ಹೈದರಾಬಾದ್‌[ಫೆ.28]: ಸರ್ಕಾರಿ ಆಸ್ಪತ್ರೆಯಲ್ಲಿದ್ದ ತನ್ನ ಮಗಳ ಶವ ವಾಪಸ್‌ ಕೊಡಿ ಎಂದು ಗೋಳಿಡುತ್ತಿದ್ದ ತಂದೆ ಮೇಲೆ ಪೊಲೀಸ್‌ ಅಧಿಕಾರಿಯೋರ್ವ ಬೂಟುಗಾಲಿನಿಂದ ಒದ್ದು, ಎಳೆದಾಡಿದ ಆಘಾತಕಾರಿ ಘಟನೆ ತೆಲಂಗಾಣದಲ್ಲಿ ನಡೆದಿದೆ.

ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ವೈರಲ್‌ ಆಗಿದ್ದು, ಈ ಕೃತ್ಯವೆಸಗಿದ ಪೊಲೀಸ್‌ ಅಧಿಕಾರಿಯನ್ನು ಅಮಾನತು ಮಾಡಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ತೆಲಂಗಾಣ ಸರ್ಕಾರ ಸೂಚನೆ ನೀಡಿದೆ.

ಮಗಳ ಶವಕ್ಕಾಗಿ ಗೋಳಿಟ್ಟ ವ್ಯಕ್ತಿಗೆ ಬೂಟುಗಾಲಿಂದ ಒದ್ದ ಪೊಲೀಸ್‌ ಅಮಾನತು!

ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯಲ್ಲಿರುವ ನಾರಾಯಣ್‌ ಜೂನಿಯರ್‌ ಕಾಲೇಜಿನಲ್ಲಿ ಅಭ್ಯಾಸ ಮಾಡುತ್ತಿದ್ದ ಸಂಧ್ಯಾರಾಣಿ(16) ಎಂಬ ವಿದ್ಯಾರ್ಥಿನಿ ಕೆಲ ದಿನಗಳ ಹಿಂದೆ ಆತ್ಮಹತ್ಯೆಗೆ ಶರಣಾಗಿದ್ದಳು. ಆದರೆ, ಕಾಲೇಜು ಆಡಳಿತ ಮಂಡಳಿಯ ನಿರ್ಲಕ್ಷ್ಯವೇ ತಮ್ಮ ಪುತ್ರಿಯ ಸಾವಿಗೆ ಕಾರಣ ಎಂದು ವಿದ್ಯಾರ್ಥಿನಿ ಪೋಷಕರು ದೂರಿದ್ದು, ಆಕೆಯ ಮೃತದೇಹವನ್ನು ಸರ್ಕಾರಿ ಆಸ್ಪತ್ರೆಯ ಶವಗಾರದಿಂದ ಹೊರತಂದು ವಿದ್ಯಾರ್ಥಿಗಳ ಒಕ್ಕೂಟ ಹಾಗೂ ಸಂತ್ರಸ್ತೆ ಪೋಷಕರು ಪ್ರತಿಭಟನೆಗೆ ಮುಂದಾಗಿದ್ದರು.

ಈ ವೇಳೆ ಸಂತ್ರಸ್ತೆಯ ತಂದೆ, ಹೆಣಕ್ಕೆ ಅಡ್ಡಲಾಗಿ ಬಿದ್ದಿದ್ದು, ಪೊಲೀಸ್‌ ಅಧಿಕಾರಿಯೊಬ್ಬ ಆತನ ಹಣೆಗೆ ಬೂಟುಗಾಲಿನಿಂದ ಒದ್ದಿದ್ದ.