ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳಲ್ಲಿ ಮಾನಸಿಕ ಒತ್ತಡದಿಂದಾಗಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿವೆ. ಇದನ್ನು ತಡೆಯಲು ಗುಜರಾತ್‌ನ ವಿಎನ್‌ಎಸ್‌ಜಿಯು ವಿಶ್ವವಿದ್ಯಾಲಯವು ತನ್ನ ಹಾಸ್ಟೆಲ್‌ಗಳಲ್ಲಿ ವಿಶೇಷ 'ಆತ್ಮಹತ್ಯೆ ನಿರೋಧಕ ಫ್ಯಾನ್‌'ಗಳನ್ನು ಅಳವಡಿಸಿದೆ. ೧೦ ಕೆಜಿಗಿಂತ ಹೆಚ್ಚು ತೂಕ ಬಿದ್ದಾಗ ಈ ಫ್ಯಾನ್ ಕೆಳಗೆ ಬಂದು ವಿದ್ಯುತ್ ಸಂಪರ್ಕ ಕಡಿತಗೊಳ್ಳುತ್ತದೆ.

ಅಹಮದಾಬಾದ್​: ಈಗಿನ ಬಹುತೇಕ ಮಕ್ಕಳು ಅತ್ಯಂತ ಸೂಕ್ಷ್ಮ ಮನಸ್ಸಿನವರು. ಅವರಿಗೆ ಸ್ವಲ್ಪ ಏನಾದರೂ ಮಾನಸಿಕ ಹಿಂಸೆ ಆದರೆ ತಡೆದುಕೊಳ್ಳುವುದೇಕಷ್ಟ ಎನ್ನುವ ಮನಸ್ಥಿತಿ ಇರುವವರು. ಇದೇ ಕಾರಣಕ್ಕೆ ಶಾಲೆಯಲ್ಲೋ, ಕಾಲೇಜಿನಲ್ಲೋ ಅಥವಾ ಮನೆಗಳಲ್ಲಿಯೂ ಯಾರಾದರೂ ಏನಾದರೂ ಗದರಿಸಿದರೂ, ಸ್ವಲ್ಪ ಇನ್​ಸಲ್ಟ್​ ಆದರೂ ಸಾಕು ನೇರವಾಗಿ ಸಾವಿನ ಹಾದಿಯನ್ನೇ ತುಳಿದುಬಿಡುತ್ತಾರೆ ಎನ್ನುವುದು ಬಹುತೇಕ ಘಟನೆಗಳಿಂದ ತಿಳಿದುಬಂದಿದೆ. ಇಂದಿನ ಶಿಕ್ಷಣ ಪದ್ಧತಿ ಹೇಗಿದೆ ಎಂದರೆ ಮಾರ್ಕ್ಸ್​ ಬಂದರೆ ವಿದ್ಯಾರ್ಥಿ ಗ್ರೇಟ್​ ಎನ್ನುವ ಮನಸ್ಥಿತಿ. ಇದೇ ಕಾರಣಕ್ಕೆ ಶಾಲೆಗಳಲ್ಲಿಯೂ ಜೀವನ ಹೇಗೆ ಸಾಗಿಸಬೇಕು ಎಂದು ಹೇಳಿಕೊಡುವುದೇ ಇಲ್ಲ, ಇನ್ನು ಬಹುತೇಕ ಅಪ್ಪ-ಅಮ್ಮ ಅಂತೂ ಬಿಡಿ, ತಮ್ಮ ಪ್ರತಿಷ್ಠೆಗಾಗಿ ಅವರೂ ಮಕ್ಕಳನ್ನು ಅಂಕಗಳಿಸುವ ಯಂತ್ರ ಮಾಡಿರುವ ಕಾರಣ ಮಕ್ಕಳಿಗೆ ಜೀವನ ಹೇಗೆ ಸಾಗಿಸಬೇಕು ಎನ್ನುವುದು ಹೇಳಿಕೊಡುವುದಕ್ಕೆ ಹೋಗುವುದೇ ಇಲ್ಲ, ಇನ್ನು ಹಲವು ಮನೆಗಳಲ್ಲಿ ಅಪ್ಪ-ಅಮ್ಮನ ನೀತಿ ಬೋಧನೆಗಳನ್ನು ಕೇಳುವ ಮನಸ್ಥಿತಿಯಲ್ಲಿ ಮಕ್ಕಳೂ ಇರುವುದಿಲ್ಲ.

ಇದೇ ಕಾರಣಕ್ಕೆ ಇಂದು ಚಿಕ್ಕ ವಯಸ್ಸಿನ ಮಕ್ಕಳಲ್ಲಿಯೇ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿವೆ. ಅದರಲ್ಲಿಯೂ ತಮ್ಮವರಿಂದ ದೂರವಾಗಿ ಹಾಸ್ಟೆಲ್​ಗಳಲ್ಲಿ ಇರುವ ವಿದ್ಯಾರ್ಥಿಗಳ ಮನಸ್ಥಿತಿ ಸೂಕ್ಷ್ಮವಾಗಿರುವ ಕಾರಣ, ಅವರಿಗೆ ಸುಲಭದಲ್ಲಿ ಹೊಳೆಯುವ ಉಪಾಯ ಆತ್ಮಹತ್ಯೆ. ಅದಕ್ಕೆ ಅವರಿಗೆ ಸುಲಭದಲ್ಲಿ ಕಾಣಿಸುವ ಮಾರ್ಗ ಹಾಸ್ಟೆಲ್​ನಲ್ಲಿ ಇರುವ ಫ್ಯಾನ್​ಗಳು. ಇದೇ ಕಾರಣಕ್ಕೆ ಇದೀಗ ಆತ್ಮಹತ್ಯಾ ನಿರೋಧಕ ಫ್ಯಾನ್ಸ್​ (Ani Suicide Fans) ಬಿಡುಗಡೆ ಮಾಡಲಾಗಿದೆ.

ಹೇಗೆ ಕಾರ್ಯ ನಿರ್ವಹಿಸುತ್ತದೆ?

ವೀರ್ ನರ್ಮದ್ ದಕ್ಷಿಣ ಗುಜರಾತ್ ವಿಶ್ವವಿದ್ಯಾಲಯ (VNSGU) ವಿದ್ಯಾರ್ಥಿಗಳ ಆತ್ಮಹತ್ಯೆಗಳನ್ನು ತಡೆಗಟ್ಟಲು ತನ್ನ ಹಾಸ್ಟೆಲ್‌ಗಳಲ್ಲಿ 354 ವಿಶೇಷವಾಗಿ ವಿನ್ಯಾಸಗೊಳಿಸಲಾದ ಆತ್ಮಹತ್ಯೆ ನಿರೋಧಕ ಫ್ಯಾನ್‌ಗಳನ್ನು ಅಳವಡಿಸಲಾಗಿದೆ. ಗುಜರಾತ್‌ನ ವಿಶ್ವವಿದ್ಯಾಲಯವು ಹಾಸ್ಟೆಲ್‌ಗಳಲ್ಲಿ 354 ಸ್ಪ್ರಿಂಗ್-ಲೋಡೆಡ್ "ಆತ್ಮಹತ್ಯೆ ವಿರೋಧಿ" ಫ್ಯಾನ್‌ಗಳನ್ನು ಸ್ಥಾಪಿಸಿದೆ. ವಿಶೇಷವಾಗಿ ಸುಸಜ್ಜಿತವಾದ ಪ್ರತಿ ಫ್ಯಾನ್‌ಗೆ ಸುಮಾರು 1,500 ರೂ. ವೆಚ್ಚವಾಗುತ್ತದೆ. ಇದು ಅತಿಯಾದ ತೂಕವನ್ನು ಅನ್ವಯಿಸಿದಾಗ ಬಿಡುಗಡೆಯಾಗುವ ಸ್ಪ್ರಿಂಗ್ ಕಾರ್ಯವಿಧಾನವನ್ನು ಹೊಂದಿದೆ. ಒಂದು ವೇಳೆ ಯಾರೇ ಆದರೂ ಈ ಫ್ಯಾನ್​ನಿಂದ ಸಾಯಲು ಹೊರಟಾಗ ಅದರ ಮೇಲೆ ಹಗ್ಗ, ಟವಲ್​ ಇನ್ನೇನೇ ಹಾಕಿದ ತಕ್ಷಣ, ಕರೆಂಟ್​ ಪಾಸ್​ ಆಗುವುದು ತಡೆದು, ಆ ಹಗ್ಗ, ಟವಲ್​ ಸಹಿತ ಫ್ಯಾನ್​ ಕೆಳಕ್ಕೆ ಬರುತ್ತದೆ. ಈ ರೀತಿ ಅದನ್ನು ಅಳವಡಿಸಲಾಗಿದೆ.

ಕುಲಪತಿಗಳಿಂದ ಪರೀಕ್ಷೆ

ಇದರೊಂದಿಗೆ, ವಿಶ್ವವಿದ್ಯಾನಿಲಯವು ನೇಣು ಬಿಗಿಯುವ ಸಾವಿನ ವಿರುದ್ಧ ತಾಂತ್ರಿಕ ಸುರಕ್ಷತೆಯನ್ನು ಪರಿಚಯಿಸಿದೆ, ಇದು ಗುಜರಾತ್‌ನಾದ್ಯಂತ ಶಿಕ್ಷಣ ಸಂಸ್ಥೆಗಳಿಗೆ ಒಂದು ಮಾದರಿಯಾಗಿದೆ. ದೇಶಾದ್ಯಂತ ವಿದ್ಯಾರ್ಥಿಗಳ ಮಾನಸಿಕ ಆರೋಗ್ಯ, ಶೈಕ್ಷಣಿಕ ಒತ್ತಡ ಮತ್ತು ವೃತ್ತಿ ಸಂಬಂಧಿತ ಆತಂಕದ ಬಗ್ಗೆ ಹೆಚ್ಚುತ್ತಿರುವ ಕಳವಳಗಳ ನಡುವೆ ಈ ಉಪಕ್ರಮವು ಬಂದಿದೆ. ವೈರಲ್​ ವಿಡಿಯೋದಲ್ಲಿ , VNSGU ಕುಲಪತಿ ಡಾ. ಕಿಶೋರ್ಸಿನ್ಹ್ ಚಾವ್ಡಾ ವಿಶ್ವವಿದ್ಯಾಲಯದ ಹಾಸ್ಟೆಲ್ ಕೋಣೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಕಾರ್ಯವಿಧಾನವನ್ನು ಪ್ರದರ್ಶಿಸಿದರು. ಈ ತಂತ್ರಜ್ಞಾನದಲ್ಲಿ, ಸರಿಸುಮಾರು 10 ಕೆಜಿಗಿಂತ ಹೆಚ್ಚಿನ ಹೊರೆಯನ್ನು ಅನ್ವಯಿಸಿದಾಗ, ಫ್ಯಾನ್​ ತನ್ನ ಕೆಲಸ ಆರಂಭಿಸುತ್ತದೆ. ಫ್ಯಾನ್ ಇಳಿಯುತ್ತದೆ ಮತ್ತು ಅದರ ವಿದ್ಯುತ್ ಸರಬರಾಜು ಕಡಿತಗೊಳ್ಳುತ್ತದೆ. ಪ್ರದರ್ಶನದ ಸಮಯದಲ್ಲಿ ಚಾವ್ಡಾ ಸೀಲಿಂಗ್ ಫ್ಯಾನ್ ಮೇಲೆ ಬೆಡ್‌ಶೀಟ್ ಹೊದಿಸಿ ಪರೀಕ್ಷೆ ಮಾಡಿದರು (ಏಕೆಂದರೆ ವಿದ್ಯಾರ್ಥಿಗಳಿಗೆ ಇದೇ ಸುಲಭದಲ್ಲಿ ಸಿಗುವ ಕಾರಣದಿಂದ). ದೇಶಾದ್ಯಂತ ಹೆಚ್ಚಾಗಿ ಹಾಸ್ಟೆಲ್​, ಪಿಜಿಗಳಲ್ಲಿ ಇದನ್ನು ಅಳವಡಿಸುವಂತೆ ಒತ್ತಾಯ ಕೇಳಿಬಂದಿದೆ.