ಬಸ್ ಕಂಡಕ್ಟರ್ ಅನೂಪ್ ಜೊತೆ ಓಡಿಹೋಗಿ ಸುದ್ದಿಯಾಗಿದ್ದ ಯೂಟ್ಯೂಬರ್ ಅಖಿಲ್ ಪತ್ನಿ ಮೇಘಾ ನಾಯರ್, ತನ್ನ ನಡೆಯ ಬಗ್ಗೆ ಕೊನೆಗೂ ಸ್ಪಷ್ಟನೆ ನೀಡಿದ್ದಾರೆ. ಪತಿ ನೀಡುತ್ತಿದ್ದ ಕಿರುಕುಳ ಮತ್ತು ಅಕ್ರಮ ಸಂಬಂಧಗಳಿಂದ ಬೇಸತ್ತು ಹೊರಬಂದೆ ಎಂದು ಹೇಳಿದ್ದಾರೆ. ಕಂಡಕ್ಟರ್ ಅನ್ನೂ ಬಿಟ್ಟಿದ್ದಾರೆ ಎಂಬ ವದಂತಿಗಳಿಗೆ ಪ್ರತಿಕ್ರಿಯಿಸಿರುವ ಅವರು, ಪ್ರಸ್ತುತ ತಂದೆಯ ಮನೆಯಲ್ಲಿದ್ದರೂ ಅನೂಪ್ ಜೊತೆಗಿನ ಸಂಬಂಧ ಮುಂದುವರಿದಿದೆ ಎಂದು ತಿಳಿಸಿದ್ದಾರೆ.
ಸೋಷಿಯಲ್ ಮೀಡಿಯಾ ಜಗತ್ತಿನಲ್ಲಿ ಸಂಚಲನ ಸೃಷ್ಟಿಸಿದ್ದ ಯೂಟ್ಯೂಬರ್ ಅಖಿಲ್ ಅವರ ಪತ್ನಿ ಮೇಘಾ ನಾಯರ್ ಕಥೆ ಈಗ ಮತ್ತೊಂದು ತಿರುವು ಪಡೆದುಕೊಂಡಿದೆ. ಇತ್ತೀಚೆಗಷ್ಟೇ ಅರ್ಧರಾತ್ರಿಯಲ್ಲಿ ತನ್ನ ಪತಿಯನ್ನು ಬಿಟ್ಟು ಬಸ್ ಕಂಡಕ್ಟರ್ ಜೊತೆ ಓಡಿಹೋಗಿದ್ದ ಮೇಘಾ, ಈಗ ಆ ಕಂಡಕ್ಟರ್ ಅನ್ನೂ ಬಿಟ್ಟು ತಂದೆಯ ಮನೆ ಸೇರಿದ್ದಾರಾ ಎಂಬ ಪ್ರಶ್ನೆ ನೆಟ್ಟಿಗರಲ್ಲಿ ಕಾಡತೊಡಗಿದೆ. ಈ ಬಗ್ಗೆ ಮೇಘಾ ಕೊನೆಗೂ ಸ್ಪಷ್ಟನೆ ನೀಡಿದ್ದಾರೆ.
ಅಸಲಿಗೆ ನಡೆದಿದ್ದೇನು?
ಪ್ರಸಿದ್ಧ ಯೂಟ್ಯೂಬರ್ ಅಖಿಲ್ ಮತ್ತು ಮೇಘಾ ನಾಯರ್ ಪ್ರೀತಿಸಿ ಮದುವೆಯಾಗಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಇವರಿಗೆ 5 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಇದ್ದರು. ಇವರಿಬ್ಬರ ಕಾಮಿಡಿ ರೀಲ್ಸ್ ಮತ್ತು ಸುಂದರ ಸಂಸಾರವನ್ನು ನೋಡಿ ಅಭಿಮಾನಿಗಳು ಮೆಚ್ಚಿಕೊಂಡಿದ್ದರು. ಕೆಲ ದಿನಗಳ ಹಿಂದೆ ಮೇಘಾ ತನ್ನ ಪತಿ ಅಖಿಲ್‌ನನ್ನು ಬಿಟ್ಟು ಅನೂಪ್ ಎಂಬ ಬಸ್ ಕಂಡಕ್ಟರ್ ಜೊತೆ ಅರ್ಧರಾತ್ರಿ ಓಡಿಹೋಗಿದ್ದರು. ಇದಕ್ಕೆ ಸಂಬಂಧಿಸಿದ ಸಿಸಿಟಿವಿ ಫೂಟೇಜ್ ವೈರಲ್ ಆಗಿ ಇಡೀ ದೇಶಾದ್ಯಂತ ಸುದ್ದಿಯಾಗಿತ್ತು.
ಕಂಡಕ್ಟರ್ ಜೊತೆ ಓಡಿಹೋಗಲು ಕಾರಣವೇನು?
ಪತಿ ಅಖಿಲ್ ವಿರುದ್ಧ ಗಂಭೀರ ಆರೋಪ ಮಾಡಿರುವ ಮೇಘಾ, ಅಖಿಲ್ ನನಗೆ ಸರಿಯಾದ ಪ್ರೀತಿ ನೀಡುತ್ತಿರಲಿಲ್ಲ. ಸಣ್ಣ ಪುಟ್ಟ ವಿಷಯಗಳಿಗೂ ನನ್ನ ಜೊತೆ ಜಗಳ ಆಡುತ್ತಿದ್ದ ಮತ್ತು ಕಿರುಕುಳ ನೀಡುತ್ತಿದ್ದ. ಅಷ್ಟೇ ಅಲ್ಲದೆ, ಅಖಿಲ್‌ಗೆ ಬೇರೆ ಯುವತಿಯರ ಜೊತೆಯೂ ಸಂಬಂಧವಿತ್ತು. ನಾನೇ ಅಲ್ಲಿಂದ ಹೊರಬರದಿದ್ದರೆ, ಕೆಲವೇ ದಿನಗಳಲ್ಲಿ ಅಖಿಲ್ ನನ್ನನ್ನು ಮನೆಯಿಂದ ಹೊರಹಾಕುತ್ತಿದ್ದ. ಅದಕ್ಕೆ ನಾನೇ ಮೊದಲೇ ಹೊರಬಂದೆ ಎಂದು ಹೇಳಿದ್ದಾರೆ.
ಇದೇ ಸಮಯದಲ್ಲಿ ಬಸ್ ಕಂಡಕ್ಟರ್ ಅನೂಪ್ ಮೇಘಾ ಅವರಿಗೆ ಪ್ರೀತಿ ಮತ್ತು ಕಾಳಜಿ ತೋರಿಸಿದ್ದರಿಂದ ಅವರ ಜೊತೆ ಜೀವನ ನಡೆಸಲು ನಿರ್ಧರಿಸಿ ಓಡಿಹೋಗಿದ್ದಾಗಿ ಮೇಘಾ ತಿಳಿಸಿದ್ದಾರೆ. ಅವರು ಕಂಡಕ್ಟರ್ ಆಗಿರಲಿ ಅಥವಾ ಕ್ಲೀನರ್ ಆಗಿರಲಿ, ಅವರ ಜೊತೆಯೇ ಇರುತ್ತೇನೆ ಎಂದು ಈ ಹಿಂದೆ ಅವರು ವಿಡಿಯೋ ಪೋಸ್ಟ್ ಮಾಡಿದ್ದರು.
ಈಗ ಕಂಡಕ್ಟರ್ ಅನ್ನೂ ಬಿಟ್ಟರಾ ಮೇಘಾ?
ಇತ್ತೀಚೆಗೆ ಮೇಘಾ ತಾನು ತಂದೆಯ ಮನೆಯಲ್ಲಿರುವುದಾಗಿ ಪೋಸ್ಟ್ ಹಾಕಿದ್ದರು. ಇದನ್ನು ನೋಡಿದ ನೆಟ್ಟಿಗರು, ಯೂಟ್ಯೂಬರ್ ಆಯ್ತು, ಈಗ ಕಂಡಕ್ಟರ್ ಅನ್ನೂ ಬಿಟ್ಟು ಬಂದೆಯಾ? ಎಂದು ಕಾಮೆಂಟ್ ಮಾಡಿದ್ದಾರೆ. ಇದಕ್ಕೆ ಖಾರವಾಗಿಯೇ ಪ್ರತಿಕ್ರಿಯಿಸಿದ ಮೇಘಾ, ತಾವು ಕಂಡಕ್ಟರ್ ಅನೂಪ್‌ನನ್ನು ಬಿಟ್ಟಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಅನೂಪ್ ಜೊತೆ ಓಡಿಹೋದ ಮೇಲೆ 10 ದಿನಗಳ ಕಾಲ ಅವರೊಂದಿಗೇ ಕಳೆದಿದ್ದೇನೆ. ನಂತರ ತಂದೆಯನ್ನು ಭೇಟಿ ಮಾಡಿ ಈಗ ಅವರ ಮನೆಯಲ್ಲಿದ್ದೇನೆ. ಇನ್ನು ಅಖಿಲ್ ಮನೆಯಿಂದ ಹಣ ಮತ್ತು ಬಂಗಾರ ಕಳವು ಮಾಡಿದ್ದೇನೆ ಎನ್ನುವುದು ಸುಳ್ಳು. ನಾನು ಕೇವಲ ನನ್ನ ಬಂಗಾರವನ್ನು ಮಾತ್ರ ತೆಗೆದುಕೊಂಡು ಬಂದಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದಾರೆ. ಒಟ್ಟಾರೆಯಾಗಿ, ಸುಂದರ ಸಂಸಾರ ಹೊಂದಿದ್ದ ಯೂಟ್ಯೂಬರ್ ದಂಪತಿಗಳ ಜೀವನ ಈಗ ಬೀದಿಗೆ ಬಂದಿದ್ದು, ಕಾನೂನಾತ್ಮಕವಾಗಿ ಅವರು ಬೇರೆಯಾಗಿದ್ದಾರೆಯೇ ಎಂಬುದು ಇನ್ನಷ್ಟೇ ತಿಳಿದುಬರಬೇಕಿದೆ.


