ಗೂಗಲ್​ ಮ್ಯಾಪ್​ನಲ್ಲಿ ಪ್ರತಿನಿತ್ಯವೂ ನೀವು ಕೇಳುವ ಸುಂದರ ಹೆಣ್ಣಿನ ದನಿ ಯಾರದ್ದು ಎನ್ನುವುದು ನಿಮಗೆ ಗೊತ್ತಾ? ಈ ಕಲಾವಿದೆಯ ಸ್ಟೋರಿ ಇಲ್ಲಿದೆ ನೋಡಿ...

ಗೂಗಲ್ ಮ್ಯಾಪ್ ಎನ್ನುವುದು ಇಂದು ಬಹುತೇಕ ಮಂದಿ ಬಳಸುತ್ತಿದ್ದಾರೆ. ಅದರಲ್ಲಿಯೂ ವಾಹನ ಸವಾರರಿಗೆ ಇದು ಅತ್ಯಂತ ಪ್ರಿಯವಾಗಿದೆ. ಕೆಲವೊಮ್ಮೆ ಎಡವಟ್ಟು ಆಗಿ ಎಲ್ಲೆಲ್ಲೋ ವಾಹನ ಚಲಾಯಿಸಿ ಪ್ರಾಣ ಕಳೆದುಕೊಂಡವರೂ ಇದ್ದಾರೆ ಅನ್ನಿ. ಆದರೆ ಈ ಮ್ಯಾಪ್ ಬಳಸುವಾಗ ಜಾಗರೂಕರಾಗಿ ಬಳಸಿದರೆ ಇದು ಅತ್ಯಂತ ಸೂಕ್ತವಾಗಿರುವ ನಕ್ಷೆಯಾಗಿದೆ. ಇದರಲ್ಲಿ ನೀವು ಬಲಕ್ಕೆ ತಿರುಗಿ, ಎಡಕ್ಕೆ ತಿರುಗಿ, 50 ಮೀಟರ್​ ಮುಂದೆ ಹೋಗಿ... ಹೀಗೆ ಕೇಳುವುದು ಮಾಮೂಲು. ಈ ಸುಮಧುರ ದನಿ ಯಾರದ್ದಿರಬಹುದು ಎಂದು ಬಹುತೇಕ ಮಂದಿ ತಲೆಯನ್ನೇನೂ ಕೆಡಿಸಿಕೊಂಡಿರಲ್ಲ ಬಿಡಿ. ಆದರೂ ಗೂಗಲ್​ ಮ್ಯಾಪ್​ ಬಳಸುವ ಆರಂಭದಲ್ಲಿ ಆಕೆಯ ಮಧುರ ದನಿಗೆ ಮರುಳಾಗುವವರೂ ಇರುತ್ತಾರೆ ಎನ್ನುವುದೂ ಸತ್ಯವೇ.

ಹಾಗಿದ್ದರೆ ನಿಮಗೆ ದಾರಿ ತೋರುವ ಈಕೆ ಯಾರು ಎನ್ನುವುದು ನಿಮಗೆ ಗೊತ್ತೆ? ವಾಸ್ತವವಾಗಿ, ಗೂಗಲ್ ಮ್ಯಾಪ್‌ನಲ್ಲಿ ಧ್ವನಿ ಕೇಳಿಸುವ ಮಹಿಳೆಯ ಹೆಸರು ಕರೆನ್ ಜಾಕೋಬ್‌ಸೆನ್. ಇವರ ಪೂರ್ಣ ಹೆಸರು ಕರೆನ್ ಎಲಿಜಬೆತ್ ಜಾಕೋಬ್ಸೆನ್. ಅವರು ಆಸ್ಟ್ರೇಲಿಯಾ ಮೂಲದವರಾಗಿದ್ದು, ಪ್ರಸ್ತುತ ನ್ಯೂಯಾರ್ಕ್‌ನಲ್ಲಿ ವಾಸಿಸುತ್ತಿದ್ದಾರೆ. ಕರೆನ್ ವೃತ್ತಿಯಲ್ಲಿ ವಾಯ್ಸ್ ಓವರ್ ಕಲಾವಿದೆ, ಗಾಯಕಿ, ಸಂಯೋಜಕಿ ಮತ್ತು ಸಾಮಾಜಿಕ ಜಾಲತಾಣದ ಪ್ರಭಾವಿ. ಕರೆನ್ ಪ್ರಮುಖ ಪ್ರಶಸ್ತಿಗಳನ್ನು ನೀಡಿ ಗೌರವಿಸಲ್ಪಟ್ಟಿದ್ದಾರೆ. ಈಗ ಅವರ ಧ್ವನಿ ಗೂಗಲ್ ನಕ್ಷೆಗಳ ಮೂಲಕ ಜಗತ್ತಿನ ಕೋಟ್ಯಂತರ ಜನರನ್ನು ತಲುಪುತ್ತದೆ. 2011 ರಿಂದ 2014 ರವರೆಗೆ ಆಪಲ್ ಐಫೋನ್‌ಗಳು, ಐಪಾಡ್‌ಗಳು ಮತ್ತು ಐಪ್ಯಾಡ್‌ಗಳಲ್ಲಿನ ಸಿರಿ ಅಪ್ಲಿಕೇಶನ್‌ನಲ್ಲಿ ಕರೆನ್ ಜಾಕೋಬ್‌ಸೆನ್ ಅವರ ಧ್ವನಿಯನ್ನು ಬಳಸಿಕೊಳ್ಳಲಾಗಿದೆ.

ಇವರ ಸಾಧನೆ ಇಷ್ಟಕ್ಕೇ ಮುಗಿಯುವುದಿಲ್ಲ. ಇವರು ಅನೇಕ ಏಕ-ಮಹಿಳಾ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸುವ ಮೂಲಕ ಪ್ರಸಿದ್ಧಿ ಪಡೆದಿದ್ದಾರೆ. ಇದರಲ್ಲಿ ದಿ ಟ್ರಯಾಡ್, ದಿ ಲಾರಿ ಬೀಚ್‌ಮನ್ ಥಿಯೇಟರ್ ಮತ್ತು ದಿ ಪಬ್ಲಿಕ್ ಥಿಯೇಟರ್, ದಿ ಡ್ಯೂಪ್ಲೆಕ್ಸ್ ಮತ್ತು ದಿ ಬಿಟರ್ ಎಂಡ್ ಸೇರಿವೆ. ಜಾಕೋಬ್‌ಸೆನ್ ಎರಡು ಪುಸ್ತಕಗಳನ್ನು ಸಹ ಬರೆದಿದ್ದಾರೆ. ಇನ್ನು ಇವರ ಕುರಿತು ಇನ್ನೊಂದಿಷ್ಟು ಮಾಹಿತಿ ಹೇಳುವುದಾದರೆ, ಜನವರಿ 14, 1973 ರಂದು, ಆಸ್ಟ್ರೇಲಿಯಾದ ಕ್ವೀನ್ಸ್‌ಲ್ಯಾಂಡ್‌ನ ಮ್ಯಾಕೆಯಲ್ಲಿ ಇವರು ಜನಿಸಿದರು. ಚಿಕ್ಕ ವಯಸ್ಸಿನಲ್ಲಿಯೇ ಹಿನ್ನೆಲೆ ದನಿ ಕೊಡುವ ಮೂಲಕ ಫೇಮಸ್​ ಆದವರು ಇವರು. ಇದರಿಂದಾಗಿ ಅವರು ಧ್ವನಿ ತಂತ್ರಜ್ಞಾನದ ಜಗತ್ತಿನಲ್ಲಿ ಪ್ರಮುಖ ವ್ಯಕ್ತಿಯಾಗಿ ಗುರುತಿಸಿಕೊಂಡರು. ರೇಡಿಯೋ ಮತ್ತು ದೂರದರ್ಶನದಲ್ಲಿ ಆರಂಭಿಕ ಅನುಭವಗಳೊಂದಿಗೆ ಜಿಪಿಎಸ್‌ ವ್ಯವಸ್ಥೆಗಳಿಗೆ ಧ್ವನಿಯನ್ನು ಒದಗಿಸಲು ಆಯ್ಕೆಯಾದಾಗ ಇವರ ವಾಯ್ಸ್‌ಓವರ್ ವೃತ್ತಿಜೀವನವು ಮಹತ್ವದ ತಿರುವು ಪಡೆದುಕೊಂಡಿತು. ಇದರಿಂದ ಅವರಿಗೆ ಜಿಪಿಎಸ್ ಗರ್ಲ್ ಎಂಬ ಅಡ್ಡಹೆಸರೂ ನೀಡಲಾಗಿದೆ.

ಕನ್ಯಾಕುಮಾರಿಯ ಕೊನೆಯ ಬೀದಿಯಿಂದ ಹಿಡಿದು ನ್ಯೂಯಾರ್ಕ್‌ನ ಹೆದ್ದಾರಿಗಳು ಮತ್ತು ಟೋಕಿಯೊದ ರಸ್ತೆಗಳವರೆಗೆ ವಿಶ್ವಾದ್ಯಂತ ಜಾಕೋಬ್‌ಸೆನ್ ಅವರ ಧ್ವನಿಯು ಭೌಗೋಳಿಕ ಗಡಿಗಳನ್ನು ಮೀರಿದೆ. ವಿವಿಧ ಭಾಷೆಗಳು ಮತ್ತು ಉಚ್ಚಾರಣೆಗಳಲ್ಲಿ ಅವರ ಧ್ವನಿ ಕೇಳಿಬರುತ್ತದೆ. ಕೃತಕ ಬುದ್ಧಿಮತ್ತೆ ಮತ್ತು ಯಂತ್ರ ಕಲಿಕೆಯಲ್ಲಿನ ಆವಿಷ್ಕಾರಗಳಿಂದ ಬೇರೆ ಬೇರೆ ಭಾಷೆಗಳಲ್ಲಿಯೂ ಈಕೆಯ ದನಿಯನ್ನು ಡಬ್​ ಮಾಡಲಾಗಿದೆ.