ಸತತ ಮೂರನೇ ಬಾರಿಗೆ ತೆಲಂಗಾಣದಲ್ಲಿ ಅಧಿಕಾರ ಹಿಡಿಯುವ ನಿಟ್ಟಿನಲ್ಲಿ ಓಡುತ್ತಿದ್ದ ಬಿಆರ್‌ಎಸ್‌ನ ಕಾರ್‌ಅನ್ನು ಕಾಂಗ್ರೆಸ್‌ ಪಂಚರ್‌ ಮಾಡಿದೆ. ಭಾರಿ ಬಹುಮತದೊಂದಿಗೆ ಕಾಂಗ್ರೆಸ್‌ ಪಕ್ಷ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದ್ದು, ರೇವಂತ್‌ ರೆಡ್ಡಿ ಮುಂದಿನ ಸಿಎಂ ಆಗುವುದು ನಿಶ್ಚಯವಾಗಿದೆ.

ನವದೆಹಲಿ (ಡಿ.3): ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ 56 ಸೀಟ್‌ಗಳಲ್ಲಿ ಗೆಲುವು ಕಂಡು 8 ಸೀಟ್‌ಗಳಲ್ಲಿ ಮುನ್ನಡೆಯಲ್ಲಿರುವ ಕಾಂಗ್ರೆಸ್‌ ಪಕ್ಷ ಅಧಿಕಾರ ಹಿಡಿಯುವುದು ನಿಶ್ಚಿತವಾಗಿದೆ. ಭಾನುವಾರದ ಮತ ಎಣಿಕೆಯಲ್ಲಿ ಆರಂಭದಿಂದಲೇ ಮುನ್ನಡೆಯಲ್ಲಿದ್ದ ಕಾಂಗ್ರೆಸ್‌ ಚುನಾವಣೆಯಲ್ಲಿ 64 ಸೀಟ್‌ ಗೆಲ್ಲುವುದು ಖಚಿತವಾಗಿದೆ. ಕಳೆದ ಎರಡು ಅವಧಿಯಲ್ಲಿ ಅಧಿಕಾರದಲ್ಲಿದ್ದ ಕೆಸಿಆರ್‌ ನೇತೃತ್ವದ ಭಾರತ್‌ ರಾಷ್ಟ್ರ ಸಮಿತಿ 32ರಲ್ಲಿ ಗೆಲುವು ಕಂಡಿದ್ದು 7 ಸೀಟ್‌ಗಳಲ್ಲಿ ಮುನ್ನಡೆಯಲ್ಲಿದೆ. ಇನ್ನು ಬಿಜೆಪಿ ದಾಖಲೆಯ 7 ಸೀಟ್‌ಗಳಲ್ಲಿ ಗೆಲುವು ಕಂಡಿದ್ದು, 1 ಸೀಟ್‌ನಲ್ಲಿ ಮುನ್ನಡೆಯಲ್ಲಿದೆ. ಅಸಾದುದ್ದೀನ್‌ ಓವೈಸಿ ನೇತೃತ್ವದ ಎಐಎಂಐಎಂ 3 ಸೀಟ್‌ಗಳಲ್ಲಿ ಗೆಲುವು ಕಂಡಿದ್ದು 4 ಸೀಟ್‌ಗಳಲ್ಲಿ ಮುನ್ನಡೆಯಲ್ಲಿದೆ. ಸಿಪಿಐ ಒಂದು ಸ್ಥಾನದಲ್ಲಿ ಗೆಲುವು ಕಂಡಿದೆ. ಇವೆಲ್ಲವೂ ಕೇಂದ್ರ ಚುನಾವಣಾ ಆಯೋಗದ ಸಂಜೆ 7 ಗಂಟೆಯವರೆಗಿನ ಮಾಹಿತಿ ಎನಿಸಿದೆ.

ಹಾಲಿ ಸಿಎಂ ಆಗಿದ್ದ ಕೆ.ಚಂದ್ರಶೇಖರ್‌ ರಾವ್‌ ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದ್ದರು. ತಮ್ಮ ಜನ್ಮಭೂಮಿ ಎನಿಸಿಕೊಂಡಿದ್ದ ಕಾಮಾರೆಡ್ಡಿ ಕ್ಷೇತ್ರದಲ್ಲಿ ಕೆಸಿಆರ್‌ ಆಘಾತಕಾರಿ ಸೋಲು ಕಂಡಿದ್ದಾರೆ. ಈ ಕ್ಷೇತ್ರದಲ್ಲಿ ಭಾವಿ ಮುಖ್ಯಮಂತ್ರಿ ರೇವಂತ್‌ ರೆಡ್ಡಿ ಕೂಡ ಸೋತಿದ್ದು,ಬಿಜೆಪಿಯ ವೆಂಕಟರಮಣ ರೆಡ್ಡಿ ದಾಖಲೆಯ ವಿಜಯ ದಾಖಲಿಸಿದ್ದಾರೆ. ಕೆಸಿಆರ್‌ ಗಜ್ವೆಲ್‌ ಕ್ಷೇತ್ರದಲ್ಲಿ42 ಸಾವಿರಕ್ಕೂ ಅಧಿಕ ಮತಗಳಿಂದ ಗೆಲುವು ಕಂಡಿದ್ದಾರೆ.

ಐವತ್ನಾಲ್ಕು ವರ್ಷದ ರೇವಂತ್ ರೆಡ್ಡಿ ಅವರು ಪಕ್ಷದ ಅಧಿಕಾರವನ್ನು ಒಬ್ಬ ರೆಡ್ಡಿಗೆ ವಹಿಸಿದರೆ, ಪಕ್ಷ ಸುರಕ್ಷಿತ ಎನ್ನುವುದನ್ನು ಕಾಂಗ್ರೆಸ್‌ ಪಾಲಿಗೆ ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ತೆಲಂಗಾಣ ಪ್ರದೇಶ ಕಾಂಗ್ರೆಸ್‌ನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಕೇವಲ ಎರಡು ವರ್ಷದಲ್ಲಿಯೇ ಅವರೀಗ ಸಿಎಂ ಆಗುವ ಹಂತಕ್ಕೆ ಬೆಳೆದಿದ್ದಾರೆ. ಕಾಲೇಜು ದಿನಗಳಲ್ಲಿ ಎಬಿವಿಪಿ ನಾಯಕರಾಗಿ ಕೆಲಸ ಮಾಡಿದ್ದ ರೇವಂತ್‌ ರೆಡ್ಡಿ ಬಳಿಕ ಬಲಪಂಥೀಯ ರಾಜಕೀಯದಿಂದ ಬೇರ್ಪಟ್ಟಿದ್ದರು.

2021ರವರರೆಗೂ ತೆಲಂಗಾಣದಲ್ಲಿ ಕಾಂಗ್ರೆಸ್‌ ರಾಜ್ಯಾಧ್ಯಕ್ಷರಾಗಿದ್ದ ಉತ್ತಮ್‌ ಕುಮಾರ್‌ ರೆಡ್ಡಿಯಿಂದ ರೇವಂತ್‌ ರೆಡ್ಡಿ ಅಧಿಕಾರ ವಹಿಸಿಕೊಂಡಿದ್ದರು. ಕೆ.ಚಂದ್ರಶೇಖರ್ ರಾವ್‌ ಅವರ ತೆಲಂಗಾಣ ರಾಷ್ಟ್ರ ಸಮಿತಿಯನ್ನು ಮಣಿಸಲು ಸಾಧ್ಯವಾಗದೇ ಉತ್ತಮ್‌ ಕುಮಾರ್‌ ರೆಡ್ಡಿ ಅಧಿಕಾರದಲ್ಲಿದ್ದರು. ಈ ನಡುವೆ 2021ರಲ್ಲಿ ಬಿಜೆಪಿ ತೆಲಂಗಾಣದಲ್ಲಿ ಉಪಚುನಾವಣೆಗಳನ್ನು ಗೆಲ್ಲುವ ಮೂಲಕ ರಾಜ್ಯದಲ್ಲಿ ನಾಲ್ವರು ಶಾಸಕರನ್ನು ಪಡೆದುಕೊಂಡಿದ್ದರು. ಅಂದು ಬಿಜೆಪಿಯ ರಾಜ್ಯಾಧ್ಯಕ್ಷರಾಗಿದ್ದ ಬಂಡಿ ಸಂಜಯ್‌ ಅವರು ತೆಲಂಗಾಣದ ಆಳದಲ್ಲಿ ಕೇಸರಿ ಪಕ್ಷವನ್ನು ಬೇರೂರಲು ನೆರವು ಮಾಡಿದರು. ತೆಲಂಗಾಣದಲ್ಲಿ ಬಿಆರ್‌ಎಸ್‌ ಹಾಗೂ ಬಿಜೆಪಿ ಪ್ರಮುಖ ಎದುರಾಳಿಯಾಗುತ್ತಿದ್ದಾರೆ ಎನ್ನುವ ಹಂತದಲ್ಲಿ ರೇವಂತ್‌ ರೆಡ್ಡಿ ಕಾಂಗ್ರೆಸ್‌ನ ಅಧ್ಯಕ್ಷರಾಗಿದ್ದರು.

2022 ರ ಹೊತ್ತಿಗೆ, ರೆಡ್ಡಿ ಕ್ಷೇತ್ರಗಳ ಪ್ರವಾಸವನ್ನು ಪ್ರಾರಂಭಿಸಿದರು ಮತ್ತು ಅವರ ಪ್ರಚಾರವು ಫಲಿತಾಂಶಗಳನ್ನು ತರಲು ಪ್ರಾರಂಭಿಸಿತು. ಬಂಡಿ ಸಂಜಯ್ ಅವರನ್ನು ಅಧಿಕಾರದಿಂದ ಕೆಳಗಿಳಿಸಿ ಅವರ ಬದಲಿಗೆ ಸೌಮ್ಯವಾದಿ ಕಿಶನ್ ರೆಡ್ಡಿ ಅವರನ್ನು ನೇಮಿಸುವ ಬಿಜೆಪಿಯ ಲೆಕ್ಕಾಚಾರವು ಚುನಾವಣಾ ಕಾಲ ಪ್ರಾರಂಭವಾಗುವ ಮೊದಲೇ ಕಾಂಗ್ರೆಸ್ ಅನ್ನು ಗೆಲ್ಲುವ ಸ್ಥಾನಕ್ಕೆ ತಳ್ಳಿತ್ತು. ಚುನಾವಣೆಯಲ್ಲಿ ಸೋಲು ಕಂಡಿದ್ದರೂ, ಬಿಆರ್‌ಎಸ್‌ ಕೆಲವು ಪ್ರಮುಖ ಕ್ಷೇತ್ರಗಳಲ್ಲಿ ಗೆಲುವು ಕಂಡಿದೆ. ಬಿಆರ್‌ಎಸ್‌ ಅಭ್ಯರ್ಥಿ ಮಾಗಂಟಿ ಗೋಪಿನಾಥ್‌, ಜುಬಿಲಿ ಹಿಲ್ಸ್‌ನಲ್ಲಿ ಗೆಲುವು ಕಂಡಿದ್ದಾರೆ. ಮುಶೀರಾಬಾದ್ ಕ್ಷೇತ್ರದಲ್ಲಿ ಐಎನ್‌ಸಿ ಅಭ್ಯರ್ಥಿಯನ್ನು ಸೋಲಿಸಿ ಮುತಾ ಗೋಪಾಲ್ ಮತ್ತು ಲಾಲ್ ಬಹದ್ದೂರ್ ನಗರದಲ್ಲಿ ದೇವಿರೆಡ್ಡಿ ಸುಧೀರ್ ರೆಡ್ಡಿ ಗೆಲುವು ಸಾಧಿಸಿದ್ದಾರೆ.

ವೆಂಕಟ ರಮಣನ ಶಾಕ್‌ಗೆ ಕಾಂಗ್ರೆಸ್-BRS ಕಂಗಾಲು; ಹಾಲಿ ,ಮುಂದಿನ ಸಿಎಂ ಸೋಲಿಸಿದ ಬಿಜೆಪಿ ನಾಯಕ!

ಡಿಸೆಂಬರ್ 4 ಅಥವಾ 9 ರಂದು ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಭದ್ರತಾ ವ್ಯವಸ್ಥೆ ಮಾಡುವಂತೆ ಟಿಪಿಸಿಸಿ ಮುಖ್ಯಸ್ಥ ರೇವಂತ್ ರೆಡ್ಡಿ ಕೇಳಿಕೊಂಡಿದ್ದಾರೆ ಎಂದು ತೆಲಂಗಾಣ ಪೊಲೀಸರು ತಿಳಿಸಿದ್ದಾರೆ. ತಮ್ಮ ಪಕ್ಷವು ಶೀಘ್ರದಲ್ಲೇ ರಾಜ್ಯಪಾಲರನ್ನು ಭೇಟಿಯಾಗಿ ಸರ್ಕಾರ ರಚನೆಯ ಬಗ್ಗೆ ಚರ್ಚಿಸಲಿದೆ ಎಂದು ರೆಡ್ಡಿ ಅವರಿಗೆ ತಿಳಿಸಿದರು. ಎಲ್‌ಬಿ ಸ್ಟೇಡಿಯಂನಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ದೆಹಲಿಯ ಹಿರಿಯ ನಾಯಕರಲ್ಲದೆ ಹಲವು ಮುಖ್ಯಮಂತ್ರಿಗಳು, ಮಾಜಿ ಮುಖ್ಯಮಂತ್ರಿಗಳು ಭಾಗವಹಿಸಲಿದ್ದಾರೆ ಎಂದು ರೆಡ್ಡಿ ತಿಳಿಸಿದ್ದಾರೆ. ಚುನಾವಣೆಯ ಸೋಲಿನ ಬೆನ್ನಲ್ಲಿಯೇ ಕೆಸಿಆರ್‌ ನೀಡಿದ್ದ ರಾಜೀನಾಮೆಯನ್ನು ತೆಲಂಗಾಣ ರಾಜ್ಯಪಾಲರು ಅಂಗೀಕರಿಸಿದ್ದಾರೆ.

ಚುನಾವಣಾ ಸೋಲಿನ ಬೆನ್ನಲ್ಲೇ ಇಂಡಿ ಒಕ್ಕೂಟಕ್ಕೆ ಮಲ್ಲಿಕಾರ್ಜುನ ಖರ್ಗೆ ಮಹತ್ವದ ಸಂದೇಶ!