- Home
- Karnataka Districts
- ಲಕ್ಕುಂಡಿ ಉತ್ಖನನದಲ್ಲಿ 'ಘಟಸರ್ಪ'ದ ಆತಂಕ: ನಿಧಿ ಕಾಯುವ ಹಾವುಗಳ ಬೆನ್ನತ್ತಿ ಬಂದ ಮೈಸೂರಿನ ಉರಗ ರಕ್ಷಕರು!
ಲಕ್ಕುಂಡಿ ಉತ್ಖನನದಲ್ಲಿ 'ಘಟಸರ್ಪ'ದ ಆತಂಕ: ನಿಧಿ ಕಾಯುವ ಹಾವುಗಳ ಬೆನ್ನತ್ತಿ ಬಂದ ಮೈಸೂರಿನ ಉರಗ ರಕ್ಷಕರು!
ಗದಗ ಜಿಲ್ಲೆಯ ಲಕ್ಕುಂಡಿಯಲ್ಲಿ ನಡೆಯುತ್ತಿರುವ ಐತಿಹಾಸಿಕ ಉತ್ಖನನವು ಹಾವುಗಳ ಪ್ರತ್ಯಕ್ಷದಿಂದ ನಿಗೂಢ ತಿರುವು ಪಡೆದಿದೆ. 'ನಿಧಿಯನ್ನು ಹಾವು ಕಾಯುತ್ತವೆ' ಎಂಬ ಸ್ಥಳೀಯರ ನಂಬಿಕೆ ಕುರಿತು ಪರಿಶೀಲನೆ ಮಾಡಿ, ಜಾಗೃತಿ ಮೂಡಿಸಲು ಮೈಸೂರಿನ ಶಿವರಾಜ್ ನೇತೃತ್ವದ ಉರಗ ರಕ್ಷಣಾ ತಂಡವು ಆಗಮಿಸಿದೆ.

ನಿಧಿಯನ್ನು ಹಾವು ಕಾಯುತ್ತವೆ
ಗದಗ (ಜ.21): ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ನಡೆಯುತ್ತಿರುವ ಉತ್ಖನನ ಕಾರ್ಯವು ಈಗ ನಿಗೂಢ ತಿರುವು ಪಡೆದುಕೊಂಡಿದೆ. ಉತ್ಖನನದ ವೇಳೆ ಹಾವುಗಳು ಕಾಣಿಸಿಕೊಂಡ ಬೆನ್ನಲ್ಲೇ, 'ನಿಧಿಯನ್ನು ಹಾವು ಕಾಯುತ್ತವೆ' ಎಂಬ ಗ್ರಾಮಸ್ಥರ ಆತಂಕ ದೂರ ಮಾಡಲು ಮೈಸೂರಿನ ಖ್ಯಾತ ಉರಗ ರಕ್ಷಕ ಸ್ನೇಕ್ ಶಿವರಾಜು ನೇತೃತ್ವದ ತಂಡ ಲಕ್ಕುಂಡಿಗೆ ಧಾವಿಸಿದೆ.
ಬೆಚ್ಚಿಬೀಳಿಸಿದ ಹಾವು; ಉರಗ ರಕ್ಷಕರ ಭೇಟಿ
ಲಕ್ಕುಂಡಿಯ ಕೋಟೆ ವೀರಭದ್ರೇಶ್ವರ ದೇವಸ್ಥಾನದ ಆವರಣದಲ್ಲಿ ಮೂರನೇ ದಿನದ ಉತ್ಖನನ ನಡೆಯುತ್ತಿದ್ದಾಗ ಹಾವೊಂದು ಪ್ರತ್ಯಕ್ಷವಾಗಿತ್ತು. ಇದರಿಂದ ಜೆಸಿಬಿ ಚಾಲಕ ಹಾಗೂ ಗ್ರಾಮಸ್ಥರು ಬೆಚ್ಚಿಬಿದ್ದಿದ್ದರು. ನಿಧಿಯ ಆಸೆಗೆ ಹೋದವರು ಹಿಂದೆ ರಕ್ತಕಾರಿ ಸತ್ತಿದ್ದಾರೆ ಎಂಬ ಸ್ಥಳೀಯರ ನಂಬಿಕೆ ಮತ್ತು 'ಸರ್ಪಗಳು ನಿಧಿ ಕಾಯುತ್ತವೆ' ಎಂಬ ಭೀತಿಯ ಹಿನ್ನೆಲೆಯಲ್ಲಿ ಅರಣ್ಯ ಪರಿಸರ ವನ್ಯಜೀವಿ ಸಮಾಜದ ತಂಡ ಸ್ಥಳ ಪರಿಶೀಲನೆ ನಡೆಸಿತು.
ಕೂದಲಿರುವ ಹಾವು ಅಥವಾ ಹಲವು ತಲೆಗಳ ಹಾವು ಕೇವಲ ಕಾಲ್ಪನಿಕ
ಈ ವೇಳೆ ಏಷ್ಯಾನೆಟ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ ಸ್ನೇಕ್ ಶಿವರಾಜು, 'ಕೂದಲಿರುವ ಹಾವು ಅಥವಾ ಹಲವು ತಲೆಗಳ ಹಾವು ಕೇವಲ ಕಾಲ್ಪನಿಕ. ನಿಧಿಯನ್ನು ಹಾವು ಕಾಯುತ್ತದೆ ಎಂಬುದು ಕೇವಲ ಭ್ರಮೆ. ಕಳೆದ 20 ವರ್ಷಗಳ ಅನುಭವದಲ್ಲಿ ಇಂತಹ ಘಟನೆ ನಮಗೆ ಕಂಡಿಲ್ಲ. ಹಾವು ಕಂಡರೆ ಹೊಡೆಯಬೇಡಿ, ಉರಗ ರಕ್ಷಕರಿಗೆ ಮಾಹಿತಿ ನೀಡಿ' ಎಂದು ಜನರಲ್ಲಿ ಅರಿವು ಮೂಡಿಸಿದರು.
ಉತ್ಖನನದಲ್ಲಿ ಪತ್ತೆಯಾದ ಐತಿಹಾಸಿಕ ಕುರುಹುಗಳು
ಹತ್ತನೇ ಶತಮಾನದ ಕಲ್ಯಾಣಿ ಚಾಲುಕ್ಯರ ಕಾಲದ ವೈಭವವನ್ನು ಹೊಂದಿರುವ ಈ ಜಾಗದಲ್ಲಿ ಶನಿವಾರ ನಡೆಸಿದ ಉತ್ಖನನದ ವೇಳೆ ಶಿವಲಿಂಗದ ಪೀಠ ಹಾಗೂ ಪಾನಿಬಟ್ಟಲು ಮಾದರಿಯ ಪ್ರಾಚೀನ ವಸ್ತುಗಳು ಪತ್ತೆಯಾಗಿವೆ. ಈ ಐತಿಹಾಸಿಕ ದಾಖಲೆಗಳು ಪುರಾತತ್ವ ಶಾಸ್ತ್ರಜ್ಞರಲ್ಲಿ ಕುತೂಹಲ ಮೂಡಿಸಿದ್ದು, ಭೂಗರ್ಭದಲ್ಲಿ ಇನ್ನೂ ದೊಡ್ಡ ಮಟ್ಟದ ಶಿಲಾಕೃತಿಗಳು ಇರುವ ಸಾಧ್ಯತೆಯನ್ನು ಪುಷ್ಟೀಕರಿಸಿದೆ.
ವೀರಭದ್ರೇಶ್ವರ ಜಾತ್ರೆಗೆ ಅಡಚಣೆ
ಆದರೆ, ಈ ಉತ್ಖನನದಿಂದ ವೀರಭದ್ರೇಶ್ವರ ಜಾತ್ರೆಗೆ ಅಡಚಣೆಯಾಗುತ್ತದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದು, ಸ್ಥಳದಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ. ಸದ್ಯ ಈ ಪ್ರದೇಶವನ್ನು ಅತ್ಯಂತ ಸೂಕ್ಷ್ಮ ಎಂದು ಘೋಷಿಸಲಾಗಿದ್ದು, ಸಾರ್ವಜನಿಕರ ಪ್ರವೇಶ ಹಾಗೂ ಚಿತ್ರೀಕರಣಕ್ಕೆ ಕಟ್ಟುನಿಟ್ಟಿನ ನಿಷೇಧ ಹೇರಲಾಗಿದೆ.

