ಗರ್ಭಿಣಿಯರಾದ ಒಂದೇ ಗ್ರಾಮದ 35 ಮದುವೆಯಾಗದ ಕನ್ಯೆಯರು; ಊರಿಗೆ ಊರೇ ಶಾಕ್
ಒಂದೇ ಗ್ರಾಮದ 35 ಮದುವೆಯಾಗದ ಕನ್ಯೆಯರು ಗರ್ಭಿಣಿ ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ಸುದ್ದಿಯ ಅಸಲಿ ಸತ್ಯ ಇಲ್ಲಿದೆ.
ಲಕ್ನೋ: ಕೆಲವೊಮ್ಮೆ ಸರ್ಕಾರಿ ಅಧಿಕಾರಿಗಳ ಎಡವಟ್ಟಿನಿಂದ ದೊಡ್ಡಮಟ್ಟದಲ್ಲಿ ತೊಂದರೆಯಾಗಿರುತ್ತದೆ. ಇಂತಹ ಪ್ರಕರಣಗಳು ಆಗಾಗ್ಗೆ ವರದಿಯಾಗುತ್ತಿರುತ್ತವೆ. ಇದೀಗ ಇಂತಹುವುದೇ ಒಂದು ಪ್ರಕರಣ ಉತ್ತರ ಪ್ರದೇಶದ ವಾರಾಣಸಿಯ ರಮ್ನಾ ಎಂಬ ಗ್ರಾಮದಲ್ಲಿ ನಡೆದಿದೆ. ಅಧಿಕಾರಿಗಳ ಎಡವಟ್ಟಿನಿಂದ ಗ್ರಾಮದ ಯುವತಿಯರು ಮುಜುಗರಕ್ಕೊಳಗಾಗಿದ್ದು, ಪೋಷಕರು ಒಂದು ಕ್ಷಣ ಆತಂಕಕಕ್ಕೊಳಗಾಗಿದ್ದರು. ರಮ್ನಾ ಗ್ರಾಮದ ಸುಮಾರು 35ಕ್ಕೂ ಅಧಿಕ ಮದುವೆಯಾಗದ ಯುವತಿಯರ ಮೊಬೈಲ್‌ಗೆ ಗರ್ಭಿಣಿ ಮಹಿಳೆ ಎಂಬ ನೋಂದಣಿಯಾದ ದಾಖಲಾತಿಯ ಸಂದೇಶ ಬಂದಿದೆ. ಈ ಸಂದೇಶ ನೋಡುತ್ತಿದ್ದಂತೆ ಯುವತಿಯರು ಮತ್ತು ಪೋಷಕರು ಆಘಾತಕ್ಕೊಳಗಾಗಿದ್ದರು.
ಗ್ರಾಮಸ್ಥರ ದೂರಿನ ಮೇರೆಗೆ ಸಂದೇಶ ಕಳುಹಿಸಲು ಕಾರಣನಾದ ಇಲಾಖೆಯ ಅಧಿಕಾರಿಗೆ ಕಾರಣ ಕೇಳಿ ನೋಟಿಸ್ ನೀಡಲಾಗಿದೆ. ಮಾಧ್ಯಮವೊಂದರ ಜೊತೆ ಮಾತನಾಡಿರುವ ವಾರಾಣಸಿಯ ಮುಖ್ಯ ವಿಕಾಸ ಅಧಿಕಾರಿ ಹಿಮಾಂಶು ನಾಗಪಾಲ್ ಘಟನೆ ಬಗ್ಗೆ ವಿವರವಾಗಿ ಮಾಹಿತಿ ನೀಡಿದ್ದಾರೆ. ರಮ್ನಾ ಗ್ರಾಮದ ಯುವತಿಯರ ಮೊಬೈಲ್ ಸಂಖ್ಯೆಗೆ ಮೆಸೇಜ್ ಹೋಗಿದ್ದು ಹೇಗೆ ಎಂಬುದನ್ನು ಸಹ ಹಿಮಾಂಶು ಹೇಳಿದ್ದಾರೆ.
ರಮ್ನಾ ಗ್ರಾಮದ ಮದುವೆಯಾಗದ ಯುವತಿಯರ ಹೆಸರನ್ನು ಗರ್ಭಿಣಿ ಮಹಿಳೆಯರ ಪಟ್ಟಿಯಲ್ಲಿ ಸೇರ್ಪಡೆಯಾಗಿದ್ದು, ಎಲ್ಲರ ಮೊಬೈಲ್‌ಗೂ ಸಂದೇಶ ರವಾನೆಯಾಗಿರುವ ಮಾಹಿತಿ ಲಭ್ಯವಾಗಿದೆ. ಈ ಸಂಬಂಧ ಆಂತರಿಕ ತನಿಖೆಗೂ ಸೂಚನೆ ನೀಡಲಾಗಿದ್ದು, ಸಂಬಂಧಿಸಿದವರಿಗೆ ನೋಟಿಸ್ ನೀಡಲಾಗಿದೆ ಎಂದು ಹಿಮಾಂಶು ನಾಗಪಾಲ್ ಹೇಳಿದ್ದಾರೆ.
ಇದನ್ನೂ ಓದಿ: ಗಂಡ-ಹೆಂಡ್ತಿ ಜಗಳದಲ್ಲಿ ಬಡವಾಗಿದ್ದು ಮಗು ಅಲ್ಲ, ಭಾರತೀಯ ರೈಲ್ವೆ; ಬರೋಬ್ಬರಿ 3 ಕೋಟಿ ನಷ್ಟ
ರಮ್ನಾ ಗ್ರಾಮದ ಅಂಗನವಾಡಿ ಕಾರ್ಯಕರ್ತೆ, ಗರ್ಭಿಣಿ ಮತ್ತು ಮಕ್ಕಳಿಗೆ ಪೌಷ್ಠಿಕ ಆಹಾರ ನೀಡುತ್ತಾರೆ. ಇದರ ಜೊತೆ ಬಿಎಲ್ಓ ಅಧಿಕಾರಿಯಾಗಿಯೂ ಕೆಲಸ ಮಾಡುತ್ತಾರೆ. ಯೋಜನೆಯೊಂದಕ್ಕಾಗಿ ಅಂಗನವಾಡಿ ಮಹಿಳೆ, ಗ್ರಾಮದ ಮನೆ ಮನೆಗೆ ತೆರಳಿ ಕುಟುಂಬ ಸದಸ್ಯರ ಆಧಾರ್ ಕಾರ್ಡ್ ಮತ್ತು ನಮೂನೆಗಳನ್ನು ಸಂಗ್ರಹಿಸಿರುತ್ತಾರೆ. ಈ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆಯಿಂದ ತಪ್ಪಿನಿಂದ ಗರ್ಭಿಣಿಯರಿಗೆ ಹೋಗಬೇಕಾದ ಮೆಸೇಜ್, ಗ್ರಾಮದ ಯುವತಿಯರ ಸಂಖ್ಯೆಗೆ ತಲುಪಿದೆ ಎಂದು ಹಿಮಾಂಶು ತಿಳಿಸಿದ್ದಾರೆ.
ಅಂಗನವಾಡಿ ಕಾರ್ಯಕರ್ತೆ ಅರ್ಜಿಗಳನ್ನು ಸಂಗ್ರಹಿಸುವಾಗ ಆಕಸ್ಮಿಕವಾಗಿ ಆಧಾರ್ ಸಂಖ್ಯೆ ಸೇರಿದಂತೆ ಎರಡೂ ನಮೂನೆಗಳನ್ನು ಮಿಕ್ಸ್ ಮಾಡಿದ್ದಾರೆ. ನಂತರ ಅದೇ ಆಧಾರ್ ಸಂಖ್ಯೆಯನ್ನು ಗರ್ಭಿಣಿ ಮಹಿಳೆಯರ ಅರ್ಜಿಯಲ್ಲಿ ಭರ್ತಿ ಮಾಡಿದ್ದಾರೆ. ಹಾಗಾಗಿ ಸಂದೇಶ ಬೇರೆಯವರಿಗೆ ತಲುಪಿದೆ. ಆದ್ರೆ ಈ ವಿಷಯ ತಿಳಿಯುತ್ತಿದ್ದಂತೆ ಎಚ್ಚೆತ್ತ ಅಂಗನವಾಡಿ ಕಾರ್ಯಕರ್ತೆಯರು ಎಲ್ಲಾ ಡೇಟಾ ಅಳಿಸಿದ್ದಾರೆ. ಅಲ್ಲದೇ ಈ ಪ್ರಕರಣಕ್ಕೆ ಸಂಬಂಧಪಟ್ಟವರಿಗೆ ನೋಟಿಸ್ ಜಾರಿ ಮಾಡಲಾಗಿದೆ ಎಂದು ವಾರಣಾಸಿಯ ಮುಖ್ಯ ಅಭಿವೃದ್ಧಿ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಗುಜರಿ ಸಾಮಾನು ಮಾರಾಟದಿಂದ ಭಾರತೀಯ ರೈಲ್ವೆಯ ಬೊಕ್ಕಸಕ್ಕೆ ಸೇರಿದೆಷ್ಟು ಕೋಟಿ?