Asianet Suvarna News Asianet Suvarna News

ರಾಮಸೇತು ಬಗ್ಗೆ ಸ್ವಾಮಿ ಸಲ್ಲಿಸಿದ್ದ ಅರ್ಜಿ ವಿಚಾರಣೆಗೆ ಸುಪ್ರೀಂಕೋರ್ಟ್ ಸಮ್ಮತಿ

ರಾಮಸೇತುವನ್ನು ರಾಷ್ಟ್ರೀಯ ಪಾರಂಪರಿಕ ಸ್ಮಾರಕವನ್ನಾಗಿ ಘೋಷಣೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಗೆ ಸುಪ್ರೀಂಕೋರ್ಟ್ ಒಪ್ಪಿಗೆ ಸೂಚಿಸಿದೆ.

The Supreme Court agreed to hear the petition filed by Swami regarding Ram Setu akb
Author
First Published Feb 17, 2023, 11:10 AM IST

ನವದೆಹಲಿ: ರಾಮಸೇತುವನ್ನು ರಾಷ್ಟ್ರೀಯ ಪಾರಂಪರಿಕ ಸ್ಮಾರಕವನ್ನಾಗಿ ಘೋಷಣೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಗೆ ಸುಪ್ರೀಂಕೋರ್ಟ್ ಒಪ್ಪಿಗೆ ಸೂಚಿಸಿದೆ. ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ಮತ್ತು ನ್ಯಾ. ಪಿ.ಎಸ್‌.ನರಸಿಂಹ ಅವರಿದ್ದ ಪೀಠ, ಇಲ್ಲಿಯವರೆಗೆ ರಾಮಸೇತು ವಿಚಾರವಾಗಿ ಯಾವುದೇ ನಿರ್ಧಾರ ಕೈಗೊಳ್ಳಲಾಗಿಲ್ಲ ಎಂಬುದನ್ನು ಗಮನಿಸಿ ಬಿಜೆಪಿ ಸಂಸದ ಸುಬ್ರಮಣಿಯನ್‌ ಸ್ವಾಮಿ ಸಲ್ಲಿಸಿರುವ ಪಿಐಎಲ್‌ ವಿಚಾರಣೆಗೆ ಸಮ್ಮತಿ ನೀಡಿದೆ. ರಾಮಸೇತುವನ್ನು(Ram Setu) ರಾಷ್ಟ್ರೀಯ ಸ್ಮಾರಕವನ್ನಾಗಿ ಘೋಷಿಸುವ ಕುರಿತಾಗಿ ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ ಎಂದು ಜ.19ರಂದು ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ (Solicitor General Tushar Mehta)ನ್ಯಾಯಾಲಯಕ್ಕೆ ತಿಳಿಸಿದ್ದರು.

ರಾಮಾಯಣದ ಕಾಲದಲ್ಲಿ ಲಂಕೆಗೆ ಹೋಗಲು ಶ್ರೀರಾಮ ನಿರ್ಮಿಸಿದ ಎನ್ನಲಾದ ರಾಮಸೇತುವನ್ನು ರಾಷ್ಟ್ರೀಯ ಪಾರಂಪರಿಕ ಸ್ಮಾರಕ ಎಂದು ಘೋಷಿಸುವ ಬಗ್ಗೆ ಪರಿಶೀಲಿಸುತ್ತಿದ್ದೇವೆ ಎಂದು ಕೇಂದ್ರ ಸರ್ಕಾರ ಕಳೆದ ಜನವರಿಯಲ್ಲಿ ಸುಪ್ರೀಂಕೋರ್ಟ್‌ಗೆ ತಿಳಿಸಿತ್ತು. ಬಿಜೆಪಿ ನಾಯಕ ಸುಬ್ರಮಣಿಯನ್‌ ಸ್ವಾಮಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ವೇಳೆ  ಕೇಂದ್ರ ಸರ್ಕಾರ ಈ ಮಾಹಿತಿ ನೀಡಿತ್ತು. ಇದೇ ವೇಳೆ, ಅಗತ್ಯಬಿದ್ದರೆ ನೀವು ಕೇಂದ್ರ ಸರ್ಕಾರಕ್ಕೆ ಈ ಕುರಿತು ಹೆಚ್ಚಿನ ಮಾಹಿತಿ ನೀಡಬಹುದು ಎಂದು ಸುಬ್ರಮಣಿಯನ್‌ ಸ್ವಾಮಿ ಅವರಿಗೆ ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ಅವರ ಪೀಠ ಹೇಳಿತ್ತು.

ರಾಮಸೇತುಗೆ ಸಿಗಲಿದೆಯೇ ರಾಷ್ಟ್ರೀಯ ಪಾರಂಪರಿಕ ಸ್ಥಾನ?

ಅದಕ್ಕೆ ಉತ್ತರಿಸಿದ ಸುಬ್ರಮಣಿಯನ್‌ ಸ್ವಾಮಿ (Subramanian Swamy), ‘ನಾನು ಯಾರನ್ನೂ ಭೇಟಿ ಮಾಡುವುದಿಲ್ಲ. ಇದು ಬಿಜೆಪಿಯ ಚುನಾವಣಾ ಪ್ರಣಾಳಿಕೆಯಲ್ಲೇ ಇತ್ತು. ಅವರೇ ಆರು ವಾರಗಳಲ್ಲಿ ನಿರ್ಧರಿಸಲಿ. ನಾನು ಮತ್ತೆ ಸುಪ್ರೀಂಕೋರ್ಟ್‌ಗೆ ಬರುತ್ತೇನೆ’ ಎಂದು ಹೇಳಿದರು. ಅದಕ್ಕೆ ಒಪ್ಪಿದ ಸುಪ್ರೀಂಕೋರ್ಟ್‌, ಕೇಂದ್ರ ಸರ್ಕಾರ (central government) ತೆಗೆದುಕೊಳ್ಳುವ ನಿರ್ಧಾರ ನಿಮಗೆ ತೃಪ್ತಿ ತರದಿದ್ದರೆ ಮಧ್ಯಂತರ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿತು.

ವಿಚಾರಣೆಯ ವೇಳೆ ಕೇಂದ್ರ ಸರ್ಕಾರದ ಪರವಾಗಿ ಸುಪ್ರೀಂಕೋರ್ಟ್‌ ಗೆ ಮಾಹಿತಿ ಸಲ್ಲಿಸಿದ ಸಾಲಿಸಿಟರ್‌ ಜನರಲ್‌ (Solicitor General) ತುಷಾರ್‌ ಮೆಹ್ತಾ (Tushar Mehta), ರಾಮಸೇತುವಿಗೆ ರಾಷ್ಟ್ರೀಯ ಪಾರಂಪರಿಕ ಸ್ಮಾರಕ ಸ್ಥಾನಮಾನ ನೀಡುವ ಕುರಿತಾದ ಪ್ರಕ್ರಿಯೆ ಕೇಂದ್ರ ಸಂಸ್ಕೃತಿ ಸಚಿವಾಲಯದಲ್ಲಿ (Union Ministry of Culture) ಪ್ರಗತಿಯಲ್ಲಿದೆ ಎಂದು ಹೇಳಿದರು. ಅದನ್ನು ಪುರಸ್ಕರಿಸಿದ ನ್ಯಾಯಪೀಠ, ಮುಂದಿನ ವಿಚಾರಣೆಯನ್ನು ಫೆಬ್ರವರಿಯಲ್ಲಿ ನಡೆಸುವುದಾಗಿ ಹೇಳಿತು. 

ರಾಮಸೇತು ಇತ್ತು ಎನ್ನಲಾಗದು, ಕುರುಹು ಇದೆ: ಕೇಂದ್ರ ಸರ್ಕಾರ; ಕಾಂಗ್ರೆಸ್‌ ಆಕ್ರೋಶ

ಭಾರತ-ಶ್ರೀಲಂಕಾ ನಡುವಿನ ರಾಮಸೇತುವಿನ ಇರುವಿಕೆ ಬಗ್ಗೆ ಭಾರತದಲ್ಲಿ ಪರ-ವಿರೋಧ ಚರ್ಚೆ ನಡೆದಿರುವ ನಡುವೆಯೇ, 2018ರಲ್ಲಿ ಡಿಸ್ಕವರಿಯ ‘ಸೈನ್ಸ್ ಚಾನೆಲ್’ನಲ್ಲಿ ರಾಮಸೇತುವಿನ ಬಗ್ಗೆ ವಿಶೇಷ ಕಾರ್ಯಕ್ರಮವೊಂದು ಪ್ರಸಾರ ಮಾಡಿತ್ತು. ಆ ಕಾರ್ಯಕ್ರಮದಲ್ಲಿ, ಅಮೆರಿಕದ ಪುರಾತತ್ವ ತಜ್ಞರು ರಾಮಸೇತು ಎಂಬುದು ಮಾನವನಿರ್ಮಿತ ಎಂದು ಹೇಳಿದ್ದರು.  ರಾಮೇಶ್ವರದಿಂದ ಶ್ರೀಲಂಕಾದ ಮನ್ನಾರ್ ದ್ವೀಪದ ನಡುವೆ 50 ಕಿ.ಮೀ. ಅಂತರದಲ್ಲಿ ಈ ಸೇತುವೆ ಚಾಚಿಕೊಂಡಿದೆ. ಇದು ಮಾನವನಿರ್ಮಿತ ಎಂದು ಅಮೆರಿಕದ ಪುರಾತತ್ವ ತಜ್ಞರು ಹೇಳಿದ್ದು, ಈ ಪ್ರೋಮೋವನ್ನು 11 ಲಕ್ಷ ಜನ ಅಂದು ವೀಕ್ಷಿಸಿದ್ದರು. 

ರಾಮಸೇತುವನ್ನು ಒಡೆದು ಸೇತುಸಮುದ್ರಂ ಹಡಗು ಯೋಜನೆಯನ್ನು ಯುಪಿಎ-1 ಸರ್ಕಾರವು 2005ರಲ್ಲಿ ಕೈಗೆತ್ತಿಕೊಳ್ಳಲು ನಿರ್ಧರಿಸಿತ್ತು. ಆದರೆ ಇದು ಶ್ರೀರಾಮನು ಲಂಕೆಗೆ ತೆರಳುವಾಗ ವಾನರ ಸೇನೆ ನಿರ್ಮಿಸಿದ್ದು, ಇದನ್ನು ಒಡೆಯಬಾರದು ಎಂದು ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಆ ಕಾರಣ ಯೋಜನೆ ನೆನೆಗುದಿಗೆ ಬಿದ್ದಿತ್ತು.

Follow Us:
Download App:
  • android
  • ios