ಪುಣೆ ಆಯ್ತು, ಈಗ ರಾಜ್ಯದ ಈರುಳ್ಳಿಯೂ ಕೆಜಿಗೆ 100 ರೂ
ಕರ್ನಾಟಕದಲ್ಲೂ ಈರುಳ್ಳಿ ಬೆಲೆ ಏರಿಕೆ | ಹುಬ್ಬಳ್ಳಿ, ಬಾಗಲಕೋಟೆ ಈರುಳ್ಳಿ ಬೆಲೆಯಲ್ಲಿ ಭಾರಿ ಏರಿಕೆ | ಸಗಟು ಮಾರುಕಟ್ಟೆಯಲ್ಲಿ ಕೇಜಿಗೆ 80ರಿಂದ 100 ರು.ಗೆ ಮಾರಾಟ
ಬೆಂಗಳೂರು (ನ. 27): ಮಹಾರಾಷ್ಟ್ರದ ಪುಣೆ ಈರುಳ್ಳಿ ಬೆಲೆ ಏರಿಕೆ ಬೆನ್ನಲ್ಲೇ ರಾಜ್ಯದಲ್ಲಿ ಬೆಳೆಯುವ ಈರುಳ್ಳಿಯ ಧಾರಣೆಯೂ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ರಾಜ್ಯದಲ್ಲಿ ಬೆಳೆಯುವ ಗುಣಮಟ್ಟದ ಈರುಳ್ಳಿ ದರ ಸಗಟು ಮಾರುಕಟ್ಟೆಯಲ್ಲಿ ಶತಕ ದಾಖಲಿಸಿದ್ದು, ಕೆ.ಜಿ.ಗೆ 80 ರಿಂದ 100 ರು. ಮುಟ್ಟಿದೆ.
ರಾಜ್ಯದ ಗದಗ, ಹುಬ್ಬಳ್ಳಿ, ಬಾಗಲಕೋಟೆ ಒಳಗೊಂಡಂತೆ ವಿವಿಧ ಜಿಲ್ಲೆಗಳಲ್ಲಿ ಬೆಳೆದಿರುವ ಅತ್ಯುತ್ತಮ ಗುಣಮಟ್ಟದ ಹೊಸ ಈರುಳ್ಳಿ ಸಗಟು ದರ ಕೆ.ಜಿ.ಗೆ 80ರಿಂದ 100 ರು. ಮುಟ್ಟಿದೆ. ಮಧ್ಯಮ ಗುಣಮಟ್ಟದ ಈರುಳ್ಳಿ ಕೆ.ಜಿ.ಗೆ 60ರಿಂದ 80 ರು.ನಷ್ಟಿದೆ. ಇನ್ನು ಸಾಧಾರಣ ಗುಣಮಟ್ಟದ ಈರುಳ್ಳಿ 30ರಿಂದ 50 ರು.ಗೆ ಲಭ್ಯವಾಗುತ್ತಿದೆ.
ಕೆ.ಜಿ. ಈರುಳ್ಳಿಗೆ 100 ರೂ: ಸಾರ್ವಕಾಲಿಕ ದಾಖಲೆ!
ದೇಶದಲ್ಲಿ ಶೇ.45ರಷ್ಟುಈರುಳ್ಳಿ ಉತ್ಪಾದನೆಯಾಗುವುದು ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ. ಕರ್ನಾಟಕ, ಮಹಾರಾಷ್ಟ್ರ, ಮಧ್ಯಪ್ರದೇಶ, ಗುಜರಾತ್, ರಾಜಸ್ಥಾನ, ಉತ್ತರ ಪ್ರದೇಶ ಮತ್ತು ಬಿಹಾರದಂತಹ ಅತಿ ಹೆಚ್ಚು ಈರುಳ್ಳಿ ಉತ್ಪಾದಿಸುವ ರಾಜ್ಯಗಳಲ್ಲಿ ಮಿತಿ ಮೀರಿ ಸುರಿದ ಮಳೆಗೆ ಬೆಳೆ ನಾಶವಾಗಿರುವುದರಿಂದ ಮಾರುಕಟ್ಟೆಯಲ್ಲಿ ಬೆಲೆ ಏರಿಕೆ ತಲ್ಲಣ ಸೃಷ್ಟಿಸಿದೆ. ಹೀಗಾಗಿ ದೇಶ ಸೇರಿದಂತೆ ವಿದೇಶಗಳಲ್ಲೂ ಬೆಲೆ ಹೆಚ್ಚಳವಾಗುತ್ತಿದೆ. ಈರುಳ್ಳಿ ಕ್ವಿಂಟಲ್‌ಗೆ 10000 ರು.ವರೆಗೆ ಬೆಲೆ ಇದೆ ಎಂದು ಎಪಿಎಂಸಿಯ ಈರುಳ್ಳಿ ವರ್ತಕರಾದ ರವಿಕುಮಾರ್ ಮಾಹಿತಿ ನೀಡಿದರು.
ಇಳಿಕೆಯಾಗದ ಬೆಳ್ಳುಳ್ಳಿ ದರ:
ಮಾರುಕಟ್ಟೆಯಲ್ಲಿ ಈರುಳ್ಳಿ ಬೆಳೆಯಂತೆ ಬಂಗಾರದ ಬೆಲೆ ಗಿಟ್ಟಿಸಿಕೊಂಡಿದ್ದ ಬೆಳ್ಳುಳ್ಳಿ ದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಈಗಲೂ ಚಿಲ್ಲರೆ ಮಾರುಕಟ್ಟೆವ್ಯಾಪಾರಿಗಳು ಬೆಳ್ಳುಳ್ಳಿ ಕೆ.ಜಿ.ಗೆ 200ರಿಂದ 250 ರು.ವರೆಗೆ ಮಾರಾಟ ಮಾಡುತ್ತಿದ್ದಾರೆ. ಆದರೆ, ಸಗಟು ಮಾರುಕಟ್ಟೆಯಲ್ಲಿ ಬೆಲೆ ಕೊಂಚ ಕಡಿಮೆಯಾಗಿದೆ ಎನ್ನಲಾಗುತ್ತಿದೆ. ಕಳೆದ 15 ದಿನಗಳ ಹಿಂದೆ ಕೆ.ಜಿ.ಗೆ 180 ರು. ಇದ್ದ ಬೆಳ್ಳುಳ್ಳಿ ದರ ಸಗಟು ಮಾರುಕಟ್ಟೆಯಲ್ಲಿ ಕೆ.ಜಿ.ಗೆ 75ರಿಂದ 160 ರು.ಗೆ ಕುಸಿದಿದೆ ಎಂದು ಮಾರುಕಟ್ಟೆಮೂಲಗಳು ಹೇಳಿವೆ.