ ರಾಮ ಮಂದಿರ ನಿರ್ಮಾಣವಾಗಿ ರಾಮಲಲ್ಲಾ ಪ್ರಾಣಪ್ರತಿಷ್ಠೆಯಾಗಿದೆ. ಇಂದಿನಿಂದ ಭಕ್ತರ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ. ಒಂದೇ ದಿನ ಬರೋಬ್ಬರಿ 3 ಲಕ್ಷ ರಾಮ ಭಕ್ತರು ಬಾಲರಾಮನ ದರ್ಶನ ಪಡೆದಿದ್ದಾರೆ.
ಆಯೋಧ್ಯೆ(ಜ.23) ಭವ್ಯ ರಾಮ ಮಂದಿರದ ಪ್ರಾಣಪ್ರತಿಷ್ಠೆ ಸರಾಗವಾಗಿ ನಡೆದಿದೆ. ಪ್ರಧಾನಿ ಮೋದಿ ತಮ್ಮ ಅಮೃತಹಸ್ತದಿಂದ ರಾಮಲಲ್ಲಾ ಪ್ರಾಣಪ್ರತಿಷ್ಠೆ ನೆರವೇರಿಸಿದ್ದಾರೆ. ಪ್ರಾಣಪ್ರತಿಷ್ಠೆ ದಿನ(ಜ.22) ಆಹ್ವಾನಿತ ಗಣ್ಯರು ಸೇರಿದಂತೆ ಸಾವಿರಾರು ಮಂದಿ ರಾಮ ಮಂದಿರದಲ್ಲ ಬಾಲರಾಮನ ದರ್ಶನ ಪಡೆದಿದ್ದಾರೆ. ರಾಮಜನ್ಮಭೂಮಿ ಟ್ರಸ್ಟ್ ಮೊದಲೇ ಘೋಷಿಸಿದಂತೆ ಜನವರಿ 23ರಿಂದ ಮಂದಿರ ಸಾರ್ವಜನಿಕ ಪ್ರವೇಶಕ್ಕೆ ಮುಕ್ತವಾಗಿದೆ. ಇಂದು ಬೆಳಗ್ಗೆಯಿಂದ ಆಯೋಧ್ಯೆಗೆ ಲಕ್ಷಾಂತರ ಭಕ್ತರು ಆಗಮಿಸಿದ್ದಾರೆ. ಬೆಳಗ್ಗೆಯಿಂದ ಇದುವರೆಗೆ ಭವ್ಯ ರಾಮ ಮಂದಿರಕ್ಕೆ ತೆರಳಿದ ರಾಮಲಲ್ಲಾ ದರ್ಶನ ಪಡೆದ ಭಕ್ತರ ಸಂಖ್ಯೆ 3 ಲಕ್ಷ ದಾಟಿದೆ. ಈ ಮೂಲಕ ಅತೀ ಕಡಿಮೆ ಅವಧಿಯಲ್ಲಿ ಗರಿಷ್ಠ ಭಕ್ತರಿಗೆ ದರ್ಶನ ನೀಡಿದ ಹೆಗ್ಗಳಿಕೆಗೆ ಬಾಲರಾಮ ಪಾತ್ರರಾಗಿದ್ದಾನೆ.
ಆಯೋಧ್ಯೆಗೆ ಭಕ್ತರು ದಂಡೇ ಆಗಮಿಸುತ್ತಿದೆ. 3 ಲಕ್ಷ ಭಕ್ತರು ಶ್ರೀ ರಾಮಲಲ್ಲಾ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದ್ದಾರೆ. ಇಷ್ಟೇ ಸಂಖ್ಯೆಯ ಭಕ್ತರು ದರ್ಶನಕ್ಕಾಗಿ ಕ್ಯೂನಲ್ಲಿ ನಿಂತಿದ್ದಾರೆ. ಲಕ್ಷಾಂತರ ಭಕ್ತರು ಆಯೋಧ್ಯೆಗೆ ಆಗಮಿಸಿರುವ ಕಾರಣ ಜನಸಂದಣಿ ಹೆಚ್ಚಾಗಿದೆ. ಹೀಗಾಗಿ ಭಕ್ತರ ಶಾಂತಿ ಹಾಗು ಸಹನೆಯಿಂದ ರಾಮಲಲ್ಲಾ ದರ್ಶನ ಪಡೆಯಲು ಟ್ರಸ್ಟ್ ವಿನಂತಿಸಿದೆ.
ಉಪವಾಸ ಅಂತ್ಯಗೊಳಿಸಲು ಏನಾದರು ಕೊಡುವುದಿದ್ದರೆ..,ಮೋದಿ ಮನವಿಗೆ ಭಾವುಕರಾದ ಸ್ವಾಮೀಜಿ!
ಪ್ರತಿ ದಿನ ರಾಮಮಂದಿರ ಬೆಳಗ್ಗೆ 7 ಗಂಟೆಗೆ ಭಕ್ತರ ದರ್ಶನಕ್ಕೆ ತೆರೆದುಕೊಳ್ಳಲಿದೆ. ಬೆಳಗ್ಗೆ 7 ರಿಂದ 11.30ರ ವರೆಗೆ ವಿಶೇಷ ಪೂಜೆ, ಮಂಗಳಾರತಿ, ಅಭಿಷೇಖಗಳು ನಡೆಯಲಿದೆ. ಬಳಿಕ 2 ಗಂಟೆಯಿಂದ ಸಂಜೆ 7 ಗಂಟೆವರೆಗೆ ಭಕ್ತರ ದರ್ಶನಕ್ಕೆ ಅವಕಾಶವಿದೆ.
ಜನವರಿ 22ರಂದು ಪ್ರಧಾನಿ ಮೋದಿ, ಛತ್ರ ಹಾಗೂ ಕೆಂಪು ವಸ್ತ್ರ ಹಿಡಿದು ಮಧ್ಯಾಹ್ನ 12 ಗಂಟೆಗೆ ರಾಮಜನ್ಮಭೂಮಿ ಪ್ರವೇಶಿಸಿದ್ದಾರೆ. ನಂತರ ಕಾಶಿಯ ಗಣೇಶ್ವರ ಶಾಸ್ತ್ರಿಗಳು, ರಾಮಮಂದಿರ ಟ್ರಸ್ಟಿ ಆದ ಕರ್ನಾಟಕದ ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥರು, ವಿವಿಧ ಸಾಧು-ಸಂತರು, ಪುರೋಹಿತರ ಸಮ್ಮುಖದಲ್ಲಿ 12.20ರ ಸುಮಾರಿಗೆ ಪ್ರತಿಷ್ಠಾಪನಾ ವಿಧಿಗಳು ಆರಂಭವಾದವು. ಮೋದಿ ಅವರು ಪ್ರತಿಷ್ಠಾಪನೆಯ ಯಜಮಾನತ್ವ ವಹಿಸಿದ್ದರಿಂದ ಮಣೆಯ ಮೇಲೆ ಅವರನ್ನು ಕೂರಿಸಿ ಪ್ರತಿಷ್ಠಾಪನೆಯ ಸಕಲ್ಪ ನೆರವೇರಿಸಲಾಯಿತು.
ಟೆಂಟ್ ಅಲ್ಲ, ಭವ್ಯ ಮಂದಿರದಲ್ಲಿ ಶ್ರೀರಾಮನ ದರ್ಶನ, ಮಂದಿರ ಲೋಕಾರ್ಪಣೆಗೊಳಿಸಿ ಮೋದಿ ಭಾಷಣ!
ನಂತರ 12.30ಕ್ಕೆ ಸರಿಯಾಗಿ 84 ಸೆಕೆಂಡಿನ ಪ್ರಾಣಪ್ರತಿಷ್ಠಾಪನೆಯ ಮುಹೂರ್ತ ಆರಂಭವಾಯಿತು. ರಾಮನ ಕಣ್ಣಿಗೆ ಕಟ್ಟಿದ್ದ ಪಟ್ಟಿಯನ್ನು ತೆರೆದು ಮಂತ್ರಘೋಷಗಳ ನಡುವೆ ಪ್ರತಿಷ್ಠಾಪನೆಯನ್ನು ನೆರವೇರಿಸಲಾಯಿತು. ಆಗ ವೇದಘೋಷಗಳು ಹಾಗೂ ಶಂಖನಾದ ಮೊಳಗಿದವು. ಆಗಸದಲ್ಲಿ ಹೆಲಿಕಾಪ್ಟರ್ ಮೂಲಕ ರಾಮಮಂದಿರದ ಮೇಲೆ ಪುಷ್ಪವೃಷ್ಟಿಗರೆಯಲಾಯಿತು. ಭಾರತದ ಬಹುಪಾಲು ಜನರು 500 ವರ್ಷದಿಂದ ರಾಮಜನ್ಮಭೂಮಿಯಲ್ಲಿ ರಾಮಲಲ್ಲಾನನ್ನು ಕಾಣಬೇಕು ಎಂದು ಕಂಡಿದ್ದ ಕನಸು ನನಸಾಯಿತು.