Chhattisgarh CM Net Worth: ಛತ್ತೀಸ್‌ಗಢದಲ್ಲಿ ಸಿಎಂ ವಿಚಾರವಾಗಿ ಇದ್ದ ಕುತೂಹಲ ಕೊನೆಗೂ ಮುಕ್ತಾಯವಾಗಿದೆ. ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ವಿಷ್ಣುದೇವ್ ಸಾಯಿ ಅವರನ್ನು ಘೋಷಣೆ ಮಾಡಲಾಗಿದೆ. ರಾಜ್ಯದ ನೂತನ ಸಿಎಂ ಸುಮಾರು 3 ಕೋಟಿ ಆಸ್ತಿ ಹೊಂದಿದ್ದಾರೆ. 

ನವದೆಹಲಿ (ಡಿ.10): ದೇಶದ ಐದು ರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟವಾದ ನಂತರ ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್‌ಗಢದಲ್ಲಿ ಮುಖ್ಯಮಂತ್ರಿ ಯಾರಾಗುತ್ತಾರೆ ಎನ್ನುವ ಕುತೂಹಲ ಮಡುಗಟ್ಟಿತ್ತು. ಈ ಮೂರು ರಾಜ್ಯಗಳಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದೆ. ಈ ನಡುವೆ ಭಾನುವಾರ, ಛತ್ತೀಸ್‌ಗಢಕ್ಕೆ ಅಂತಿಮವಾಗಿ ಹೊಸ ಸಿಎಂ ಸಿಕ್ಕಿದ್ದಾರೆ, ಶಾಸಕಾಂಗ ಪಕ್ಷದ ಸಭೆಯಲ್ಲಿ, ಬುಡಕಟ್ಟು ನಾಯಕ ವಿಷ್ಣುದೇವ್ ಸಾಯಿ ಅವರ ಹೆಸರನ್ನು ಒಪ್ಪಿಕೊಳ್ಳಲಾಗಿದ್ದು, ಅವರು ಛತ್ತೀಸ್‌ಗಢದ ಹೊಸ ಮುಖ್ಯಮಂತ್ರಿಯಾಗಲಿದ್ದಾರೆ. ನಾಲ್ಕು ಬಾರಿ ಸಂಸದ, ಎರಡು ಬಾರಿ ಶಾಸಕ, ಎರಡು ಬಾರಿ ರಾಜ್ಯಾಧ್ಯಕ್ಷರಾಗಿರುವ ವಿಷ್ಣುದೇವ್‌ ಸಾಯಿ ಅವರ ಆಸ್ತಿ ಕೋಟಿಗಟ್ಟಲೆ ಇದೆ. ಅದರೊಂದಿಗೆ 66 ಲಕ್ಷ ರೂಪಾಯಿಯ ಸಾಲವನ್ನೂ ಹೊಂದಿದ್ದಾರೆ.

ಚುನಾವಣಾ ಅಫಿಡವಿಟ್‌ನಲ್ಲಿ ಆಸ್ತಿ ಮಾಹಿತಿ: 2023ರ ವಿಧಾನಸಭೆ ಚುನಾವಣೆ ವೇಳೆ ಛತ್ತೀಸ್‌ಗಢದ ನೂತನ ಸಿಎಂ ವಿಷ್ಣುದೇವ್ ಸಾಯಿ ಅವರು ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಅಫಿಡವಿಟ್ ಪ್ರಕಾರ, ಅವರು 3 ಕೋಟಿ ರೂ.ಗೂ ಹೆಚ್ಚು ಆಸ್ತಿ ಹೊಂದಿದ್ದಾರೆ. ಮೈ ನೇತಾ ವೆಬ್‌ಸೈಟ್‌ (Myneta.com) ಪ್ರಕಾರ, ಅಫಿಡವಿಟ್‌ನಲ್ಲಿ ನೀಡಲಾದ ಮಾಹಿತಿಯ ಪ್ರಕಾರ, ವಿಷ್ಣುದೇವ್‌ ಸಾಯಿ ಮತ್ತು ಅವರ ಕುಟುಂಬದ ಒಟ್ಟು ಆಸ್ತಿ 3,80,81,550 ರೂ.ಗಳಾಗಿದೆ. ಇನ್ನು ಅವರ ಸಾಲ 65,81,921 ರೂಪಾಯಿ ಆಗಿದೆ.

ನಗದು ಹಣದಿಂದ ಬ್ಯಾಂಕ್ ಠೇವಣಿಗಳವರೆಗೆ: ಛತ್ತೀಸ್‌ಗಢದ ನೂತನ ಮುಖ್ಯಮಂತ್ರಿಯವರ ನಿವ್ವಳ ಮೌಲ್ಯದ ಬಗ್ಗೆ ನೀಡಿರುವ ಮಾಹಿತಿ ಪ್ರಕಾರ, ಅವರ ಬಳಿ 3.5 ಲಕ್ಷ ರೂಪಾಯಿ ನಗದು ಇದ್ದರೆ, ಅವರ ಪತ್ನಿ ಬಳಿ 2.25 ಲಕ್ಷ ರೂಪಾಯಿ ನಗದು ಇದೆ. ಇಡೀ ಕುಟುಂಬದ ಬಗ್ಗೆ ಹೇಳುವುದಾದರೆ ಒಟ್ಟು ನಗದು 8.5 ಲಕ್ಷ ರೂಪಾಯಿ ಇದೆ. ಇದಲ್ಲದೇ ಬ್ಯಾಂಕ್ ಠೇವಣಿ ಬಗ್ಗೆ ಹೇಳುವುದಾದರೆ ವಿಷ್ಣುದೇವ್ ಸಾಯಿ ಬ್ಯಾಂಕ್ ಆಫ್ ಬರೋಡಾ ಖಾತೆಯಲ್ಲಿ ಒಂದು ಲಕ್ಷ ರೂಪಾಯಿ, ಸಿಜಿ ರಾಜ್ಯ ಗ್ರಾಮೀಣ ಬ್ಯಾಂಕ್ ನಲ್ಲಿ 82 ಸಾವಿರ ರೂಪಾಯಿ, ಎಸ್ ಬಿಐ ಖಾತೆಯಲ್ಲಿ 15,99,418 ರೂಪಾಯಿ ಹಾಗೂ ಇಂಡಿಯನ್ ಬ್ಯಾಂಕ್ ಖಾತೆಯಲ್ಲಿ ಕೇವಲ 2 ಸಾವಿರ ರೂಪಾಯಿ ಇದೆ. ಇವೆ. ಇನ್ನು ಪತ್ನಿ ಬಗ್ಗೆ ಹೇಳುವುದಾದರೆ ಸ್ಟೇಟ್ ರೂರಲ್ ಬ್ಯಾಂಕ್ ಖಾತೆಯಲ್ಲಿ 10.9 ಲಕ್ಷ ರೂಪಾಯಿ ಇರಿಸಿದ್ದಾರೆ.

30 ಲಕ್ಷ ಮೌಲ್ಯದ ಚಿನ್ನಾಭರಣ, ಎಲ್ ಐಸಿಯಲ್ಲಿ ಹೂಡಿಕೆ: ಹೂಡಿಕೆಯ ಕುರಿತು ತಿಳಿಸುವುದಾದರೆ, ಛತ್ತೀಸ್‌ಗಢದ ಹೊಸ ಸಿಎಂ ಷೇರುಗಳು, ಬಾಂಡ್‌ಗಳು ಅಥವಾ ಎನ್‌ಎಸ್‌ಎಸ್, ಅಂಚೆ ಉಳಿತಾಯದಲ್ಲಿ ಯಾವುದೇ ಹೂಡಿಕೆ ಮಾಡಿಲ್ಲ. ಎಲ್ಐಸಿಯ ಪಾಲಿಸಿಯಲ್ಲಿ ಹೂಡಿಕೆ ಮಾಡಿದ್ದಾರೆ. ಚಿನ್ನಾಭರಣಗಳ ಬಗ್ಗೆ ಹೇಳುವುದಾದರೆ, ಅವರ ಬಳಿ 450 ಗ್ರಾಂ ಚಿನ್ನ, 2 ಕೆಜಿ ಬೆಳ್ಳಿ, 5 ವಜ್ರದ ಉಂಗುರ ಇದೆ, ಇವೆಲ್ಲದರ ಮೌಲ್ಯ ಸುಮಾರು 30 ಲಕ್ಷ ರೂಪಾಯಿ. ಅವರ ಪತ್ನಿ ಬಳಿ 200 ಗ್ರಾಂ ಚಿನ್ನ ಮತ್ತು 3 ಕೆಜಿ ಬೆಳ್ಳಿ ಇದೆ. ನೂತನ ಸಿಎಂ ಹೆಸರಲ್ಲಿ ಯಾವುದೇ ಕಾರುಗಳಿಲ್ಲ. ಅವರ ಬಳಿ ಎರಡು ಟ್ರ್ಯಾಕ್ಟರ್ ಗಳಿದ್ದು, ಇದರ ಮೌಲ್ಯ ಸುಮಾರು 11 ಲಕ್ಷ ರೂಪಾಯಿ ಎನ್ನಲಾಗಿದೆ.

Breaking: ಮಾಜಿ ಕೇಂದ್ರ ಸಚಿವ ವಿಷ್ಣು ದೇವ್ ಸಾಯಿ ಛತ್ತೀಸ್‌ಗಢ ಸಿಎಂ ಆಗಿ ಘೋಷಣೆ!

ಜಮೀನು, ಕೃಷಿ ಜಮೀನು, ಮನೆಯ ಮಾಹಿತಿ: ವಿಷ್ಣುದೇವ್‌ ಸಾಯಿ ಅವರ ಸ್ಥಿರಾಸ್ತಿ ಕುರಿತಾಗಿ ಹೇಳುವುದಾದರೆ, 58,43,700 ರೂಪಾಯಿ ಮೌಲ್ಯದ ಸಾಗುವಳಿ ಭೂಮಿ ಹೊಂದಿದ್ದಾರೆ. ಇದಲ್ಲದೇ 27,21,000 ಮೌಲ್ಯದ ಕೃಷಿಯೇತರ ಭೂಮಿ ಇದೆ. ಜಶ್‌ಪುರದಲ್ಲಿ ಅವರ ಹೆಸರಿನಲ್ಲಿ ವಾಣಿಜ್ಯ ಕಟ್ಟಡವಿದ್ದು, ಇದರ ಮೌಲ್ಯ 20,00,000 ರೂಪಾಯಿ. ಇದರ ಹೊರತಾಗಿ ವಸತಿ ಕಟ್ಟಡಗಳ ಬಗ್ಗೆ ಹೇಳುವುದಾದರೆ, ಅವರು 1,50,00,000 ಮೌಲ್ಯದ ಎರಡು ಮನೆಗಳನ್ನು ಹೊಂದಿದ್ದಾರೆ. ಈ ಆಸ್ತಿಯ ಹೊರತಾಗಿ ವಿಷ್ಣುದೇವ್ ಸಾಯಿ ಹೆಸರಿನಲ್ಲಿ ಎರಡು ಸಾಲಗಳೂ ಇವೆ. ಈ ಪೈಕಿ ಎಸ್‌ಬಿಐನಿಂದ ಪಡೆದಿರುವ ಸುಮಾರು 7 ಲಕ್ಷ ರೂಪಾಯಿ ಕೃಷಿ ಸಾಲವಿದ್ದರೆ, ಇದಲ್ಲದೇ ಸುಮಾರು 49 ಲಕ್ಷ ರೂ.ಗಳ ಎಸ್‌ಬಿಐ ಗೃಹ ಸಾಲವೂ ಅವರ ಹೆಸರಿನಲ್ಲಿದೆ.

ರಾಜ್ಯದಲ್ಲಿ ಮುಖ್ಯಮಂತ್ರಿ ಹುದ್ದೆ ಖಾಲಿಯಿಲ್ಲ: ಸಚಿವ ಎಂ.ಬಿ.ಪಾಟೀಲ