ಬಸ್ಕಿ ಹೊಡೆದು, ಶಿರಬಾಗಿ ನಮಿಸಿ ದೇವರ ಕಿರೀಟ ಕದ್ದ!| ಹೈದರಾಬಾದ್‌ನ ಅಬಿಡ್ಸ್‌ನಲ್ಲಿ ಘಟನೆ

ಹೈದರಾಬಾದ್‌[ನ.23]: ಕಳ್ಳರಿಗೂ ಪಾಪಪ್ರಜ್ಞೆ ಕಾಡುತ್ತದೆ ಎನ್ನುವುದಕ್ಕೆ ಇದೊಂದು ಉದಾಹರಣೆ. ದೇವರ ಮೂರ್ತಿಯ ಕಿರೀಟವನ್ನು ಕದಿಯಲು ಬಂದ ಕಳ್ಳನೊಬ್ಬ ತನ್ನನ್ನು ಕ್ಷಮಿಸುವಂತೆ ಪ್ರಾರ್ಥಿಸಿದ ಬಳಿಕ ಕಳ್ಳತನ ನಡೆಸಿದ್ದಾನೆ.

ಹೈದರಾಬಾದ್‌ನ ಅಬಿಡ್ಸ್‌ನಲ್ಲಿ ಈ ಘಟನೆ ನಡೆದಿದೆ. ದುರ್ಗಾ ಭವಾನಿ ದೇವಾಲಯಕ್ಕೆ ಬುಧವಾರ ಸಂಜೆ 6.20ರ ವೇಳೆಗೆ ಬಂದ ಕಳ್ಳ ದೇವಿಯ ಬೆಳ್ಳಿಯ ಕಿರೀಟವನ್ನು ಕದ್ದು ಪರಾರಿಯಾಗಿದ್ದಾನೆ. ಆದರೆ, ಕಳ್ಳತನಕ್ಕೂ ಮುನ್ನ ಆತ ದೇವರ ಮುಂದೆ ಕಿವಿ ಹಿಡಿದು ಬಸ್ಕಿ ಹೊಡೆದಿದ್ದಾನೆ.

Scroll to load tweet…

ಶಿರಬಾಗಿ ನಮಸ್ಕರಿಸಿ ದೇವಿಯ ಕಿರೀಟವನ್ನು ತನ್ನ ಬಟ್ಟೆಯ ಒಳಗಡೆ ಬಚ್ಚಿಟ್ಟುಕೊಂಡು ಬೈಕ್‌ನಲ್ಲಿ ಪರಾರಿಯಾಗಿದ್ದಾನೆ. ಘಟನೆ ಸಿಸಿಟೀವಿಯಲ್ಲಿ ಸೆರೆಯಾಗಿದ್ದು, ಕಳ್ಳತನದ ದೃಶ್ಯ ವೈರಲ್‌ ಆಗಿದೆ. 35 ತೊಲೆಯ ಬೆಳ್ಳಿಯ ಕಿರೀಟ ಸುಮಾರು 10,000 ರು. ಬೆಲೆಯುಳ್ಳದ್ದು ಎಂದು ಪೊಲೀಸರು ತಿಳಿಸಿದ್ದಾರೆ.