* ಸವಲತ್ತು ಹೊಂದಿದ ಮತ್ತು ದುರ್ಬಲರಿಗೂ ನ್ಯಾಯ ಸಿಗಬೇಕು* ಠಾಣೆಗಳಲ್ಲೇ ಮಾನವ ಹಕ್ಕುಗಳಿಗೆ ಅತಿಹೆಚ್ಚು ಧಕ್ಕೆ

ನವದೆಹಲಿ(ಆ.09): ದೇಶದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಕೈದಿಗಳ ಮೇಲೆ ಇನ್ನೂ ಚಿತ್ರಹಿಂಸೆ ಮತ್ತು ಪೊಲೀಸರಿಂದ ದೌರ್ಜನ್ಯಗಳು ನಡೆಯುತ್ತಲೇ ಇವೆ. ಹೀಗಾಗಿ ಪೊಲೀಸ್‌ ಠಾಣೆಗಳಲ್ಲೇ ಅತಿಹೆಚ್ಚು ಮಾನವ ಹಕ್ಕುಗಳಿಗೆ ಧಕ್ಕೆಯಾಗುತ್ತಿದೆ ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌.ವಿ ರಮಣ ಕಳವಳ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಈ ಸಂಬಂಧ ರಾಷ್ಟ್ರಾದ್ಯಂತ ಇರುವ ಪೊಲೀಸ್‌ ಅಧಿಕಾರಿಗಳಿಗೆ ಸಂವೇದನೆ ಮೂಡಿಸಬೇಕು ಎಂದು ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಸೂಚನೆ ನೀಡಿದ್ದಾರೆ.

ಭಾನುವಾರ ವಿಜ್ಞಾನ ಭವನದಲ್ಲಿ ನಡೆದ ಮೊಬೈಲ್‌ ಕಾನೂನು ಸೇವೆಗಳ ಅಪ್ಲಿಕೇಷನ್‌ ಉದ್ಘಾಟನೆ ಮತ್ತು ಕಾನೂನು ಸೇವೆಗಳ ಪ್ರಾಧಿಕಾರದ ದೂರದೃಷ್ಟಿಮತ್ತು ಯೋಜನೆ ಕುರಿತಾಗಿ ಮಾತನಾಡಿದ ಅವರು, ನ್ಯಾಯ ಒದಗಿಸುವ ಪ್ರಕ್ರಿಯೆಯು ಮುಗಿಯಲಾರದ ಒಂದು ಮಿಷನ್‌ ಆಗಿದೆ.

ಕಾನೂನಿನಿಂದ ನಿಯಂತ್ರಿಸಲ್ಪಡುವ ಸಮಾಜವಾದ್ದರಿಂದ ಸವಲತ್ತು ಹೊಂದಿದ ಮತ್ತು ಅತ್ಯಂತ ದುರ್ಬಲರ ನಡುವೆ ನ್ಯಾಯದ ಪ್ರವೇಶದ ಅಂತರವನ್ನು ಕಡಿಮೆಗೊಳಿಸಬೇಕು. ನ್ಯಾಯಾಂಗ ನಾಗರಿಕರ ನಂಬಿಕೆಯನ್ನು ಗಳಿಸಿಕೊಳ್ಳಬೇಕು. ನಾವು ಅವರಿಗಾಗಿ ಕಾರ್ಯ ನಿರ್ವಹಿಸುತ್ತಿದ್ದೇವೆ ಎಂಬ ಮನೋಭಾವನೆ ಎಲ್ಲರಲ್ಲೂ ಮೂಡಬೇಕು. ಅತ್ಯಂತ ದೀರ್ಘ ಕಾಲದವರೆಗೆ ದುರ್ಬಲ ನಾಗರಿಕರು ನ್ಯಾಯಾಂಗ ವ್ಯವಸ್ಥೆಯಿಂದ ಹೊರಗೆ ಉಳಿದಿದ್ದರು ಎಂದು ಹೇಳಿದರು.