Asianet Suvarna News Asianet Suvarna News

ಬಚ್ಚನ್, ಸಿಂಗ್ ದೋಸ್ತಿ ದುಷ್ಮನಿ: ಬಿರುಕು ಬಿಟ್ಟ ಗೆಳೆತನ ಮತ್ತೆ ಸರಿ ಹೋಗಲೇ ಇಲ್ಲ!

2010 ರಲ್ಲಿ ಮುರಿದ ಬಚ್ಚನ್ ಅಮರ್ ಸಿಂಗ್ ದೋಸ್ತಿ ಅಮರ ಸಿಂಗ್ ರ ಸಾವಿನವರೆಗೂ ಸರಿ ಹೋಗಲೇ ಇಲ್ಲ. ಇದಕ್ಕೇನು ಕಾರಣ?  ಇಲ್ಲಿದೆ ವಿವರ

The Friendship and Enimity Between Amitabh Bacchan And Rajya Sabha MP Amar Singh
Author
Bangalore, First Published Aug 3, 2020, 6:02 PM IST

ಪ್ರಶಾಂತ್ ನಾತು, ಇಂಡಿಯಾ ಗೇಟ್

ನವದೆಹಲಿ(ಆ.03) ಅಮರ ಸಿಂಗ್ ರಿಗೆ ಮುಲಾಯಂ ಸಿಂಗ್ ಯಾದವರ ಗೆಳೆತನ ರಾಜಕೀಯ ಪ್ರಭಾವ ತಂದು ಕೊಟ್ಟಿದ್ದರೆ ಅಮಿತಾಭ್ ಬಚ್ಚನ್ ರ ಗೆಳೆತನ ಗ್ಲಾಮರ್ ಕೊಟ್ಟಿತ್ತು.

1996 ರಲ್ಲಿ ವಿಶ್ವ ಸುಂದರಿ ಸ್ಪರ್ಧೆ ಬಳಿಕ ಅಮಿತಾಬ್ ಬಚ್ಚನ್ ಅವರ ಕಂಪನಿ ಎ ಬಿ ಸಿ ಎಲ್ ಪೂರ್ತಿ ನಷ್ಟ ವಾದಾಗ ಅಮಿತಾಭ ಮನೆ ಮಾರುವ ಪರಿಸ್ಥಿತಿ ಬಂದಿತ್ತು.ಆಗ ಕೈ ಹಿಡಿದವರು ಅಮರ ಸಿಂಗ್.ಇಬ್ಬರು ಎಷ್ಟರ ಮಟ್ಟಿಗೆ ಆತ್ಮೀಯ ರಾಗಿದ್ದರೆಂದರೆ ಅಮಿತಾಭ ಬಚ್ಚನ್ ಅವರ ಜೂಹು ನಿವಾಸದಲ್ಲಿ ಅಮರ ಸಿಂಗ್ ಮುಂಬೈಗೆ ಬಂದರೆ ಉಳಿಯಲು ಬೆಡ್ ರೂಮ್ ಒಂದನ್ನು ತಯಾರಿಸಲಾಗಿತ್ತು.

ಕೊರೋನಾ ಗೆದ್ದ ಅಮಿತಾಭ್ ಡಿಸ್ಚಾರ್ಜ್, ಫಲಿಸಿದ ಅಭಿಮಾನಿಗಳ ಹಾರೈಕೆ

ಅಮರ್ ಸಿಂಗ್ ಕಾರಣದಿಂದ ಬಚ್ಚನ್ ಮೊದಲೇ ದೂರ ಇದ್ದ ಗಾಂಧಿ ಪರಿವಾರದ ಜೊತೆಗೆ ಸಂಬಂಧ ಪೂರ್ತಿ ಕೆಡಿಸಿಕೊಂಡು ಮುಲಾಯಂ ಸಿಂಗ್ ಯಾದವರ ಸಮಾಜಾವಾದಿ ಪಕ್ಷದ ಹತ್ತಿರ ಬಂದರು.ಮುಲಾಯಂ ರ ಹುಟ್ಟೂರು ಸೈಫೈ ನಲ್ಲಿ ಪ್ರತಿ ವರ್ಷ ನಡೆಯುವ ಉತ್ಸವದಲ್ಲಿ ಸ್ವತಃ ಅಮಿತಾಭ್ ಅಭಿಷೇಕ್ ಮತ್ತು ಐಶ್ವರ್ಯಾ ಭಾಗವಹಿಸಿ ಉತ್ಸವಕ್ಕೆ ತಾರಾ ರಂಗು ತರ ತೊಡಗಿದರು.

ಇನ್ನೊಂದು ಕಡೆ ಮುಲಾಯಂ ಯಾದವ್ ಅಮರ್ ಸಿಂಗ್ ಮಾತು ಕೇಳಿ ಜಯಾ ಬಚ್ಚನ್ ರನ್ನು ರಾಜ್ಯಸಭೆಗೆ ತಂದರು.ಒಂದು ರೀತಿಯಲ್ಲಿ ಅಮಿತಾಭ್ ಬಚ್ಚನ್ ಅವರ ತಾರಾ ವರ್ಚಸ್ಸಿನ ಗ್ಲಾಮರ್ ಅನಿಲ್ ಅಂಬಾನಿ ಸುಬ್ರತೋ ರಾಯ್ ರ ದುಡ್ಡು ಮತ್ತು ಅಮರ್ ಸಿಂಗ್ ಅವರ ದೊಡ್ಡ ದೊಡ್ಡ ಉದ್ಯಮಿಗಳ ಸಂಪರ್ಕದ ಕಾರಣದಿಂದ ಸಮಾಜವಾದಿ ಚಿಂತನೆಯ ರಾಮಮನೋಹರ ಲೋಹಿಯಾ ಅನುಯಾಯಿ ಒಂದು ಕಾಲದಲ್ಲಿ ಕಂಪ್ಯೂಟರ್ ಟ್ರಾಕ್ಟರ್ ಗಳನ್ನು ವಿರೋಧಿಸುತ್ತಿದ್ದ ಮುಲಾಯಂ ಸಿಂಗ್ ಯಾದವ್ ಬದಲಾಗಿ ಬಿಟ್ಟಿದ್ದರು.

ಒಮ್ಮೆ ಬಾರಾ ಬಂಕಿಗೆ ಸಮಾಜವಾದಿ ಪ್ರಚಾರಕ್ಕೆ ಹೋಗಿದ್ದ ಜಯಾ ಬಚ್ಚನ್ " ಗಾಂಧಿಗಳು ನಮ್ಮನ್ನು ರಾಜಕೀಯಕ್ಕೆ ತಂದು ಅರ್ಧ ದಾರಿಗೆ ಬಿಟ್ಟು ಹೋದರು ಆದರೆ ಅಮರ್ ಮತ್ತು ಮುಲಾಯಂ ಹಾಗಲ್ಲ ಗೆಳೆಯರ ಗೆಳೆಯರು " ಎಂದಿದ್ದರಂತೆ.ಅಷ್ಟೇ ಅಲ್ಲ ಅಭಿಷೇಕ್ ಐಶ್ವರ್ಯಾ ಬಚ್ಚನ್ ಪುತ್ರಿ ಆರಾಧ್ಯ ಬಚ್ಚನ್ ಅಮರ್ ಸಿಂಗ್ ರನ್ನು ದಾದು ಚಾಚು ಅಂದರೆ ಚಿಕ್ಕಪ್ಪ ಅಜ್ಜ ಎಂದು ಕರೆಯುತ್ತಿದ್ದಳು.

SP ಮಾಜಿ ನಾಯಕ, ರಾಜ್ಯಸಭಾ ಸದಸ್ಯ ಅಮರ್ ಸಿಂಗ್ ನಿಧನ!

ಆದರೆ ಎಕಾ ಏಕಿ ಸಂಸದರಿಗೆ ಹಣ ಕೊಡುವ ಹಗರಣದಲ್ಲಿ ಅಮರ ಸಿಂಗ್ ಜೈಲಿಗೆ ಹೋದಾಗ ಬಚ್ಚನ್ ಕುಟುಂಬ ಕೆಸರಿನಲ್ಲಿ ಬೀಳಲು ಇಚ್ಛಿಸದೆ ಅಂತರ ಕಾಯ್ದು ಕೊಂಡಿತು.ಇದು ಅಮರ ಸಿಂಗ್ ರ ನೋವಿಗೆ ಮುಖ್ಯ ಕಾರಣ.ಅಮಿತಾಭ್ ಬಚ್ಚನ್ ಮೇಲೆ ಮುಗಿ ಬಿದ್ದ ಅಮರ ಮಾಡಿದ ಸಹಾಯ ನೆನಪಿಟ್ಟು ಕೊಳ್ಳದ ಹಾವು ಎಂದೆಲ್ಲ ಅಮಿತಾಭ ಬಗ್ಗೆ ಟೀಕಿಸಿದರು.ಆದರೆ ಅಮಿತಾಭ ಅಮರ್ ಬಗ್ಗೆ ತುಟಿ ಪಿಟಕ್ ಅನ್ನಲಿಲ್ಲ.ಅಷ್ಟೇ ಅಲ್ಲ ಒಮ್ಮೆಯೂ ಮಾತನಾಡಿಸುವ ಗೊಡವೆಗೂ ಹೋಗಲಿಲ್ಲ.ಹತ್ತಿರದವರು ಹೇಳುವ ಪ್ರಕಾರ ಅಮಿತಾಭ ಗೆ ಅಮರ ಸಿಂಗ್ ರ ವಿವಾದಗಳು ಬೇಸರ ತರಿಸಿದ್ದವು. ವ್ಯಥಾ ವಿವಾದಗಳಲ್ಲಿ ಬೀಳಲು ಬಚ್ಚನ್ ಕುಟುಂಬ ತಯಾರು ಇರಲಿಲ್ಲ.ಜಯಾ ಬಚ್ಚನ್ ಅಮರ್ ಸಿಂಗ್ ರಿಗೋಸ್ಕರ ರಾಜ್ಯ ಸಭಾ ಸೀಟು ಬಿಟ್ಟು ಕೊಡಲು ಒಪ್ಪಲಿಲ್ಲ.ಹೀಗಾಗಿ ಅಮರ್ ಸಿಂಗ್ ಮತ್ತು ಬಚ್ಚನ್ ಕುಟುಂಬ ಬಹಳ ದೂರ ದೂರ ಆಗಿ ಹೋದರು.ಎಷ್ಟೆಂದರೆ ಬಚ್ಚನ್ ಅವರ 70 ನೇ ಹುಟ್ಟು ಹಬ್ಬಕ್ಕೆ spot boys ಗಳಿಗೂ ಆಮಂತ್ರಣ ಇತ್ತು ಆದರೆ ಅಮರ್ ಸಿಂಗ್ ರಿಗೆ ಇರಲಿಲ್ಲ.ಇದನ್ನು ಸ್ವತಃ ಅಮರ್ ಸಿಂಗ್ ರೇ ಹೇಳಿ ಕೊಂಡು ಮಾಧ್ಯಮಗಳ ಮುಂದೆ ಕಣ್ಣೀರು ಹಾಕಿದ್ದರು.

ಆದರೆ 2019 ರಲ್ಲಿ ಅಮರ್ ಸಿಂಗ್ ಒಂದು ವಿಡಿಯೋ ಮಾಡಿ ಅಮಿತಾಭ್ ಬಚ್ಚನ್ ಕ್ಷಮೆ ಕೇಳಿದ್ದರು.ಆದರೆ ಒಮ್ಮೆ 2010 ರಲ್ಲಿ ಮುರಿದ ಬಚ್ಚನ್ ಅಮರ್ ಸಿಂಗ್ ದೋಸ್ತಿ ಅಮರ ಸಿಂಗ್ ರ ಸಾವಿನವರೆಗೂ ಸರಿ ಹೋಗಲೇ ಇಲ್ಲ.

Follow Us:
Download App:
  • android
  • ios