ನವದೆಹಲಿ(ಮೇ.06): ಕೊರೋನಾ 2ನೇ ಅಲೆ ಭಾರೀ ಅನಾಹುತ ಸೃಷ್ಟಿಸಿರುವ ಹೊತ್ತಿನಲ್ಲೇ, ದೇಶದ ಮೇಲೆ 3ನೇ ಅಲೆ ಅಪ್ಪಳಿಸುವುದು ಬಹುತೇಕ ಖಚಿತ. 3ನೇ ಅಲೆ ನಿರೀಕ್ಷಿತವಾಗಿದ್ದು ಅದನ್ನು ತಡೆಯಲು ಸಾಧ್ಯವಿಲ್ಲ. ಅದನ್ನು ಎದುರಿಸಲು ನಾವು ಸಿದ್ಧರಾಗಬೇಕು ಎಂದು ಸ್ವತಃ ಕೇಂದ್ರ ಸರ್ಕಾರದ ವೈಜ್ಞಾನಿಕ ಸಲಹೆಗಾರರೇ ಎಚ್ಚರಿಕೆ ನೀಡಿದ್ದಾರೆ. ಈ ಮೂಲಕ ಜನರು ಕೋವಿಡ್‌ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸದೇ ಹೋದಲ್ಲಿ ಮುಂದಿನ ದಿನಗಳು ಮತ್ತಷ್ಟುಗಂಭೀರವಾಗಿರಲಿದೆ ಎಂದು ಮುನ್ನೆಚ್ಚರಿಕೆ ನೀಡಿದ್ದಾರೆ.

ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಸರ್ಕಾರ ಪ್ರಧಾನ ವೈಜ್ಞಾನಿಕ ಸಲಹೆಗಾರ ಕೆ. ವಿಜಯ್‌ ರಾಘವನ್‌, ‘ಪ್ರಸಕ್ತ ದೇಶದಲ್ಲಿ ಕೊರೋನಾ ವೈರಸ್‌ ಹಬ್ಬುತ್ತಿರುವ ವೇಗವನ್ನು ನೋಡಿದಾಗ 3ನೇ ಅಲೆ ದಾಳಿ ಮಾಡುವುದು ಖಚಿತ. ಅದನ್ನು ತಡೆಯಲು ಆಗದು. 3ನೇ ಅಲೆ ಇನ್ನಷ್ಟುವ್ಯಾಪಕವಾಗಿ ಸೋಂಕನ್ನು ಹರಡುವ ಸಾಧ್ಯತೆ ಇದೆ. ಆದರೆ, 3ನೇ ಅಲೆ ಯಾವಾಗ ಸಂಭವಿಸಲಿದೆ ಎಂದು ಈಗಲೇ ಹೇಳುವುದು ಕಷ್ಟ. ಹೊಸ ಅಲೆಯನ್ನು ಎದುರಿಸಲು ನಾವು ಈಗಿನಿಂದಲೇ ಸಿದ್ಧರಾಗಬೇಕಿದೆ’ ಎಂದು ತಿಳಿಸಿದ್ದಾರೆ.

ದಿನೇ ದಿನೇ ವೈರಸ್‌ ರೂಪಾಂತರವಾಗುತ್ತಿದೆ. ಹೀಗಾಗಿ ಮತ್ತಷ್ಟುಕೊರೋನಾ ಅಲೆ ಏಳುವುದು ಖಚಿತ. ಈಗಿನ ಲಸಿಕೆಗಳು ಬ್ರಿಟನ್‌ ಮತ್ತು ಡಬಲ್‌ ಮ್ಯುಟೆಂಟ್‌ ಮಾದರಿಯ ತಳಿಗಳ ಮೇಲೆ ಪರಿಣಮಾಕಾರಿ ಎಂದು ಸಾಬೀತಾಗಿದ್ದರೂ, ಹೊಸ ತಳಿಗಳ ಮೇಲೆ ನಿಗಾ ಮತ್ತು ಕಾಲಕಾಲಕ್ಕೆ ಲಸಿಕೆಯಲ್ಲಿ ಬದಲಾವಣೆ ಕೂಡಾ ಅತ್ಯಗತ್ಯ ಎಂದು ಅವರು ಪ್ರತಿಪಾದಿಸಿದ್ದಾರೆ.

"

ನಿರೀಕ್ಷೆ ಇರಲಿಲ್ಲ:

ಇದೇ ವೇಳೆ, ಪ್ರಸ್ತುತ ಭಾರೀ ಅನಾಹುತ ಸೃಷ್ಟಿಸಿರುವ ಕೊರೋನಾ ಅಲೆಯನ್ನು ಯಾರೂ ನಿರೀಕ್ಷಿಸಿರಲಿಲ್ಲ. ಕರ್ನಾಟಕ, ತಮಿಳುನಾಡು, ಪಶ್ಚಿಮ ಬಂಗಾಳ, ರಾಜಸ್ಥಾನ ಮತ್ತು ಬಿಹಾರಗಳಲ್ಲಿ ದೈನಂದಿನ ಕೊರೋನಾ ಪ್ರಕರಣಗಳ ಸಂಖ್ಯೆ ಏರಿಕೆ ಆಗುತ್ತಿದೆ. 24 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಪಾಸಿಟಿವಿಟಿ ಪ್ರಮಾಣ ಶೇ.15ಕ್ಕಿಂತಲೂ ಅಧಿಕವಾಗಿದೆ. ಕರ್ನಾಟಕ ಸೇರಿದಂತೆ 12 ರಾಜ್ಯಗಳಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 1ಲಕ್ಷಕ್ಕಿಂತ ಅಧಿಕವಾಗಿದೆ. ಮಹಾರಾಷ್ಟ್ರದ 11 ಜಿಲ್ಲೆಗಳಲ್ಲಿ ಕಳೆದ 14 ದಿನಗಳಿಂದ ಸೊಂಕಿನ ಪ್ರಮಾಣದಲ್ಲಿ ಇಳಿಕೆ ಕಂಡು ಬಂದಿದೆ ಎಂದು ಆರೋಗ್ಯ ಸಚಿವಾಲಯ ಜಂಟಿ ಕಾರ್ಯದರ್ಶಿ ಲವ್‌ ಅಗರ್ವಾಲ್‌ ತಿಳಿಸಿದ್ದಾರೆ.

ಮೊದಲ ಅಲೆಯ ವೇಳೆ ಜನರು ಕೋವಿಡ್‌ ಮಾರ್ಗಸೂಚಿ ಪಾಲಿಸದೇ ಇದ್ದದ್ದು ಮತ್ತು ಸೋಂಕಿನ ವಿರುದ್ಧ ಹೆಚ್ಚಿನ ರೋಗ ನಿರೋಧಕ ಶಕ್ತಿ ಹೊಂದದೇ ಇದ್ದಿದ್ದೇ 2ನೇ ಅಲೆಗೆ ಕಾರಣ. ಜೊತೆಗೆ, ಹೊಸ ರೂಪಾಂತರಿ ತಳಿ ಕೂಡಾ 2ನೇ ಅಲೆಯಲ್ಲಿ ಪ್ರಮುಖ ಪಾತ್ರ ವಹಿಸಿದವು. ಜನರು ಮಾಸ್ಕ್‌ ಧರಿಸುವುದು ಮತ್ತು ಸಾಮಾಜಿಕ ಅಂತರವನ್ನು ಕಡ್ಡಾಯವಾಗಿ ಪಾಲಿಸಿದರೆ ದೊಡ್ಡ ಮಟ್ಟದಲ್ಲಿ ವೈರಸ್‌ ಅನ್ನು ನಿಯಂತ್ರಿಸಬಹುದು.

- ಕೆ.ವಿಜಯ ರಾಘವನ್‌, ಕೇಂದ್ರ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರ

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona