ಲಕ್ಕುಂಡಿ ನಿಧಿ ಕಾವಲು ಸರ್ಪದ ಬೆನ್ನಲ್ಲೇ ಹಾವು ಕಡಿತ ಉತ್ಸವ ದೇವಸ್ಥಾನದ ನಾಗ ನಂಬಿಕೆ ಭಾರಿ ಚರ್ಚೆ, ಹಾವಿನಿಂದ ಕಚ್ಚಿಸಿಕೊಂಡರೆ ಶುಭ ಸಂಕೇತ ಎಂಬ ನಂಬಿಕೆಯ ಉತ್ಸವ, ದೇವಸ್ಥಾನಗಳ ಹುಡುಕಾಟ ಶುರುವಾಗಿದೆ.
ಲಕ್ಕುಂಡಿ (ಜ.22) ಗದಗ ಜಿಲ್ಲೆಯ ಲಕ್ಕುಂಡಿಯಲ್ಲಿ ಪತ್ತೆಯಾಗಿರುವ ನಿಧಿ ಹಾಗೂ ಉತ್ಖನನ ಕಾರ್ಯ ದೇಶಾದ್ಯಂತ ಚರ್ಚೆಯಾಗುತ್ತಿದೆ. ಪುರಾತತ್ವ ಇಲಾಖೆ ತೀವ್ರ ಕುತೂಹಲದಿಂದ ಉತ್ಖನನ ಕಾರ್ಯ ಆರಂಭಿಸಿದ್ದರೆ, ಇತ್ತ ಇತಿಹಾಸಕಾರರು, ಹಿಂದೂಗಳು ಗತ ಕಾಲದ ವೈಭವವ ತಿಳಿದುಕೊಳ್ಳಲು ಆಸಕ್ತರಾಗಿದ್ದಾರೆ. ಲಕ್ಕುಂಡಿಯಲ್ಲಿ ಚಿನ್ನದ ಆಭರಣಗಳು ಪತ್ತೆಯಾದ ಬಳಿಕ ಶುರುವಾದ ಉತ್ಖನನ ಕಾರ್ಯದಲ್ಲಿ ಹೆಡೆ ಎತ್ತಿ ನಿಂತಿರುವ ನಾಗನ ಶಿಲ್ಪ, ಶಿವಲಿಂಗ, ಮೂರ್ತಿಗಳ ಅವಶೇಷಗಳು ಸೇರಿದಂತೆ ಹಲವು ಪುತಾನ ವಸ್ತುಗಳು ಪತ್ತೆಯಾಗಿದೆ. ಇದೇ ವೇಳೆ ಉತ್ಖನನ ಜಾಗದ ಸುತ್ತ ಮುತ್ತ ನಾಗರ ಹಾವುಗಳು ಪ್ರತ್ಯಕ್ಷವಾಗಿದೆ ಎಂದು ಸ್ಥಳೀಯರು ಆತಂಕಗೊಂಡಿದ್ದಾರೆ. ಈ ಘಟನೆ ಬೆನ್ನಲ್ಲೇ ಕರ್ನಾಟಕದ ನಾಗ ದೇವಸ್ಥಾನ ಹಾಗೂ ಅದರ ಪುರಾಣಗಳ ಕುರಿತು ಚರ್ಚೆಯಾಗುತ್ತಿದೆ. ಇದೇ ವೇಳೆ ಭಾರತದಲ್ಲಿ ಹಾವಿನಿಂದ ಕಚ್ಚಿಸಿಕೊಳ್ಳುವ ಉತ್ಸವ ನಡೆಯುವ ವೀರ್ ತೇಜ ದೇವಸ್ಥಾನ ಕುರಿತು ಚರ್ಚೆ ಮಾತ್ರವಲ್ಲ ಹುಡುಕಾಟಗಳು ಶುರುವಾಗಿದೆ.
ನಾಗ ಉತ್ಸವ ನಡೆಯುವ ವೀರ್ ತೇಜ ದೇವಸ್ಥಾನ
ಲಕ್ಕುಂಡಿ ಅದ್ಭುತ ಅನಾವರಣಗೊಳ್ಳುತ್ತಿದ್ದಂತೆ ನಾಗ ದೇವರ ನಂಬಿಕೆ, ನಾಗ ಉತ್ಸವ ನಡೆಯುವ ಹಲವು ದೇವಸ್ಥಾನಗಳ ಕುರಿತು ಚರ್ಚೆಗಳು ನಡೆಯುತ್ತಿದೆ. ಇದರ ನಡುವೆ ವೀರ್ ತೇಜ ದೇವಸ್ಥಾನ ದೇಶದ ಗಮನ ಸೆಳೆದಿದೆ. ಇದು ರಾಜಸ್ಥಾನದ ಸಣ್ಣ ಪಟ್ಟಣ ಒಂದರಲ್ಲಿರುವ ದೇವಸ್ಥಾನ. ಹಲವು ಶತಮಾನಗಳಿಂದ ಈ ದೇವಸ್ಥಾನದಲ್ಲಿ ಹಾವಿನ ಉತ್ಸವ ನಡೆಯುತ್ತಿದೆ. ಈ ಊರು, ಜಿಲ್ಲೆಯ ಬಹುತೇಕರು ಪ್ರತಿ ವರ್ಷ ಹಾವಿನ ಉತ್ಸವಕ್ಕೆ ಆಗಮಿಸುತ್ತಾರೆ. ಎಲ್ಲೇ ಇದ್ದರು, ಬಿಡುವು ಮಾಡಿಕೊಂಡು ಉತ್ಸವದಲ್ಲಿ ಪಾಲ್ಗೊಳ್ಳುತ್ತಾರೆ. ಇದರಿಂದ ತಮ್ಮ ಬದುಕಿನಲ್ಲಿ ಎದುರಾಗು ಕಷ್ಟಕಾರ್ಪಣ್ಯಗಳು ದೂರವಾಗಲಿದೆ ಎಂಬ ನಂಬಿಕೆ ಇದೆ.
ಹಾವಿನ ಕಡಿತ ಉತ್ಸವ
ಪ್ರತಿ ವರ್ಷ ಸರಿಸುಮಾರು ಸೆಪ್ಟೆಂಬರ್ ತಿಂಗಳಲ್ಲಿ ವೀರ್ ತೇಜ ದೇವಸ್ಥಾನದಲ್ಲಿ ಹಾವಿನ ಉತ್ಸವ ನಡೆಯುತ್ತದೆ. ಈ ಹಬ್ಬದಲ್ಲಿ ಸಾವಿರಾರು ಮಂದಿ ಪಾಲ್ಗೊಳ್ಳುತ್ತಾರೆ. ವಿಶೇಷ ಅಂದರೆ ಹಾವನ್ನು ಹಿಡಿದು ಈ ಉತ್ಸವದಲ್ಲಿ ಬಹುತೇಕರು ಪಾಲ್ಗೊಳ್ಳುತ್ತಾರೆ. ಇಷ್ಟೇ ಅಲ್ಲ ವೀರ್ ತೇಜ ದೇವಸ್ಥಾನದ ಮುಂದೆ ನಾಗನ ದರ್ಶನ ಪಡೆದು ಹಾವಿನಿಂದ ಕಚ್ಚಿಸಿಕೊಳ್ಳತ್ತಾರೆ. ಹೀಗೆ ಹಾವು ಕಚ್ಚಿದರೆ ಎಲ್ಲವೂ ಒಳ್ಳಯದಾಗುತ್ತದೆ. ಸುಖ ಸಂಪತ್ತು, ಆರೋಗ್ಯ ವೃದ್ಧಿಸುತ್ತದೆ ಎಂಬ ನಂಬಿಕೆ ಇದೆ. ಈ ಹಾವಿನ ಉತ್ಸವ ಭಾರಿ ಜನಪ್ರಿಯವಾಗಿದೆ. ಈ ದೇವಸ್ಥಾನ ಭಾರತದಲ್ಲಿ ಹಾವಿನ ಮೇಲಿರುವ ನಂಬಿಕೆಯನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ.
ಉತ್ಸವ ದಿನ ಪವಾಡ ಎಂಬ ನಂಬಿಕೆ
ವಿಶೇಷವಾಗಿ ಮದುವೆಯಾಗಿ ಗಂಡನ ಮನೆ ಸೇರಿಕೊಂಡ ಹೆಣ್ಣು ಮಕ್ಕಳು ಕುಟುಂಬ ಸಮೇತ ತವರು ಮನೆಗೆ ಮರಳಿ ಈ ಉತ್ಸವದಲ್ಲಿ ಪಾಲ್ಗೊಳ್ಳುತ್ತಾರೆ. ಭಕ್ತಿಯಿಂದ ಪೂಜಿಸಿ ಹಾವಿನಿಂದ ಕಚ್ಚಿಸಿಕೊಂಡರೆ ನಮಗೆ ಒಳ್ಳೆಯದಾಗುತ್ತದೆ. ಇಷ್ಟೇ ಅಲ್ಲ ಹಾವಿನಿಂದ ಕಚ್ಚಿಸಿಕೊಂಡರೆ ಏನೂ ಆಗುವುದಿಲ್ಲ. ಉತ್ಸವದ ದಿನ ಮಾತ್ರ ಪವಾಡ ನಡೆಯುತ್ತದೆ. ಇದು ದೇವರ ಮಹಿಮೆ ಎಂದು ಭಕ್ತೆ ಲಕ್ಷ್ಮಿ ಹೇಳಿದ್ದಾರೆ.
ನಾಗರ ದೇವರ ನಂಬಿಕೆ ಭಾರತದಲ್ಲಿ ಶಕ್ತವಾಗಿದೆ. ಕರ್ನಾಟಕದಲ್ಲಿ ದಕ್ಷಿಣ ಭಾಗದಲ್ಲಿ ಅತೀ ಹೆಚ್ಚು ನಾಗ ನಂಬಿಕೆ, ನಾಗಾರಾಧನೆ ಮಾಡಲಾಗುತ್ತದೆ. ದಕ್ಷಿಣ ಕನ್ನಡದಲ್ಲಿರುವ ಸುಬ್ರಹ್ಮಣ್ಯ ದೇವಸ್ಥಾನ ಸೇರಿದಂತೆ ಹಲವು ದೇವಸ್ಥಾನಗಳು ಅತೀ ಜನಪ್ರಿಯವಾಗಿದೆ.
ಲಕ್ಕುಂಡಿ ಉತ್ಖನನ ದೇಶದ ಕುತೂಹಲ ಕೆರಳಿಸಿದೆ. ಪ್ರಮುಖವಾಗಿ ಮಣ್ಣಿನಡಿಯಲ್ಲಿ ಹುದುಗಿ ಹೋಗಿರುವ ಭಾರತದ ಗತ ವೈಭವ ಮತ್ತೆ ಮರಕಳಿಸಲಿ ಎಂದು ಹಲವರು ಲಕ್ಕುಂಡಿಯನ್ನು ಬೆರಗುಗಣ್ಣಿನಿಂದ ನೋಡುತ್ತಿದ್ದಾರೆ.


