ತಿರುವನಂತಪುರಂ ವಿಮಾನ ನಿಲ್ದಾಣ ಖಾಸಗೀಕರಣ: ಕೇಂದ್ರ ನಿರ್ಧಾರ ವಿರುದ್ಧ ಸಿಡಿದೆದ್ದ ಕೇರಳ ಸರ್ಕಾರ!
ವಿಮಾನ ನಿಲ್ದಾಣಗಳ ಖಾಸಗೀಕರಣ ಕುರಿತು ಕೇಂದ್ರ ಸರ್ಕಾರ ನಿರ್ಧಾರಕ್ಕೆ ಕೇರಳ ಸರ್ಕಾರ ತೀವ್ರ ವಿರೋಧ ವ್ಯಕ್ತಪಡಿಸಿದೆ. ಕೇರಳದ ತಿರುವನಂತಪುರಂ ವಿಮಾನ ನಿಲ್ದಾಣವನ್ನು ಕೇಂದ್ರ ಸರ್ಕಾರ ಅದಾನಿ ಗ್ರೂಪ್‌ಗೆ ನೀಡಿದೆ. ರಾಜ್ಯ ಸರ್ಕಾರದ ಜೊತೆ ಚರ್ಚಿಸದೇ ತೆಗೆದುಕೊಂಡು ಕೇಂದ್ರ ನಿರ್ಧಾರಕ್ಕೆ ಸಿಎಂ ಪಿಣರಾಯಿ ವಿಜಯನ್ ಕಿಡಿ ಕಾರಿದ್ದಾರೆ. ಇಷ್ಟೇ ಅಲ್ಲ ಪ್ರಧಾನಿಗೆ ಪತ್ರ ಬರೆದಿದ್ದಾರೆ.
ತಿರುವನಂತಪುರಂ(ಆ.20): ಪಿಣರಾಯಿ ವಿಜಯನ್ ನೇತೃತ್ವದ ಕೇರಳ ಸರ್ಕಾರ ಇದೀಗ ಕೇಂದ್ರ ವಿರದ್ಧ ಸಮರ ಸಾರಿದೆ. ಕೇರಳದ ತಿರುವನಂತಪುರಂ ವಿಮಾನ ನಿಲ್ದಾಣವನ್ನು ಖಾಸಗೀಕರಣ ಯೋಜನೆಯಡಿ ಕೇಂದ್ರ ಸರ್ಕಾರ ಅದಾನಿ ಗ್ರೂಪ್‌ಗೆ ನೀಡಿದೆ. 50 ವರ್ಷಗಳಿಗೆ ಗುತ್ತಿಗೆ ನೀಡಿರುವ ಕೇಂದ್ರದ ನಿರ್ಧಾರವನ್ನು ಕೇರಳ ಸರ್ಕಾರ ವಿರೋಧಿಸಿದೆ.
ದೇಶದ ಮೂರು ವಿಮಾನ ನಿಲ್ದಾಣ ಖಾಸಗಿ ವಶಕ್ಕೆ
ಕೇರಳ ಸರ್ಕಾರ ನೀಡಿದ ಹಲವು ಮನವಿಗಳನ್ನು ಗಾಳಿಗೆ ತೂರಿ, ನಿಯಮ ಬಾಹಿರವಾಗಿ ಕೇಂದ್ರ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ತಿರುವನಂತ ವಿಮಾನ ನಿಲ್ದಾಣವನ್ನು ಸರ್ಕಾರಿ ಸ್ವಾಮ್ಯದ SPV(Special Purpose Vehicle) ಸಂಸ್ಥೆಗೆ ನೀಡಲು ಮನವಿ ಮಾಡಿತ್ತು. ಆದರೆ ಕೇಂದ್ರ ಸರ್ಕಾರ ಕೇರಳದ ಮನವಿಗೆ ಸ್ಪಂದಿಸದೇ ಈ ನಿರ್ಧಾರ ಕೈಗೊಂಡಿದೆ ಎಂದು ಪಿಣರಾಯಿ ವಿಜಯ್ ಆರೋಪಿಸಿದ್ದಾರೆ.
ಇನ್ನಷ್ಟು ವಿಮಾನ ನಿಲ್ದಾಣ ಖಾಸಗಿ ಸಂಸ್ಥೆಗೆ ವಹಿಸಲು ಕೇಂದ್ರ ಆಸಕ್ತಿ!...
ಕೇಂದ್ರ ಸರ್ಕಾರ ಏಕಪಕ್ಷೀಯವಾಗಿ ತೆಗೆದುಕೊಂಡ ನಿರ್ಧಾರ 2003ರಲ್ಲಿ ವಿಮಾನಯಾನ ಸಚಿವಾಲಯ ನೀಡಿದ್ದ ಭರವಸೆಗೆ ವಿರುದ್ಧವಾಗಿದೆ. 2003ರಲ್ಲಿ ವಿಮಾನಯಾನ ಸಚಿವಾಲಯ SPV ಹಸ್ತಾಂತರಿಸುವ ಭರವಸೆ ನೀಡಿತ್ತು. ಆದರೆ ಕೇಂದ್ರ ಸರ್ಕಾರ ತಮಗಿಷ್ಟ ಬಂದಂತೆ ಅದಾನಿ ಗ್ರೂಪ್‌ಗೆ ಹಸ್ತಾಂತರಿಸಿದೆ ಎಂದಿದ್ದಾರೆ.
ಖಾಸಗೀಕರಣ ನಿರ್ಧಾರಕ್ಕೂ ಮುನ್ನ ಕೇರಳ ತಿರುವನಂತಪುರಂ ವಿಮಾನ ನಿಲ್ದಾಣದ ಅಭಿವೃದ್ಧಿಯಲ್ಲಿ ಕೇರಳ ಸರ್ಕಾರದ ಪಾತ್ರವನ್ನು ಯೋಚಿಸಬೇಕಿತ್ತು. 2005ರಲ್ಲಿ ಕೇರಳ ಸರ್ಕಾರ 23.57 ಏಕರೆಜಾಗವನ್ನು ಉಚಿತವಾಗಿ ನೀಡಿತ್ತು. ಇದೀಗ ಇದ್ಯಾವುದನ್ನು ಪರಿಗಣಿಸದೇ ಪ್ರಧಾನಿ ಮೋದಿ ಕೇರಳ ಜನತೆಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಪಿರಣರಾಯಿ ವಿಜಯನ್ ಆರೋಪಿಸಿದ್ದಾರೆ.
ಕೇಂದ್ರದ ಈ ನಿರ್ಧಾರಕ್ಕೆ ರಾಜ್ಯ ಸರ್ಕಾರದಿಂದ ಯಾವುದೇ ಸಹಕಾರವಿಲ್ಲ. ಅದಾನಿ ಗ್ರೂಪ್‌ಗೆ 50 ವರ್ಷಗಳ ಕಾಲ ಗುತ್ತಿಗೆ ನೀಡುವ ಬದಲು ಸರ್ಕಾರಿ ಸ್ವಾಮ್ಯದ SPV ಸಂಸ್ಥೆಗೆ ಹಸ್ತಾಂತರಿಸಬೇಕು. ಕೇಂದ್ರ ನಿರ್ಧಾರವನ್ನು ಮರುಪರಿಶೀಲಿಸಬೇಕು ಎಂದು ಪಿರಣರಾಯಿ ವಿಜಯನ್, ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ.
ಕೇರಳ ಆಕ್ರೋಶದ ಬೆನ್ನಲ್ಲೇ, ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಟ್ವಿಟರ್ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. ಕೇರಳದ ಆರೋಪ ಮತ್ತು ಅಂಕಿ ಅಂಶಗಳಲ್ಲಿ ಸಾಮ್ಯತೆ ಇಲ್ಲ. ಈಗಾಗಲೇ ತಿರುವನಂತಪುರಂ ವಿಮಾನ ನಿಲ್ದಾಣ ಖಾಸಗೀಕರಣ ಕುರಿತು ಪ್ರಕ್ರಿಯೆ ಬಹುತೇಕ ಮುಗಿದಿದೆ ಎಂದು ಟ್ವೀಟ್ ಮಾಡಿದ್ದಾರೆ.