ಕೋಲ್ಕತಾ ಕಾನೂನು ಕಾಲೇಜಿನಲ್ಲಿ ನಡೆದ ಗ್ಯಾಂಗ್‌ರೇಪ್‌ಗೆ, ಸಂತ್ರಸ್ತ ವಿದ್ಯಾರ್ಥಿನಿ ಮದುವೆಗೆ ನಿರಾಕರಿಸಿದ್ದೇ ಕಾರಣ ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.

ಕೋಲ್ಕತಾ: ಕೋಲ್ಕತಾ ಕಾನೂನು ಕಾಲೇಜಿನಲ್ಲಿ ನಡೆದ ಗ್ಯಾಂಗ್‌ರೇಪ್‌ಗೆ, ಸಂತ್ರಸ್ತ ವಿದ್ಯಾರ್ಥಿನಿ ಮದುವೆಗೆ ನಿರಾಕರಿಸಿದ್ದೇ ಕಾರಣ ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.

ಪ್ರಕರಣದ ಪ್ರಮುಖ ಆರೋಪಿಯಾಗಿರುವ ಕಾಲೇಜಿನ ಹಳೆಯ ವಿದ್ಯಾರ್ಥಿಯು ಅದೇ ಕಾಲೇಜಿನಲ್ಲಿ ಗುತ್ತಿಗೆ ಆಧಾರದಲ್ಲಿ ಬೋಧಕೇತರ ಸಿಬ್ಬಂದಿಯಾಗಿದ್ದ. ತನ್ನನ್ನು ಮದುವೆಯಾಗುವಂತೆ ಆತ ಸಂತ್ರಸ್ತೆಯನ್ನು ಕೇಳಿದ್ದ. ಆದರೆ ಆಕೆ ನಿರಾಕರಿಸಿದ್ದಳು. ಹೀಗಾಗಿ ಸಿಟ್ಟಿನಿಂದ ಕೃತ್ಯ ಎಸಗಿದ್ದಾನೆಂದು ಮೂಲಗಳು ಹೇಳಿವೆ.

ಈ ನಡುವೆ ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ಅತ್ಯಾಚಾರ ನಡೆದಿರುವುದು ದೃಢಪಟ್ಟಿದೆ. ಆಕೆಯ ದೇಹಕ್ಕೆ ಗಾಯಗಳಾಗಿವೆ ಎಂದು ವರದಿ ತಿಳಿಸಿದೆ.

ಬಂಧನ: ಅತ್ಯಾಚಾರ ಪ್ರಕರಣ ಸಂಬಂಧ ಕಾಲೇಜಿನ ಸೆಕ್ಯೂರಿಟಿ ಗಾರ್ಡ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಅತ್ಯಾಚಾರ ನಡೆಯುವ ವೇಳೆ ಕಾಲೇಜಿನಲ್ಲಿದ್ದ ಸೆಕ್ಯೂರಿಟಿ ಗಾರ್ಡ್‌ ತನಗೆ ಸಹಾಯ ಮಾಡಲಿಲ್ಲ ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದರು.

ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಸಂನ್ಯಾಸಿ ಕಾರ್ತಿಕ್ ಮಹಾರಾಜ್ ವಿರುದ್ಧ ಆರೋಪ

ನವದೆಹಲಿ : ಪಶ್ಚಿಮ ಬಂಗಾಳದ ಮಹಿಳೆಯೊಬ್ಬರು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಸಂನ್ಯಾಸಿ ಕಾರ್ತಿಕ್ ಮಹಾರಾಜ್ 2013 ರಲ್ಲಿ ಶಾಲೆಯಲ್ಲಿ ಕೆಲಸ ನೀಡುವ ನೆಪದಲ್ಲಿ ತನ್ನ ಮೇಲೆ ಹಲವಾರು ಬಾರಿ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿದ್ದಾರೆ. ಬಿಜೆಪಿಗೆ ಆಪ್ತರಾಗಿರುವ ಕಾರ್ತಿಕ್ ಮಹಾರಾಜ್ ಆರೋಪಗಳನ್ನು ನಿರಾಕರಿಸಿದ್ದಾರೆ.

ಭಾರತ್ ಸೇವಾಶ್ರಮ ಸಂಘದ ಸಂನ್ಯಾಸಿ ಮಹಾರಾಜ್ ಅವರು ಮುರ್ಷಿದಾಬಾದ್‌ನಲ್ಲಿರುವ ಆಶ್ರಮಕ್ಕೆ ತನ್ನನ್ನು ಕರೆದೊಯ್ದು, ಅದರ ಆವರಣದಲ್ಲಿರುವ ಶಾಲೆಯಲ್ಲಿ ಶಿಕ್ಷಕಿ ಕೆಲಸ ಕೊಡಿಸುವುದಾಗಿ ಭರವಸೆ ನೀಡಿದ್ದರು ಮತ್ತು ಆಶ್ರಮದಲ್ಲಿ ವಸತಿಯನ್ನೂ ನೀಡಿದ್ದರು ಎಂದು ಮಹಿಳೆ ಆರೋಪಿಸಿದ್ದಾರೆ.

ಆದರೆ, ಒಂದು ರಾತ್ರಿ, ಆ ಸಂನ್ಯಾಸಿ ತನ್ನ ಕೋಣೆಗೆ ನುಗ್ಗಿ ತನ್ನ ಮೇಲೆ ಬಲವಂತವಾಗಿ ಹಲ್ಲೆ ನಡೆಸಿದ್ದಾನೆ ಎಂದು ಮಹಿಳೆ ಹೇಳಿಕೊಂಡಿದ್ದಾಳೆ. ಜನವರಿ-ಜೂನ್ 2013 ರ ನಡುವೆ ಆರು ತಿಂಗಳ ಅವಧಿಯಲ್ಲಿ ಆ ಸನ್ಯಾಸಿ ಕನಿಷ್ಠ 12 ಬಾರಿ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಆಕೆ ಹೇಳಿಕೊಂಡಿದ್ದಾಳೆ.