ಗುಜರಿ ಸಾಮಾನು ಮಾರಾಟದಿಂದ ಭಾರತೀಯ ರೈಲ್ವೆಯ ಬೊಕ್ಕಸಕ್ಕೆ ಸೇರಿದೆಷ್ಟು ಕೋಟಿ?
ಭಾರತೀಯ ರೈಲ್ವೆ ಸ್ವಚ್ಛತಾ ಅಭಿಯಾನ 4.0 ರ ಅಂಗವಾಗಿ ಗುಜರಿ ಸಾಮಾನುಗಳ ಮಾರಾಟದಿಂದ ನೂರಾರು ಕೋಟಿ ಆದಾಯ ಗಳಿಸಿದೆ. ಈ ಅಭಿಯಾನದಲ್ಲಿ 12.15 ಲಕ್ಷ ಚದರ ಅಡಿ ಜಾಗವನ್ನು ಸ್ವಚ್ಛಗೊಳಿಸಲಾಗಿದ್ದು, 2.5 ಲಕ್ಷಕ್ಕೂ ಹೆಚ್ಚು ಸಾರ್ವಜನಿಕ ದೂರುಗಳನ್ನು ಪರಿಹರಿಸಲಾಗಿದೆ.
ಭಾರತೀಯ ರೈಲ್ವೆ ಕೇವಲ ಗುಜರಿ ಸಾಮಾನುಗಳನ್ನು ಮಾರಾಟ ಮಾಡಿ ನೂರಾರು ಕೋಟಿ ಆದಾಯವನ್ನು ಬೊಕ್ಕಸಕ್ಕೆ ತುಂಬಿಸಿಕೊಂಡಿದೆ. ಈ ಬಗ್ಗೆ ರೈಲ್ವೆ ಮಂಡಳಿ ಮಹತ್ವದ ಮಾಹಿತಿಯನ್ನು ಪ್ರಕಟಿಸಿದೆ.
ಭಾರತೀಯ ರೈಲ್ವೆ ಅಕ್ಟೋಬರ್ 2 ರಂದು ಗಾಂಧಿ ಜಯಂತಿ ದಿನದಂದು ಸ್ವಚ್ಛತಾ ಅಭಿಯಾನ 4.0 ಆರಂಭಿಸಿತ್ತು. ರೈಲ್ವೆ ಸಚಿವಾಲಯ ವಿಶೇಷ ಅಭಿಯಾನ 4.0 ಯಶಸ್ವಿಯಾಗಿ ಪೂರೈಸಿದೆ. ಈ ವಿಶೇಷ ಅಭಿಯಾನವು ಸ್ವಚ್ಛತೆಯ ಸಂಸ್ಕೃತಿಯನ್ನು ಉತ್ತೇಜಿಸಲು, ಸಾಂಸ್ಥಿಕ ದಕ್ಷತೆಯನ್ನು ಸುಧಾರಿಸಲು ಸಹಕಾರಿಯಾಗಿದೆ ಎಂದು ಭಾರತೀಯ ರೈಲ್ವೆ ಹೇಳಿದೆ.
ವಿಶೇಷ ಸ್ವಚ್ಚತಾ ಅಭಿಯಾನದಲ್ಲಿ ಭಾರತೀಯ ರೈಲ್ವೆ ತನ್ನ ಎಲ್ಲಾ ಸಿಬ್ಬಂದಿ ಹಾಗೂ ಸಾರ್ವಜನಿಕರನ್ನು ಅರ್ಥಪೂರ್ಣವಾಗಿ ತೊಡಗಿಸಿಕೊಂಡಿತ್ತು. ಈ ಸ್ವಚ್ಛತಾ ಅಭಿಯಾನದಲ್ಲಿ 2.5 ಲಕ್ಷ ಸಾರ್ವಜನಿಕ ದೂರುಗಳನ್ನು ಪರಿಹರಿಸಲಾಗಿದೆ.
ಈ ಅಭಿಯಾನದಡಿ ಭಾರತೀಯ ರೈಲ್ವೆ 56,168 ಸ್ವಚ್ಛತಾ ಕಾರ್ಯಕ್ರಮಗಳನ್ನು ಆಯೋಜನೆ ನಡೆಸಿತ್ತು. ಕೆಲಸ ಮಾಡುವ ಸ್ಥಳ, ರೈಲ್ವೆ ನಿಲ್ದಾಣದ ಸ್ವಚ್ಚತೆಯನ್ನು ಒಳಗೊಂಡಿತ್ತು. ನವದೆಹಲಿ, ಜೈಪುರ, ಚೆನ್ನೈ, ನಾಗ್ಪುರ, ಕೋಟಾ, ಜೋಧ್‌ಪುರ, ಲಕ್ನೋ, ಪುಣೆ, ಭೋಪಾಲ್, ಕೋಲ್ಕತ್ತಾ ಮತ್ತು ಇತರ ಪ್ರಮುಖ ರೈಲು ನಿಲ್ದಾಣಗಳಲ್ಲಿ ವಿಶೇಷ ರೈಲು ಸ್ವಚ್ಛತಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
Indian Railways
ಈ ಸಮಯದಲ್ಲಿ 12.15 ಲಕ್ಷ ಚದರ ಅಡಿ ಜಾಗವನ್ನು ಸ್ವಚ್ಛಗೊಳಿಸಲಾಗಿತ್ತು. ಈ ಸ್ವಚ್ಛತೆಯಿಂದ ತೆರವಾದ ಗುಜರಿ ಮಾರಾಟದಿಂದ ಭಾರತೀಯ ರೈಲ್ವೆಯ ಬೊಕ್ಕಸಕ್ಕೆ 452.40 ಕೋಟಿ ರೂ. ಆದಾಯ ಬಂದಿದೆ. 2.5 ಲಕ್ಷ ಸಾರ್ವಜನಿಕ ಕುಂದುಕೊರತೆಗಳು ಮತ್ತು 1,427 ಸಾರ್ವಜನಿಕ ಕುಂದುಕೊರತೆ ಮನವಿಗಳನ್ನು ಪರಿಹರಿಸಲಾಗಿದೆ.