ಕಾಠ್ಮಂಡು(ಡಿ.12): ನೇಪಾಳ ಮತ್ತು ಭಾರತದ ನಡುವಿನ ಗಡಿ ಬಿಕ್ಕಟ್ಟು ನಿವಾರಣೆಗೆ ಕಳೆದ ಎರಡು ತಿಂಗಳುಗಳಿಂದ ಭಾರತ ಸರ್ಕಾರ ನೇಪಾಳಕ್ಕೆ ಒಬ್ಬರ ಹಿಂದೆ ಒಬ್ಬರಂತೆ ಉನ್ನತಾಧಿಕಾರಿಗಳನ್ನು ಕಳುಹಿಸುತ್ತಿದೆ. ಸದ್ಯ ಆಡಳಿತಾರೂಢ ಪಕ್ಷ ಬಿಜೆಪಿ ತನ್ನ ವಿದೇಶಾಂಗ ಇಲಾಖೆಯ ಮುಖ್ಯಸ್ಥ ವಿಜಯ್‌ ಚೌಥಾಯಿವಾಲೆ ಅವರನ್ನು ನೇಪಾಳ ರಾಜಧಾನಿ ಕಾಠ್ಮಂಡುವಿಗೆ ಕಳುಹಿಸಿಕೊಟ್ಟಿದೆ.

ನೇಪಾಳದ ಆಡಳಿತ ಪಕ್ಷ ಎನ್‌ಸಿಪಿಯ ಸಾಮಾನ್ಯ ಕಾರ‍್ಯದರ್ಶಿ ಬಿಷ್ಣು ಪೌಡೇಲ್‌ ಅವರು ಆಹ್ವಾನ ನೀಡಿದ ಹಿನ್ನೆಲೆಯಲ್ಲಿ ವಿಜಯ್‌ ಅವರು ಗುರುವಾರ ನೇಪಾಳಕ್ಕೆ ಭೇಟಿ ನೀಡಿ ಪ್ರಧಾನಿ ಕೆ.ಪಿ. ಶರ್ಮಾ ಓಲಿ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ.

ಈ ವೇಳೆ ಉಭಯ ರಾಷ್ಟ್ರಗಳ ನಡುವಿನ ಸಂಬಂಧ ಸುಧಾರಣೆ ಬಗ್ಗೆ ಸಂವಾದ ನಡೆಸಿರುವುದಾಗಿ ವರದಿಯಾಗಿದೆ. ಇದಕ್ಕೂ ಮೊದಲು ಸೇನಾ ಮುಖ್ಯಸ್ಥ ಮನೋಜ್‌ ಮುಕುಂದ್‌ ನರವಾಣೆ, ವಿದೇಶಾಂಗ ಕಾರ‍್ಯದರ್ಶಿ ಹರ್ಷವರ್ಧನ ಶ್ರಿಂಗ್ಲಾ ಮತ್ತು ರಾ ಮುಖ್ಯಸ್ಥ ಸಮಂತ್‌ ಕುಮಾರ್‌ ಗೋಯಲ್‌ ನೇಪಾಳಕ್ಕೆ ಭೇಟಿ ನೀಡಿದ್ದರು.

ಶುಕ್ರವಾರ ಈ ಕುರಿತು ಟ್ವೀಟ್‌ ಮಾಡಿರುವ ಚೌತೈವಾಲೆ ‘ಉಭಯ ದೇಶಗಳ ಹಿತಾಸಕ್ತಿ ಸಂಬಂಧಿಸಿದಂತೆ ಚರ್ಚೆ ನಡೆಸಿದೆವು. ತಮ್ಮ ಆಲೋಚನೆಗಳನ್ನು ಹಂಚಿಕೊಂಡಿದ್ದಕ್ಕೆ ನೇಪಾಳ ಪ್ರಧಾನಿ ಕೆ.ಪಿ.ಶರ್ಮಾ ಅವರಿಗೆ ಧನ್ಯವಾದ’ ಎಂದಿದ್ದಾರೆ.