ಮೋದಿ ಉದ್ಘಾಟಿಸಿದ್ದ ಹಳಿ ಸ್ಫೋಟಿಸಿ ದುಷ್ಕೃತ್ಯಕ್ಕೆ ವಿಫಲ ಯತ್ನ ರಾಜಸ್ಥಾನದ ಉದಯಪುರ ಬಳಿ ರೈಲು ಹಳಿ ತುಂಡು  ಸ್ಫೋಟಕ ಬಳಸಿ ಹಳಿ ತುಂಡು ಮಾಡಿದ್ದ ದುಷ್ಕರ್ಮಿಗಳು  ಹಳಿ ತಪಾಸಕರು, ಸ್ಥಳೀಯರ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ

ಉದಯಪುರ (ರಾಜಸ್ಥಾನ) (ನ.14): ಕಳೆದ 13 ದಿನದ ಹಿಂದಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರು ಲೋಕಾರ್ಪಣೆ ಮಾಡಿದ್ದ ಉದಯಪುರ-ಅಸರ್ವಾ ಮಾರ್ಗದ ರೈಲು ಹಳಿಯನ್ನು ಸ್ಫೋಟಕಗಳನ್ನು ಬಳಸಿ ದುಷ್ಕರ್ಮಿಗಳು ತುಂಡರಿಸಿದ ಘಟನೆ ಭಾನುವಾರ ನಡೆದಿದೆ. ಆದರೆ ಸ್ಥಳೀಯರ ಮಾಹಿತಿಯಿಂದ ಹಾಗೂ ರೈಲ್ವೆ ಹಳಿ ತಪಾಸಕರು ಅದನ್ನು ಸಕಾಲದಲ್ಲಿ ಪತ್ತೆ ಮಾಡಿದ ಕಾರಣ ಭಾರಿ ರೈಲು ದುರಂತವೊಂದು ತಪ್ಪಿದೆ.

ಇದರ ಬೆನ್ನಲ್ಲೇ ಸ್ಥಳದಲ್ಲಿ ಗನ್‌ಪೌಡರ್‌ ಹಾಗೂ ಡಿಟೋನೇಟರ್‌ಗಳು ಪತ್ತೆ ಆಗಿವೆ. ಹೀಗಾಗಿ ಇದು ಭಯೋತ್ಪಾದಕ ಕೃತ್ಯ ಇರಬಹುದು ಎಂಬ ಶಂಕೆ ಎದುರಾಗಿದ್ದು, ಸ್ಥಳಕ್ಕೆ ರಾಜಸ್ಥಾನ ಪೊಲೀಸರ ಉದಯಪುರ ಭಯೋತ್ಪಾದನಾ ನಿಗ್ರಹ ಪಡೆದ ದೌಡಾಯಿಸಿ ತನಿಖೆ ಆರಂಭಿಸಿದೆ.

45 ಗಂಟೆ, 20 ಸಭೆ, 10 ವಿಶ್ವನಾಯಕರ ಭೇಟಿ; ಜಿ20ಯಲ್ಲಿ ಇದು ಪ್ರಧಾನಿ ಮೋದಿ ವೇಳಾಪಟ್ಟಿ!

ಉದಯಪುರ-ಅಸರ್ವಾ ಮಾರ್ಗದಲ್ಲಿ ಈ ಮುನ್ನ ಮೀಟರ್‌ ಗೇಜ್‌ ರೈಲು ಮಾರ್ಗವಿತ್ತು. ಅದನ್ನು ಬ್ರಾಡ್‌ಗೇಜ್‌ಗೆ ಪರಿವರ್ತಿಸಿದ ಬಳಿಕ ಅಕ್ಟೋಬರ್‌ 31ರಂದು ನರೇಂದ್ರ ಮೋದಿ ಉದ್ಘಾಟಿಸಿದ್ದರು. ಅದೇ ದಿನ ರೈಲುಗಳ ಸಂಚಾರಕ್ಕೂ ಅವರು ಹಸಿರು ನಿಶಾನೆ ತೋರಿಸಿದ್ದರು.

ಈ ನಡುವೆ, ‘ಭಾನುವಾರ ಬೆಳಗ್ಗೆ 8 ಗಂಟೆಗೆ ಎಂದಿನಂತೆ ಟ್ರ್ಯಾಕ್‌ಮೆನ್‌ಗಳು ಹಳಿ ತಪಾಸಣೆ ನಡೆಸುತ್ತಿದ್ದರು. ಆಗ ಹಳಿ ತುಂಡಾಗಿದ್ದನ್ನು ಅವರು ಅಧಿಕಾರಿಗಳ ಗಮನಕ್ಕೆ ತಂದರು. ಕೂಡಲೇ ಸ್ಥಳಕ್ಕೆ ಹೆಚ್ಚಿನ ತಂಡಗಳನ್ನು ರೈಲ್ವೆ ಇಲಾಖೆ ಕಳಿಸಿತು ಹಾಗೂ ಈ ಮಾರ್ಗದ ಎಲ್ಲ ರೈಲು ಸಂಚಾರವನ್ನು ರದ್ದುಗೊಳಿಸಲಾಯಿತು. ಹಳಿ ಬಿರುಕು ಬಿಟ್ಟಬಗ್ಗೆ ತನಿಖೆ ನಡೆಸುತ್ತಿದ್ದೇವೆ’ ಎಂದು ವಾಯವ್ಯ ರೈಲ್ವೆ ಸಾರ್ವಜನಿಕ ಸಂಪರ್ಕಾಧಿಕಾರಿ ಕ್ಯಾ ಶಶಿ ಕಿರಣ್‌ ಹೇಳಿದ್ದಾರೆ. ಕೃತ್ಯ ಪತ್ತೆ ಆದ ಕೆಲ ಹೊತ್ತಿನ ಬಳಿಕ ಇದೇ ಮಾರ್ಗದಲ್ಲಿ ಅಸರ್ವಾ-ಉದಯಪುರ ಎಕ್ಸ್‌ಪ್ರೆಸ್‌ ರೈಲು ಸಾಗಬೇಕಿತ್ತು.

Udaipur-Ahmedabad ರೈಲ್ವೆ ಟ್ರ್ಯಾಕ್ ಸ್ಫೋಟ, ಎಟಿಎಸ್‌ ತನಿಖೆ ಆರಂಭ

ಭಯೋತ್ಪಾದಕ ಕೃತ್ಯ?:

‘ಈ ಕೃತ್ಯದ ಹಿಂದೆ ಉಗ್ರರು ಇರಬಹುದು ಎಂಬ ಶಂಕೆ ಉಂಟಾಗಿದೆ. ಏಕೆಂದರೆ ಸ್ಥಳದಲ್ಲಿ ಗನ್‌ಪೌಡರ್‌ ಹಾಗೂ ಡೆಟೋನೇಟರ್‌ಗಳು ಪತ್ತೆ ಆಗಿವೆ. ಅಲ್ಲದೆ, ಭಾನುವಾರ ಬೆಳಗ್ಗೆ 8 ಗಂಟೆಗೆ ಮುನ್ನ ಸ್ಫೋಟದ ಶಬ್ದವನ್ನೂ ಕೇಳಿದ್ದಾಗಿ ಸ್ಥಳೀಯರು ಹೇಳಿದ್ದಾರೆ. ಹೀಗಾಗಿ ಉದಯಪುರ ಎಟಿಎಸ್‌ ಪೊಲೀಸರು ದೌಡಾಯಿಸಿ ಭಯೋತ್ಪಾದನೆ ಮತ್ತು ಎಲ್ಲ ಇತರೆ ದೃಷ್ಟಿಕೋನದಲ್ಲಿ ತನಿಖೆ ಆರಂಭಿಸಿದ್ದಾರೆ ಮತ್ತು ದುಷ್ಕರ್ಮಿಗಳ ಪತ್ತೆಗೆ ಬಲೆ ಬೀಸಿದ್ದಾರೆ’ ಎಂದು ಉದಯಪುರ ಎಸ್ಪಿ ವಿಕಾಸ್‌ ಶರ್ಮಾ ಹೇಳಿದ್ದಾರೆ.