Asianet Suvarna News Asianet Suvarna News

ಕನಿಮೋಳಿಗೆ 8ನೇ ತರಗತಿ ಓದಿದ ನಾಟಿ ವೈದ್ಯನ ಪೈಪೋಟಿ

ತಮಿಳುನಾಡು ರಾಜಕಾರಣದ ಪಿತಾಮಹ, ಕರುಣಾನಿಧಿಯ ಅವರ ಪುತ್ರಿ ಕನಿಮೋಳಿ ತೂತ್ತುಕುಡಿ ಕ್ಷೇತ್ರದಲ್ಲಿ 2ನೇ ಬಾರಿಗೆ ಸ್ಪರ್ಧೆಗೆ ಸಜ್ಜಾಗಿದ್ದಾರೆ. ಅವರಿಗೆ ಎಐಎಡಿಎಂಕೆಯ ಅಭ್ಯರ್ಥಿಯಾಗಿರುವ ನಾಟಿವೈದ್ಯ ಶಿವಸ್ವಾಮಿ ವೇಲುಮಣಿ ಪ್ರಬಲ ಸ್ಪರ್ಧೆ ನೀಡುತ್ತಿದ್ದಾರೆ.

Thoothukudi Lok sabha Constituency The current DMK MP Kanimozhi is competing with the 8th standard educated Nati Vaidya akb
Author
First Published Apr 1, 2024, 8:48 AM IST

ತಮಿಳುನಾಡು ರಾಜಕಾರಣದ ಪಿತಾಮಹ, ಕರುಣಾನಿಧಿಯ ಅವರ ಪುತ್ರಿ ಕನಿಮೋಳಿ ತೂತ್ತುಕುಡಿ ಕ್ಷೇತ್ರದಲ್ಲಿ 2ನೇ ಬಾರಿಗೆ ಸ್ಪರ್ಧೆಗೆ ಸಜ್ಜಾಗಿದ್ದಾರೆ. ಅವರಿಗೆ ಎಐಎಡಿಎಂಕೆಯ ಅಭ್ಯರ್ಥಿಯಾಗಿರುವ ನಾಟಿವೈದ್ಯ ಶಿವಸ್ವಾಮಿ ವೇಲುಮಣಿ ಪ್ರಬಲ ಸ್ಪರ್ಧೆ ನೀಡುತ್ತಿದ್ದಾರೆ. ಕಾಂಗ್ರೆಸ್-ಮೂಪನಾರ್ ಮೈತ್ರಿ ಅಭ್ಯರ್ಥಿ ವಿಜಯ ಸೀಲನ್ ಕಣಕ್ಕಿಳಿದಿದ್ದಾರೆ. 2009ರಲ್ಲಷ್ಟೇ ಹೊಸದಾಗಿ ಸೃಷ್ಟಿಯಾದ ಈ ಕ್ಷೇತ್ರದಲ್ಲಿ 14 ಲಕ್ಷ ಮತದಾರರು ಇದ್ದಾರೆ. 2 ಬಾರಿ ಡಿಎಂಕೆ, 1 ಬಾರಿ ಎಐಎಡಿಎಂಕೆ ಕ್ಷೇತ್ರದಲ್ಲಿ ಗೆದ್ದಿದೆ. ಇಲ್ಲಿ 6 ವಿಧಾನಸಭೆ ಕ್ಷೇತ್ರಗಳಿದ್ದು 5 ಡಿಎಂಕೆ, 1 ರಲ್ಲಿ ಎಐಡಿಎಂಕೆ ಇದೆ.

ಮೊದಲ ಗೆಲುವು: ಕನಿಮೋಳಿ, 2019ರ ಚುನಾವಣೆಯಲ್ಲಿ ಮೊದಲ ಬಾರಿಗೆ ಲೋಕ ಸಭಾ ಚುನಾವಣೆಗೆ ಸ್ಪರ್ಧಿಸಿ ಬಿಜೆಪಿಯ ತಮಿಳ್‌ಸಾಯ್ ಸೌಂದರರಾಜನ್ ವಿರುದ್ಧ ಭರ್ಜರಿ ಜಯ ಸಾಧಿಸಿದ್ದರು. ಕನಿಮೋಳಿ ಅವರು ಜನತೆಯ ಕೈಗೆ ಸುಲಭ ವಾಗಿ ಸಿಗುವುದಿಲ್ಲ ಎಂಬ ಆರೋಪ ಅವರ ಮೇಲಿದ್ದು ಚುನಾವಣೆ ಗೆಲುವಿಗೆ ತೊಡಕಾಗುವ ಸಾಧ್ಯತೆ ಇದೆ.  ಆದಾಗ್ಯೂ ತಮಿಳುನಾಡಿನಲ್ಲಿ ಅವರದೇ ಸರ್ಕಾರವಿದ್ದು, ಕ್ಷೇತ್ರಕ್ಕೆ ರಸ್ತೆ ಒಂದಷ್ಟು ಕೆಲಸಗಳನ್ನು ಮಾಡಿಸಿರುವುದು ಅವರ ಕೈಹಿಡಿಯುವ ಸಾಧ್ಯತೆ ಹೆಚ್ಚಿದೆ.

ತಮಿಳ್ನಾಡಲ್ಲಿ ಈ ಬಾರಿ ಬಿಜೆಪಿ ಮ್ಯಾಜಿಕ್‌ ಮಾಡುತ್ತಾ?

ಎಐಎಡಿಎಂಕೆ ಅಚ್ಚರಿ ಅಭ್ಯರ್ಥಿ: ಕಳೆದ ಬಾರಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದ ಹಿನ್ನೆಲೆಯಲ್ಲಿ ಎಐಎಡಿಎಂಕೆ ಅಭ್ಯರ್ಥಿಯನ್ನು ಕಣಕ್ಕಿಳಿಸಿರಲಿಲ್ಲ. ಇದು ಕನಿಮೋಳಿಯ ಗೆಲುವನ್ನು ಸುಲಭಗೊಳಿಸಿತ್ತು. ಆದರೆ ಈ ಬಾರಿ ಅಚ್ಚರಿ ಎಂಬಂತೆ ಜಿಲ್ಲೆಯ ಶ್ರೀವೈಕುಂಶಂ ಮೂಲದ ನಾಟಿ ವೈದ್ಯ ಶಿವಸ್ವಾಮಿ ವೇಲುಮಣಿ ಅವರನ್ನು ಪಕ್ಷ ಕಣಕ್ಕಿಳಿಸಿದೆ. ಇವರು ಸ್ಥಳೀಯವಾಗಿ ಬಹಳ ಜನಪ್ರಿಯರಾಗಿರುವ ಕಾರಣ ಕನಿಮೋಳಿಗೆ ಪ್ರಬಲ ಸ್ಪರ್ಧೆ ಮೂಲಕ ಕ್ಷೇತ್ರವನ್ನು ಸ್ಟಾರ್ ಕಣ ಮಾಡಬಹುದು ಎಂದು ನಿರೀಕ್ಷಿಸಲಾಗಿದೆ.

ಇವರು ಕೇವಲ ಎಂಟನೆ ತರಗತಿ ಓದಿದ್ದರೂ ತಮ್ಮ ತಾತನ ಬಳಿ ನಾಟಿ ವೈದ್ಯಕೀಯ ಶಾಸ್ತ್ರ ಕಲಿತು ಸಿದ್ಧ ವೈದ್ಯಕೀಯ ಪದ್ಧತಿಯಲ್ಲಿ ಡಾಕ್ಟರ್ ಪದವಿ ಪೂರೈಸಿದವರನ್ನು ನೇಮಿಸಿಕೊಂಡು ಆಸ್ಪತ್ರೆಯನ್ನು ತೆರೆದು ಮೂಳೆ ಶಸ್ತ್ರಚಿಕಿತ್ಸೆಯಲ್ಲಿ ಭಾರೀ ಮೆಚ್ಚುಗೆ ಗಳಿಸಿದ್ದಾರೆ. ಇವರಿಗೆ ಕ್ಷೇತ್ರದ ಆರು ಶಾಸಕರ ಪೈಕಿ ನಾಲ್ವರ ಬೆಂಬಲವೂ ಇದೆ. 

 ಸೈಕಲ್ ಏರಿ ಬಂದ ಸೀಲನ್: ಬಿಜೆಪಿ ಮತ್ತು ಟಿಎಂಸಿ (ಎಂ) ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿ ದಿರುವ ವಿಜಯಸೀಲನ್ ಸ್ಥಳೀಯ ರೈತ ಮುಖಂಡರಾಗಿದ್ದು, ಸರಳತೆಯಿಂದ ಕ್ಷೇತ್ರದಲ್ಲಿ ಭಾರೀ ಮೆಚ್ಚುಗೆ ಗಳಿಸಿದ್ದಾರೆ. ಇದರ ಮೊದಲ ದ್ಯೋತಕವಾಗಿ ಅವರು ನಾಮಪತ್ರ ಸಲ್ಲಿಕೆಗೆ ಸೈಕಲ್‌ನಲ್ಲೇ ಬಂದಿದ್ದು ಗಮನ ಸೆಳೆದಿತ್ತು. ಕ್ಷೇತ್ರದಲ್ಲಿ ತಮಿಳ್ ಮಾನಿಲ ಕಾಂಗ್ರೆಸ್-ಮೂಪನಾರ್ ಪಕ್ಷಕ್ಕೆ ಹೇಳಿಕೊಳ್ಳುವಂತಹ ನೆಲೆ ಇಲ್ಲದಿದ್ದರೂ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿರುವುದು ಅದರ ಬಲವನ್ನು ಹೆಚ್ಚಿಸಿದೆ. ಕಳೆದ ಬಾರಿ ಬಿಜೆಪಿಯಿಂದ ಸ್ಪರ್ಧಿಸಿದ್ದ ತಮಿಳ್‌ಸಾಯ್ ಬರೋಬ್ಬರಿ 2 ಲಕ್ಷಕ್ಕೂ ಅಧಿಕ ಮತಗಳನ್ನು ಪಡೆದುಕೊಂಡಿದ್ದರು. ಈ ಮತಗಳನ್ನು ಗಣನೆಗೆ ತೆಗೆದುಕೊಂಡಾಗ ಇವರು ಡಿಎಂಕೆ ಮತ್ತು ಎಐಎಡಿಎಂಕೆ ಮತಗಳನ್ನು ವಿಭಜನೆ ಮಾಡಿ ಇಬ್ಬರ ಪೈಕಿ ಒಬ್ಬರ ಸೋಲಿಗೆ ಕಾರಣವಾಗಬಹುದು ಎಂಬುದನ್ನು ಅಲ್ಲಗಳೆಯುವಂತಿಲ್ಲ. ಒಟ್ಟಾರೆ ಚುನಾವಣೆಯಲ್ಲಿ ತೂತ್ತುಕುಡಿಯಲ್ಲಿ ಒಟ್ಟು 31 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

‘ಇಂಡಿಯಾ’ ಗೆದ್ದರೆ ಮೇಕೆದಾಟು ಡ್ಯಾಂಗೆ ತಡೆ: ಡಿಎಂಕೆ ಪ್ರಣಾಳಿಕೆ


ತೂತುಕುಡಿ ಲೋಕಸಭಾ ಕ್ಷೇತ್ರದ ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳು

  • ಕನಿಮೋಳಿ
  • ಶಿವಸ್ವಾಮಿ
  • ವಿಜಯಸೀಲನ್

ತೂತುಕುಡಿ ಲೋಕಸಭಾ ಕ್ಷೇತ್ರದಲ್ಲಿರುವ ಒಟ್ಟು ವಿಧಾನಸಭಾ ಕ್ಷೇತ್ರ 6
ಮತದಾನ ದಿನಾಂಕ ಏಪ್ರಿಲ್. 19

ಚುನಾವಣಾ ವಿಷಯ

  • ಮೀನುಗಾರರಿಗೆ ಮೂಲ ಸೌಕರ್ಯ
  • ಪ್ರವಾಹ ಸಮಯದಲ್ಲಿ ಸಿಗದ ಅಗತ್ಯ ಪರಿಹಾರ

2019ರ ಚುನಾವಣೆ ಫಲಿತಾಂಶ

  • ಗೆಲುವು: ಕನಿಮೋಳಿ, ಡಿಎಂಕೆ
  • ಸೋಲು: ತಮಿಳ್‌ಸಾಯ್ ಸೌಂದರರಾಜನ್, ಬಿಜೆಪಿ
Follow Us:
Download App:
  • android
  • ios