ಕೊಯಮತ್ತೂರು[ಡಿ.26]: ಮಳೆಯಿಂದಾಗಿ ಗೋಡೆ ಕುಸಿದು 17 ಮಂದಿ ಸಾವನ್ನಪ್ಪಿದ ಘಟನೆಗೆ ಸಂಬಂಧ ಮಾಲೀಕನ ವಿರುದ್ಧ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದೇ ಇರುವುದನ್ನು ವಿರೋಧಿಸಿ ತಮಿಳುನಾಡಿನ ಕೊಯಮತ್ತೂರಿನಲ್ಲಿ 3000 ಮಂದಿ ದಲಿತರು ಇಸ್ಲಾಂಗೆ ಮತಾಂತರಗೊಳ್ಳಲು ನಿರ್ಧರಿಸಿದ್ದಾರೆ.

ದಲಿತರನ್ನು ಹಿಂದು ಧರ್ಮದಲ್ಲಿ ಕೀಳಾಗಿ ನಡೆಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿರುವ ನಾಡುರ್‌ ನಿವಾಸಿಗಳು ಮತ್ತು ತಮಿಳ್‌ ಪುಲಿಗಲ್‌ ಕಚಿ ಸಮುದಾಯದ ಸದಸ್ಯರು ತಾವು ಇಸ್ಲಾಂಗೆ ಮತಾಂತರಗೊಳ್ಳುತ್ತಿರುವುದಾಗಿ ಪ್ರಕಟಿಸಿದ್ದಾರೆ. ಮೊದಲ ಹಂತವಾಗಿ ಜ.5ರಂದು 100 ಮಂದಿ ಇಸ್ಲಾಂಗೆ ಮತಾಂತರಗೊಳ್ಳಲಿದ್ದಾರೆ ಎಂದು ತಮಿಳ್‌ ಪುಲಿಗಲ್‌ ಕಚಿ ಪ್ರಧಾನ ಕಾರ್ಯದರ್ಶಿ ಎಂ. ಇಲವೆನಿಲ್‌ ಹೇಳಿದ್ದಾರೆ.

ಡಿ.2ರಂದು ನಾಡುರ್‌ ಗ್ರಾಮದಲ್ಲಿ ಮನೆಯೊಂದರ ಗೋಡೆ ಕುಸಿದು 17 ಮಂದಿ ಸಾವಿಗೀಡಾಗಿದ್ದರು. ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯ ಅಡಿಯಲ್ಲಿ ಗೋಡೆ ಕುಸಿದ ಮನೆಯ ಮಾಲೀಕ ಶಿವಸುಬ್ರಮಣಿಯನ್‌ ವಿರುದ್ಧ ಕ್ರಮ ಕೈಗೊಳ್ಳಲು ಅವಕಾಶ ಇದ್ದರೂ ಪ್ರಕರಣ ದಾಖಲಾಗಿಲ್ಲ ಎಂದು ದಲಿತರು ಆರೋಪಿಸಿದ್ದಾರೆ.