ಜುಲೈ 18 ರಂದು ರಾಷ್ಟ್ರಪತಿ ಚುನಾವಣೆ ನಡೆಯಲಿದೆ. ಅದೇ ಸಮಯದಲ್ಲಿ, ಜುಲೈ 21 ರಂದು, ದೇಶದ ಹೊಸ ರಾಷ್ಟ್ರಪತಿ ಯಾರಾಗಲಿದ್ದಾರೆ ಎನ್ನುವುದು ನಿರ್ಧಾರವಾಗಲಿದೆ. ಈ ಬಾರಿ ದ್ರೌಪದಿ ಮುರ್ಮು ಅವರು ರಾಷ್ಟ್ರಪತಿ ಹುದ್ದೆಗೆ ಎನ್‌ಡಿಎ ಅಭ್ಯರ್ಥಿಯಾಗಿದ್ದರೆ, ವಿರೋಧ ಪಕ್ಷದ ಅಭ್ಯರ್ಥಿಯಾಗಿ ಯಶವಂತ್ ಸಿನ್ಹಾ ಕಣಕ್ಕಿಳಿದಿದ್ದಾರೆ. ರಾಷ್ಟ್ರಪತಿ ಚುನಾವಣೆಯ ಸಂದರ್ಭದಲ್ಲಿ ರಾಷ್ಟ್ರಪತಿಗಳ ಸಾರೋಟು ಕುರಿತಾದ ವಿಶೇಷ ಸಂಗತಿ ಇಲ್ಲಿದೆ.
ನವದೆಹಲಿ (ಜುಲೈ 14): ಇಂದು ಭಾರತದ ರಾಷ್ಟ್ರಪತಿಗಳು ಸಾಗುವ ಈ ಅಧಿಕೃತ ಸಾರೋಟು, ಭಾರತ ಸರ್ಕಾರ ನಿರ್ಮಿಸಿದ್ದಲ್ಲ. ಇದು ಬ್ರಿಟಿಷರ ಕಾಲದ ಸಾರೋಟು. ವೈಸ್ ರಾಯ್ ಬಳಸುತ್ತಿದ್ದ ಈ ಸಾರೋಟನ್ನು ಸ್ವಾತಂತ್ರ್ಯದ ಬಳಿಕ ಯಾರಿಗೆ ಸಿಗಬೇಕು ಎನ್ನುವುದರ ಬಗ್ಗೆಯೇ ದೊಡ್ಡ ಚರ್ಚೆ ನಡೆದಿತ್ತು. 1947ರಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವೆ ದೇಶ ಮಾತ್ರವಲ್ಲ, ರಾಷ್ಟ್ರಪತಿ ಭವನದ ಹೆಚ್ಚಿನ ವಸ್ತುಗಳು ಇಬ್ಬಾಗವಾಗಿದ್ದವು. ಆದರೆ, ರಾಷ್ಟ್ರಪತಿ ಸಾರೋಟನ್ನು ಯಾರು ಪಡೆಯಬೇಕು ಎನ್ನುವ ವಿಚಾರ ಮಾತ್ರ ಪರಿಹಾರವಾಗದೇ ಉಳಿದುಕೊಂಡಿತ್ತು. ಭಾರತ ಹಾಗೂ ಪಾಕಿಸ್ತಾನದ ಅಧಿಕಾರಿಗಳು ಈ ಸಾರೋಟು ತಮಗೆ ಬೇಕೇ ಬೇಕು ಎಂದು ಪಟ್ಟಿ ಹಿಡಿದು ಕುಳಿತಿದ್ದವು. ಕೊನೆಗೆ ಟಾಸ್ ಮಾಡುವ ಮೂಲಕ ಇದನ್ನು ನಿರ್ಧಾರ ಮಾಡಲಾಗಿತ್ತು. ಟಾಸ್ ನಲ್ಲಿ ಗೆಲುವು ಕಂಡ ಭಾರತ, ಇಂದಿಗೂ ಅದನ್ನು ತನ್ನ ಸ್ಮರಣೀಯ ವಸ್ತುವಾಗಿ ರಾಷ್ಟ್ರಪತಿ ಭವನದಲ್ಲಿ ಉಳಿಸಿಕೊಂಡಿದೆ. ಸ್ವರ್ಣ ಲೇಪಿತ ಕುದುರೆ ಎಳೆಯುವ ಸಾರೋಟು, ಬ್ರಿಟಿಷರ ಆಳ್ವಿಕೆಯಲ್ಲಿ ವೈಸ್ ರಾಯ್ ಬಳಕೆ ಮಾಡುತ್ತಿದ್ದರು. 1947ರಲ್ಲಿ ಸ್ವಾತಂತ್ರ್ಯ ದೊರಕಿದ ಬಳಿಕ, ಗವರ್ನರ್ ಜನರಲ್ ಅವರ ಬಾಡಿಗಾರ್ಡ್‌ಗಳು, ಈಗ ಅಧ್ಯಕ್ಷರ ಬಾಡಿಗಾರ್ಡ್‌ಗಳು ಎಂದು ಕರೆಸಿಕೊಳ್ಳುವವರು, 2:1 ರ ಅನುಪಾತದಲ್ಲಿ ರಾಷ್ಟ್ರಪತಿ ಭವನದಲ್ಲಿದ್ದ ವಸ್ತುಗಳನ್ನು ಭಾರತ ಹಾಗೂ ಪಾಕಿಸ್ತಾನಕ್ಕೆ ಹಂಚಿಕೆ ಮಾಡಿದ್ದರು. ಆದರೆ, ವೈಸ್ ರಾಯ್ ಅವರ ಸಾರೋಟಿನ ವಿಚಾರಕ್ಕೆ ಬಂದಾಗ ಭಾರತ-ಪಾಕಿಸ್ತಾನ ದೇಶಗಳು ಇದು ತಮಗೇ ಬೇಕು ಎಂದು ಪಟ್ಟು ಹಿಡಿದಿದ್ದವು.
ಕೊನೆಗೆ ಕ್ರಿಕೆಟ್‌ನಲ್ಲಿ (Cricket) ಆಗುವಂತೆ ಟಾಸ್ (Toss) ಮೂಲಕ ಇದು ಯಾರಿಗೆ ಸೇರಬೇಕು ಎನ್ನುವುದನ್ನು ನಿರ್ಧಾರ ಮಾಡಲಾಗಿತ್ತು. ಭಾರತದ ರಾಷ್ಟ್ರಪತಿಗಳ ರೆಜಿಮೆಂಟ್‌ನ ಮೊದಲ ಕಮಾಂಡೆಂಟ್ ಆಗಿದ್ದ ಲೆಫ್ಟಿನೆಂಟ್ ಕರ್ನಲ್ ಠಾಕೂರ್ ಗೋವಿಂದ್ ಸಿಂಗ್ (Lt Col Thakur Govind Singh) ಹಾಗೂ ಪಾಕಿಸ್ತಾನದ ಸೇನೆಯ ಶಹಬ್‌ಜಾದಾ ಯಾಕೂಬ್ ಖಾನ್ (Sahabzada Yakub Khan) ನಡುವೆ ಟಾಸ್ ಏರ್ಪಟ್ಟಿತು. ಇದರಲ್ಲಿ ಗೆಲುವು ಕಂಡ ಭಾರತ, ಸ್ವರ್ಣ ಲೇಪಿತ ಸಾರೋಟನ್ನು(wagon ) ತನ್ನದಾಗಿಸಿಕೊಂಡಿತು.
ಭದ್ರತಾ ಕಾರಣದಿಂದಾಗಿ ಕಡಿಮೆಯಾಗಿದ್ದ ಬಳಕೆ: 1950ರಲ್ಲಿ ದೇಶದ ಮೊದಲ ಗಣರಾಜ್ಯೋತ್ಸವದಲ್ಲಿ ದೇಶದ ಮೊದಲ ರಾಷ್ಟ್ರಪತಿ ಡಾ.ರಾಜೇಂದ್ರ ಪ್ರಸಾದ್ ರಾಜಪಥದಲ್ಲಿ (Rajpath) ನಡೆದ ಗಣರಾಜ್ಯೋತ್ಸವ ಪರೇಡ್‌ನಲ್ಲಿ ( Republic Day Parade) ಈ ಸಾರೋಟಿನಲ್ಲೇ ಆಗಮಿಸಿದ್ದರು. ಆರಂಭಿಕ ವರ್ಷಗಳಲ್ಲಿ, ಭಾರತದ ರಾಷ್ಟ್ರಪತಿಗಳು ಈ ಸಾರೋಟಿನಲ್ಲಿ ಎಲ್ಲಾ ಸಮಾರಂಭಗಳಿಗೆ ಹೋಗುತ್ತಿದ್ದರು ಮತ್ತು 330 ಎಕರೆಗಳಷ್ಟು ಹರಡಿರುವ ರಾಷ್ಟ್ರಪತಿ ಭವನವನ್ನು ಇದೇ ಸಾರೋಟಿನ ಮೂಲಕ ಸುತ್ತುತ್ತಿದ್ದರು. ಭದ್ರತಾ ಕಾರಣಗಳಿಂದಾಗಿ ಕ್ರಮೇಣ ಇದರ ಬಳಕೆ ಕಡಿಮೆಯಾಯಿತು.
ಆಸಕ್ತಿಕರ ಸಂಗತಿಗಳು: 1984ರ ನಂತರ, ಅಧ್ಯಕ್ಷೀಯ ಸಾರೋಟು ಬಳಸುವುದನ್ನು ಬಹುತೇಕ ನಿಲ್ಲಿಸಲಾಯಿತು ಮತ್ತು ಭದ್ರತಾ ಕವರ್ ಹೊಂದಿರುವ ಕಾರನ್ನು ಬಳಕೆ ಮಾಡಲು ಆರಂಭಿಸಿದ್ದರು. ಸುಮಾರು ಎರಡು ದಶಕಗಳ ನಂತರ, 2014 ರಲ್ಲಿ, ಪ್ರಣಬ್ ಮುಖರ್ಜಿ ಅವರು ಸಾರೋಟನ್ನು ಬಳಸುವ ಸಂಪ್ರದಾಯವನ್ನು ಮತ್ತೆ ಆರಂಭಿಸಿದರು. ಅವರು ಬೀಟಿಂಗ್ ರಿಟ್ರೀಟ್ ಕಾರ್ಯಕ್ರಮದಲ್ಲಿ ಭಾಗವಹಿಸಲು ಈ ಸಾರೋಟಿನಲ್ಲಿಯೇ ಆಗಮಿಸುತ್ತಿದ್ದರು.
ಇದನ್ನೂ ಓದಿ: ರಾಷ್ಟ್ರಪತಿ ಎಲೆಕ್ಷನ್: ದೇವೇಗೌಡ್ರ ನಿವಾಸಕ್ಕೆ ಬಿಜೆಪಿ ನಾಯಕರ ದಂಡು, ಬಿಜೆಪಿ ಸಭೆಯಲ್ಲಿ ಸುಮಲತಾ ಭಾಗಿ
ಮತ್ತೆ ಬಳಕೆ ಆರಂಭಿಸಿದ್ದ ಪ್ರಣಬ್ ಮುಖರ್ಜಿ: 2012ರಿಂದ 2017ರ ವರೆಗೆ ಪ್ರಣಬ್ ಮುಖರ್ಜಿ ಅವರು ದೇಶದ 13ನೇ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದ್ದರು. ಅದಕ್ಕೂ ಮುನ್ನ ದೇಶದ 11ನೇ ರಾಷ್ಟ್ರಪತಿಯಾಗಿದ್ದ ಎಪಿಜೆ ಅಬ್ದುಲ್ ಕಲಾಂ, 2002 ರಿಂದ 2007ರ ಅವಧಿಯಲ್ಲಿ ಈ ಸಾರೋಟಿನಲ್ಲಿಯೇ ರಾಷ್ಟ್ರಪತಿ ಭವನವನ್ನು ಸುತ್ತುತ್ತಿದ್ದರು. ಆದರೆ, ಕಾರ್ಯಕ್ರಮಗಳಿಗೆ ಹಾಜರಾಗುತ್ತಿರಲಿಲ್ಲ.
ಇದನ್ನೂ ಓದಿ: ರಾಷ್ಟ್ರಪತಿ ಚುನಾವಣೆಗೆ ನಾಮಪತ್ರ ಸಲ್ಲಿಸಿದ ರೈತ, ಒಟ್ಟು 56 ಅಭ್ಯರ್ಥಿಗಳ ಸ್ಪರ್ಧೆ!
2017ರ ಜುಲೈ 25 ರಂದು, ಐಷಾರಾಮಿ ಕಾರಿನ ಬದಲು, ರಾಮ್ ನಾಥ್ ಕೋವಿಂದ್ ಅವರು ರಾಷ್ಟ್ರಪತಿ ಭವನದಿಂದ ಸಂಸತ್ತಿಗೆ ಐತಿಹಾಸಿಕ ಸಾರೋಟಿನಲ್ಲಿ ಪ್ರಮಾಣವಚನ ಸ್ವೀಕರಿಸಲು ಪ್ರಯಾಣಿಸಿದರು. ಆ ವೇಳೆ ನಿರ್ಗಮಿತ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಸಾರೋಟಿನ ಎಡಭಾಗದಲ್ಲಿ ಕುಳಿತಿದ್ದರೆ ನೂತನ ರಾಷ್ಟ್ರಪತಿ ಕೋವಿಂದ್ ಬಲಭಾಗದಲ್ಲಿ ಕುಳಿತಿದ್ದರು. ಕೋವಿಂದ್ ಪ್ರಮಾಣ ವಚನ ಸ್ವೀಕರಿಸಿದ ನಂತರ ಸಾರೋಟಿನಲ್ಲಿ ಇಬ್ಬರ ಸ್ಥಳವೂ ಬದಲಾಗಿತ್ತು. ಹಿಂತಿರುಗುವಾಗ ಪ್ರಣಬ್ ಬಲಭಾಗದಲ್ಲಿ ಮತ್ತು ಕೋವಿಂದ್ ಎಡಭಾಗದಲ್ಲಿ ಕುಳಿತಿದ್ದರು.
