ದೇಶದ ಚುನಾವಣಾ ಪ್ರಕ್ರಿಯೆಯಲ್ಲಿ ದೋಷವಿದೆ: ರಾಹುಲ್ ಆರೋಪ
ಚುನಾವಣೆಯ ಪಾರದರ್ಶಕತೆಯನ್ನು ಖಚಿತಪಡಿಸುವುದು ಆಯೋಗದ ಕೆಲಸ ಹಾಗೂ ಪವಿತ್ರ ಜವಾಬ್ದಾರಿ ಎಂದು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ನವದೆಹಲಿ: ‘ಭಾರತದ ಚುನಾವಣಾ ಪ್ರಕ್ರಿಯೆಯಲ್ಲಿ ಗಂಭೀರ ದೋಷವಿದ್ದು, ಚುನಾವಣೆ ಪಾರದರ್ಶಕವಾಗಿ ನಡೆಯುವಂತೆ ಚುನಾವಣಾ ಆಯೋಗ ನೋಡಿಕೊಳ್ಳಬೇಕು’ ಎಂದು ವಿಪಕ್ಷ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಕಾಂಗ್ರೆಸ್‌ನ ನೂತನ ಕಚೇರಿ ಉದ್ಘಾಟನೆ ಬಳಿಕ ಮಾತನಾಡಿದ ಅವರು, ‘ಮಹಾರಾಷ್ಟ್ರದಲ್ಲಿ ಲೋಕಸಭೆ ಚುನಾವಣೆ ಹಾಗೂ ವಿಧಾನಸಭೆ ಚುನಾವಣೆ ನಡುವೆ ಬರೋಬ್ಬರಿ 1 ಕೋಟಿ ಮತದಾರರು ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. ಇದನ್ನು ಪರಿಶೀಲಿಸಲು ರಾಜ್ಯದ ಮತದಾರರ ಪಟ್ಟಿ ಕೇಳಿದರೆ, ಅದನ್ನು ಕೊಡಲು ಚುನಾವಣಾ ಆಯೋಗ ನಿರಾಕರಿಸುತ್ತಿದೆ’ ಎಂದು ಆರೋಪಿಸಿದ್ದಾರೆ.
ಅಂತೆಯೇ, ‘ಚುನಾವಣೆಯ ಪಾರದರ್ಶಕತೆಯನ್ನು ಖಚಿತಪಡಿಸುವುದು ಆಯೋಗದ ಕೆಲಸ ಹಾಗೂ ಪವಿತ್ರ ಜವಾಬ್ದಾರಿ. ಆದರೆ, ಹರ್ಯಾಣ ಹಾಗೂ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯ ಮತದಾರರ ಪಟ್ಟಿ ನೀಡಲು ಅದು ನಿರಾಕರಿಸುತ್ತಿದೆ’ ಎಂದರು.
ಇದನ್ನೂ ಓದಿ: ಭಾಗವತ್ರದ್ದು ದೇಶದ್ರೋಹದ ಹೇಳಿಕೆ, ಇದು ಭಾರತೀಯರಿಗೆ ಮಾಡಿದ ಅವಮಾನ: ರಾಹುಲ್ ಗಾಂಧಿ