Asianet Suvarna News Asianet Suvarna News

Republic Day 2022: ಹೇಗಿರಲಿದೆ ಕರ್ನಾಟಕ ಸ್ತಬ್ಧಚಿತ್ರ ಕಲಾವೈಭವ?

ಕರ್ನಾಟಕ ಕರಕುಶಲ ಕಲಾವೈಭವ ಧ್ಯೇಯದಡಿ ಸ್ತಬ್ದಚಿತ್ರ
ಸತತ 13ನೇ ವರ್ಷ ಕರ್ನಾಟಕದ ಸ್ತಬ್ದಚಿತ್ರ ಗಣರಾಜ್ಯೋತ್ಸವಕ್ಕೆ ಆಯ್ಕೆ
ಚನ್ನಪಟ್ಟಣದ ಬೊಂಬೆಗಳು, ಕಿನ್ನಾಳ ಕಲೆಯಲ್ಲಿ ನಿರ್ಮಿಸಿರುವ ಆಂಜನೇಯನ ಮೂರ್ತಿ ಆಕರ್ಷಣೆ

The Only South Indian Tableau This Year Republic Day 2022 Details about Karnatakas Folk Craft san
Author
Bengaluru, First Published Jan 26, 2022, 5:15 AM IST

ನವದೆಹಲಿ (ಜ. 26): ರಾಜಫಥದಲ್ಲಿ (Rajpath )ನಡೆಯುವ ಗಣರಾಜ್ಯೋತ್ಸವ ಪರೇಡಲ್ಲಿ (Republic Day Parade ) ಈ ಬಾರಿ ಕರ್ನಾಟಕ ಕರಕುಶಲ ಕಲಾವೈಭವ ಎಂಬ ಧ್ಯೇಯದಡಿ ನಿರ್ಮಾಣಗೊಂಡಿರುವ ಕರ್ನಾಟಕದ (Karnataka Tableau ) ಸ್ತಬ್ಧಚಿತ್ರ ಪ್ರದರ್ಶನಗೊಳ್ಳಲಿದೆ. ಈ ಮೂಲಕ ಕರ್ನಾಟಕದ ಕರಕುಶಲ ಕಲಾವೈಭವದ ವಿಶ್ವರೂಪ ಜಗತ್ತಿನೆದುರು ಪ್ರದರ್ಶನಗೊಳ್ಳಲಿದೆ. ಇಳಕಲ್‌ ಸೀರೆ, ಚನ್ನಪಟ್ಟಣದ ಗೊಂಬೆ ಜೊತೆಗೆ ಜಿಐ ಟ್ಯಾಗ್‌ ಪಡೆದಿರುವ 16 ಕರಕುಶಲ ವಸ್ತುಗಳು ಅನಾವರಣಗೊಳ್ಳಲಿವೆ.

ಸ್ತಬ್ಧಚಿತ್ರದ ಮುಂಭಾಗದಲ್ಲಿ ಮೈಸೂರಿನ (Mysore)ಬೀಟೆ ಮರ ಮತ್ತು ದಂತದ ಕಸೂತಿ ಇರುವ ಆನೆಯ ಕಲಾಕೃತಿ ರಚಿಸಲಾಗಿದೆ. ಇದರ ಕೆಳಭಾಗದಲ್ಲಿ ಯಕ್ಷಗಾನ ಬೊಂಬೆಯಾಟ ಮತ್ತು ಗಂಜೀಫಾ ಕಲೆಗಳ ಚಿತ್ರಣವಿದೆ. ಮಧ್ಯಭಾಗದಲ್ಲಿ ಬಿದರಿ ಕಲೆಯಲ್ಲಿ ರೂಪಿಸಿರುವ ದೊಡ್ಡ ಪ್ರಮಾಣದ ಹೂಜಿ ಇದ್ದು ಇದರ ಇಕ್ಕೆಲಗಳಲ್ಲಿ ಕರಾವಳಿಯ ಭೂತಾರಾಧನೆ ಬಿಂಬಿಸುವ ಲೋಹದ ಮುಖವಾಡಗಳಿರಲಿವೆ. ಇದರ ಹಿಂಬದಿಯಲ್ಲಿ ಬಿದರಿ ಕಲೆಯಲ್ಲಿ ನಿರ್ಮಿಸಲಾದ ನವಿಲುಗಳಿವೆ. ಇದರ ಮಧ್ಯಭಾಗದಲ್ಲಿ ಕಿನ್ನಾಳ ಕಲೆಯಲ್ಲಿ (Kinnala Toys)ನಿರ್ಮಿಸಿರುವ ಆಂಜನೇಯ ಮೂರ್ತಿ (Hanuman) ಇದೆ. ಇದರ ಅಕ್ಕಪಕ್ಕದಲ್ಲಿ ಚನ್ನಪಟ್ಟಣದ ಬೊಂಬೆಗಳು, ನವಲಗುಂದದ ಧರಿ, ಶ್ರೀಗಂಧ ಕೆತ್ತನೆಯ ಕಲಾಕೃತಿಗಳಿವೆ.

ಪಾರಂಪರಿಕ ಕರಕುಶಲ ಉತ್ಪನ್ನಗಳ ತಯಾರಿಕೆಗೆ ಪ್ರೋತ್ಸಾಹ ನೀಡಿದ ಕಮಲಾದೇವಿ (Kamaladevi Chattopadhyay)ಅವರು ಗಂಧದ ಪೆಟ್ಟಿಗೆ, ಸಂಡೂರಿನ ಬಾಳೆ ನಾರಿನ ಚೀಲ ಮುಂತಾದವುಗಳನ್ನು ಕೊಡುತ್ತಿರುವ ದೊಡ್ಡ ಪ್ರತಿಮೆ ಇದೆ. ಇದರೊಂದಿಗೆ ಇಳಕಲ್‌ ಸೀರೆ, ಮೊಳಕಾಲ್ಮೂರು ಸೀರೆ, ಮೈಸೂರು ರೇಷ್ಮೆ ಸೀರೆ, ಕಿನ್ನಾಳ ಕಲೆಯಲ್ಲಿ ತಯಾರಿಸಿದ ಕಲಾಕೃತಿಗಳು ಇರಲಿವೆ.

ಸತತ 13ನೇ ವರ್ಷವೂ ಆಯ್ಕೆ: ಕರ್ನಾಟಕದ ಸ್ತಬ್ಧಚಿತ್ರಗಳು ಗಣರಾಜ್ಯೋತ್ಸವ ಪರೇಡಿಗೆ ಸತತವಾಗಿ 13 ವರ್ಷಗಳಿಂದ ಆಯ್ಕೆಯಾಗುತ್ತಿವೆ. ಇದು ಸಹ ಕನ್ನಡಿಗರಿಗೆ ಹೆಮ್ಮೆಯ ವಿಷಯವಾಗಲಿದೆ. ಈ ಬಾರಿ ಕೇವಲ 12 ರಾಜ್ಯಗಳ ಸ್ತಬ್ಧಚಿತ್ರಗಳಿಗೆ ಮಾತ್ರ ಅವಕಾಶ ನೀಡಲಾಗಿದೆ ಅದರಲ್ಲಿ ಕರ್ನಾಟಕವೂ ಆಯ್ಕೆಯಾಗಿರುವುದು ವಿಶೇಷವಾಗಿದೆ.

Republic Day Karnataka Tableau: ಈ ಬಾರಿ ಸ್ತಬ್ಧಚಿತ್ರದಲ್ಲಿ ಕಮಲಾದೇವಿ ಚಟ್ಟೋಪಾಧ್ಯಾಯ ಚಿತ್ರಣ!
ಪರೇಡಲ್ಲಿ 12 ರಾಜ್ಯಗಳ ಸ್ತಬ್ಧಚಿತ್ರ: ಗಣರಾಜ್ಯೋತ್ಸವ ಪಥಸಂಚಲನದಲ್ಲಿ 12 ರಾಜ್ಯಗಳು ಮತ್ತು 9 ಸಚಿವಾಲಯದ ಟ್ಲ್ಯಾಬ್ಲೋಗಳು ಭಾಗಿಯಾಗಲಿವೆ. 29 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಂದ ಕೇಂದ್ರ ಸರ್ಕಾರದ ಆಯ್ಕೆ ಸಮಿತಿಗೆ ಅರ್ಜಿಗಳು ಬಂದಿದ್ದವು. ಅದರಲ್ಲಿ 12 ರಾಜ್ಯಗಳ ಸ್ತಬ್ಧಚಿತ್ರಗಳು ಮಾತ್ರ ಆಯ್ಕೆಯಾಗಿವೆ. ಕರ್ನಾಟಕ, ಅರುಣಾಚಲಪ್ರದೇಶ, ಹರಾರ‍ಯಣ, ಛತ್ತೀಸ್‌ಗಢ, ಗೋವಾ, ಗುಜರಾತ್‌, ಮೇಘಾಲಯ, ಪಂಜಾಬ್‌, ಮಹಾರಾಷ್ಟ್ರ, ಉತ್ತರ ಪ್ರದೇಶ, ಉತ್ತರಾಖಂಡ ಮತ್ತು ಪಂಜಾಬ್‌ ರಾಜ್ಯಗಳ ಟ್ಯಾಬ್ಲೋಗಳು ಆಯ್ಕೆಯಾಗಿವೆ.

600 ಕಲಾವಿದರು ಭಾಗಿ : ರಕ್ಷಣೆ ಹಾಗೂ ಸಂಸ್ಕೃತಿ ಸಚಿವಾಲಯ ‘ವಂದೇ ಭಾರತಂ’ ಸ್ಪರ್ಧೆಯನ್ನು ಆಯೋಜಿಸಿತ್ತು. ಜಿಲ್ಲಾಮಟ್ಟದ ಸ್ಪರ್ಧೆಯಲ್ಲಿ ಒಟ್ಟು 3870 ಕಲಾವಿದರು ಭಾಗವಹಿಸಿದ್ದರು. ನಂತರ ರಾಜ್ಯಮಟ್ಟ, ವಲಯಮಟ್ಟಹಾಗೂ ರಾಷ್ಟ್ರಮಟ್ಟದ ಸ್ಪರ್ಧೆಯನ್ನು ನಡೆಸಿ ಅಂತಿಮವಾಗಿ 600 ಕಲಾವಿದರನ್ನು ರಾಜಪಥದ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶನಕ್ಕಾಗಿ ಆಯ್ಕೆ ಮಾಡಲಾಗಿದೆ. ಈ ಮೊದಲು ಕೇವಲ ದೆಹಲಿಯ ಶಾಲಾ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದರು. ಈ ಬಾರಿ ದೇಶದ ಎಲ್ಲ ಭಾಗದ ಕಲಾವಿದರನ್ನು ಸ್ಪರ್ಧೆಯ ಮೂಲಕ ಆಯ್ಕೆ ಮಾಡಲಾಗಿದೆ.

Republic Day Tableau: ಆಯ್ಕೆ ಹೇಗೆ.? ತಿರಸ್ಕಾರಕ್ಕೆ ಕಾರಣಗಳು ಏನೇನು?
10 ಎಲ್‌ಇಡಿ ಪರದೆ ಅಳವಡಿಕೆ:
ಈ ಬಾರಿ ಪಥಸಂಚಲನದಲ್ಲಿ ವೀಕ್ಷಕರಿಗೆ ಉತ್ತಮ ವೀಕ್ಷಣೆಗಾಗಿ 10 ದೊಡ್ಡ ಎಲ್‌ಇಡಿ ಪರದೆಗಳನ್ನು ರಾಜಪಥದಲ್ಲಿ ಅಳವಡಿಸಲಾಗಿದೆ. ಆ ವೇಳೆ ಮಂಜು ಕವಿದ ವಾತಾವರಣ ಇರಲಿದೆ. ಹಾಗಾಗಿ ಸ್ಪಷ್ಟವಾಗಿ ಪಥಸಂಚಲನ ವೀಕ್ಷಣೆಗಾಗಿ ಈ ಕ್ರಮವಹಿಸಲಾಗಿದೆ. ಪರೇಡ್‌ ನಡೆಯುವ ಪ್ರದೇಶದಲ್ಲಿ ಪ್ರತಿಯೊಬ್ಬರ ಚಲನವಲನಗಳ ಮೇಲೆ ನಿಗಾ ವಹಿಸಲು 300 ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ.

Follow Us:
Download App:
  • android
  • ios