ಕೋಲ್ಕತ್ತಾ[ನ.28]: ಈರುಳ್ಳಿ ದರ ಗಣನೀಯವಗಿ ಏರುತ್ತಿದ್ದು, ಕಳ್ಳರು ಕೂಡಾ ಹಣಕ್ಕಿಂತ ಹೆಚ್ಚು ಈರುಳ್ಳಿಗೇ ಮಹತ್ವ ನೀಡಲಾರಂಭಿಸಿದ್ದಾರೆ. ಇದಕ್ಕೆ ಪಶ್ಚಿಮ ಬಂಗಾಳದಲ್ಲಿ ನಡೆದ ಘಟನೆ ಸಾಕ್ಷಿ ಎಂಬಂತಿದೆ. ಇಲ್ಲಿ ಅಂಗಡಿಯೊಂದಕ್ಕೆ ನುಗ್ಗಿದ ಕಳ್ಳರು ಕಣ್ಣೆದುರೇ ಇದ್ದ ಹಣದ ಬಾಕ್ಸ್ ಬಿಟ್ಟು, ಈರುಳ್ಳಿ ಕದ್ದು ಪರಾರಿಯಾಗಿದ್ದಾರೆ.

ಇಲ್ಲಿನ ಪೂರ್ವ ಮಿದಿನಾಪುರ ಪ್ರದೇಶದಲ್ಲಿ ಅಕ್ಷಯ್ ದಾಸ್ ಎಂಬ ವ್ಯಾಪಾರಿ ಮಂಗಳವಾರದಂದು ಬೆಳಗ್ಗೆ ಎಂದಿನಂತೆ ಅಂಗಡಿ ತೆರೆದಾಗ ಒಳಗಿದ್ದ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಕಳೆದ ರಾತ್ರಿ ಕಳ್ಳತನ ನಡೆದಿದೆ ಎಂದು ತಿಳಿಯುತ್ತಲೇ ಡಬ್ಬಿಯಲ್ಲಿದ್ದ ಹಣವನ್ನು ಎಣಿಸಲಾರಂಭಿಸಿದ್ದಾರೆ. ಅಚ್ಚರಿ ಎಂಬಂತೆ ಆ ಡಬ್ಬಿಯಲ್ಲಿದ್ದ ಒಂದು ರೂಪಾಯಿ ಕೂಡಾ ಕಳುವಾಗಿರಲಿಲ್ಲ. ಕಳ್ಳರಿಗೇನೂ ಸಿಗಲಿಲ್ಲ ಎಂದು ಖುಷಿ ಪಡುತ್ತಿರುವಾಗಲೇ, ಮೂಲೆಯಲ್ಲಿ ಗೋಣಿಗಳಲ್ಲಿ ತುಂಬಿಸಿಟ್ಟಿದ್ದ ಈರುಳ್ಳಿ ಮಾಯವಾಗಿರುವುದು ಗಮನಕ್ಕೆ ಬಂದಿದೆ. 

ಪುಣೆ ಆಯ್ತು, ಈಗ ರಾಜ್ಯದ ಈರುಳ್ಳಿಯೂ ಕೆಜಿಗೆ 100 ರೂ

ಹೌದು ಅಕ್ಷಯ್ ಅಂಗಡಿಗೆ ನುಗ್ಗಿದ್ದ ಕಳ್ಳರು ಈರುಳ್ಳಿ ಮಾತ್ರ ಕದ್ದು ಓಡಿ ಹೋಗಿದ್ದಾರೆ. ಸುಮಾರು 50 ಸಾವಿರ ಮೌಲ್ಯದ ಈರುಳ್ಳಿ ಮಾತ್ರವಲ್ಲದೇ, ಹತ್ತಿರವೇ ಇದ್ದ ಬೆಳ್ಳುಳ್ಳಿ ಕೂಡಾ ಕಳ್ಳರು ಸಾಗಿಸಿದ್ದಾರೆ. 

ಕೇಂದ್ರ ಸರ್ಕಾರ ಬೆಲೆ ಏರಿಕೆ ನಿಯಂತ್ರಿಸಲು ಅದೆಷ್ಟೇ ಕ್ರಮ ಜಾರಿಗೊಳಿಸಿದರೂ ಈರುಳ್ಳಿ ಬೆಲೆ ಮಾತ್ರ ದಿನೇ ದಿನೇ ಏರಿಕೆಯಾಗುತ್ತಿದೆ. ಈರುಳ್ಳಿ ಲಭ್ಯತೆ ಹೆಚ್ಚಿಸಿ, ದರ ಕಡಿಮೆಗೊಳಿಸಲು ಸರ್ಕಾರ ನಾನಾ ಪ್ರಯತ್ನ ನಡೆಸುತ್ತಿದ್ದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಹೀಗೆ ಯಾಕಾಗುತ್ತದೆ ಎಂಬ ಪ್ರಶ್ನೆಗೆ ಸರ್ಕಾರದ ಬಳಿಯೂ ಉತ್ತರವಿಲ್ಲ. ಸದ್ಯ 1 ಕೆಜಿ ಈರುಳ್ಳಿ ದರ 80 ರಿಂದ 100 ರೂಪಾಯಿ ಆಗಿದ್ದು, ಗ್ರಾಹಕರು ಕಣ್ಣೀರು ಸುರಿಸಬೇಕಾದ ಅನಿವಾರ್ಯತೆ ಬಂದೊದಗಿದೆ.  

ಈರುಳ್ಳಿ ಹೆಚ್ಚುವಾಗ ಮಾತ್ರ ಕಣ್ಣೀರು ಆರೋಗ್ಯಕ್ಕೆ ಪನ್ನೀರು!