ಆಪರೇಷನ್ ಸಿಂಧೂರ್ ಕಾರ್ಯಾಚರಣೆ ವೇಳೆ ತೇಜ್ ಪ್ರತಾಪ್ ಯಾದವ್ ದೇಶ ಸೇವೆ ಮಾಡುವುದಾಗಿ ಹೇಳಿ ತಮ್ಮ ಪೈಲಟ್ ಲೈಸೆನ್ಸ್ ಹಂಚಿಕೊಂಡಿದ್ದಕ್ಕೆ ನೆಟ್ಟಿಗರು ಟ್ರೋಲ್ ಮಾಡಿದ್ದಾರೆ.
ಭಾರತ ಪಾಕಿಸ್ತಾನ ಮಧ್ಯೆ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಮುಂದುವರೆದಿದ್ದು, ಪಾಕಿಸ್ತಾನದ ಹಲವು ಪ್ರದೇಶಗಳ ಮೇಲೆ ಮತ್ತೆ ಏಕಕಾಲಕ್ಕೆ ದಾಳಿ ನಡೆಸಿದೆ. ಈ ಮಧ್ಯೆ ಭಾರತ ಹಾಗೂ ಪಾಕಿಸ್ತಾನ ಗಡಿಯಲ್ಲಿ ಆತಂಕದ ಸ್ಥಿತಿ ನಿರ್ಮಾಣವಾಗಿದೆ. ಹೀಗಿರುವಾಗ ಬಿಹಾರದ ಆರ್‌ಜೆಡಿ ನಾಯಕ ಲಾಲು ಪ್ರಸಾದ್ ಯಾದವ್ ಪುತ್ರ ತೇಜ್ ಪ್ರತಾಪ್ ಯಾದವ್ ಅವರು ಅಗತ್ಯ ಬಂದಲ್ಲಿ ದೇಶ ಸೇವೆ ಮಾಡುವುದಾಗಿ ಹೇಳಿದ್ದಾರೆ. ಜೊತೆಗೆ ತಾವು ಪೈಲಟ್ ಲೈಸೆನ್ಸ್ ಹೊಂದಿರುವುದಾಗಿ ಅವರು ಟ್ವಿಟ್ ಮಾಡಿ ಹೇಳಿಕೊಂಡಿದ್ದಾರೆ. ಆದರೆ ಅವರ ದೇಶ ಸೇವೆಯ ಹೇಳಿಕೆಗೆ ಬದಲು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ದಾಖಲೆಗಳನ್ನು ನೋಡಿ ನೆಟ್ಟಿಗರು ಅವರನ್ನು ಟ್ರೋಲ್ ಮಾಡಿದ್ದಾರೆ. ಅವರ ಈ ಪೋಸ್ಟ 2 ಮಿಲಿಯನ್‌ಗೂ ಹೆಚ್ಚು ಜನ ವೀಕ್ಷಿಸಿದ್ದಾರೆ.
ಹಾಗಿದ್ರೆ ಅವರು ಪೋಸ್ಟ್ ಮಾಡಿದ್ದೇನು?
ಪೈಲಟ್ ತರಬೇತಿ ದೇಶಕ್ಕೆ ಉಪಯುಕ್ತವಾಗಿದ್ದರೆ, ತೇಜ್ ಪ್ರತಾಪ್ ಯಾದವ್ ಎಂಬ ನಾನು ಯಾವಾಗಲೂ ದೇಶ ಸೇವೆ ಮಾಡಲು ಸಿದ್ಧನಿದ್ದೇನೆ.
ನಿಮ್ಮ ಮಾಹಿತಿಗಾಗಿ, ನಾನು ಕೂಡ ಪೈಲಟ್ ತರಬೇತಿ ಪಡೆದಿದ್ದೇನೆ ಮತ್ತು ದೇಶಕ್ಕಾಗಿ ನನ್ನ ಪ್ರಾಣವನ್ನೇ ಕಳೆದುಕೊಂಡರೂ ಸಹ, ನಾನು ನನ್ನನ್ನು ಅದೃಷ್ಟಶಾಲಿ ಎಂದು ಪರಿಗಣಿಸುತ್ತೇನೆ ಜೈ ಹಿಂದ್ ಎಂದು ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಬರಹದ ಜೊತೆ ಅವರು ತಮ್ಮ ಫೋಟೋ ಹಾಗೂ ಪೈಲಟ್ ಲೈಸೆನ್ಸ್ ಹಾಗೂ ಕೆಲ ದಾಖಲೆಗಳನ್ನು ಪೋಸ್ಟ್ ಮಾಡಿದ್ದಾರೆ. 3 ಸಾವಿರಕ್ಕೂ ಅಧಿಕ ಮಂದಿ ಈ ಪೋಸ್ಟ್‌ಗೆ ಕಾಮೆಂಟ್ ಮಾಡಿದ್ದಾರೆ.
ನೆಟ್ಟಿಗರು ಟ್ರೋಲ್ ಮಾಡಿದ್ದೇಕೆ?
ಅವರು ಶೇರ್ ಮಾಡಿದ ದಾಖಲೆಗಳ ಫೋಟೋಗಳಲ್ಲಿ ತೇಜ್ ಪ್ರತಾಪ್ ಯಾದವ್ ಅವರನ್ನು ಫ್ಲೈಟ್ ರೇಡಿಯೋ ಟೆಲಿಫೋನ್ ಆಪರೇಟರ್ ಲೆಸೆನ್ಸ್(ರಿಸ್ಟ್ರಿಕ್ಟೆಡ್) ಎಂದು ಉಲ್ಲೇಖಿಸಲಾಗಿದೆ. ಇದು ತೇಜ್ ಪ್ರತಾಪ್ ಅವರಿಗೆ ನೀಡಲಾದ ಫ್ಲೈಟ್ ರೇಡಿಯೋ ಟೆಲಿಫೋನ್ ಆಪರೇಟರ್ ಲೈಸೆನ್ಸ್ ಈ ರೀತಿಯ ಲೈಸೆನ್ಸ್‌ನ್ನು ಸಾಮಾನ್ಯವಾಗಿ ವಾಯುಯಾನದಲ್ಲಿ ಕೆಲಸ ಮಾಡುವ ವ್ಯಕ್ತಿಗಳು ಹೊಂದಿರುತ್ತಾರೆ. ಉದಾಹರಣೆಗೆ ಪೈಲಟ್‌ಗಳು, ವಾಯು ಸಂಚಾರ ನಿಯಂತ್ರಕರು, ವಿಮಾನ ಸಂವಹನ ಅಧಿಕಾರಿಗಳು ಹೊಂದಿರುತ್ತಾರೆ. ಆದರೆ ಬಹುತೇಕರಿಗೆ ಈ ಲೈಸೆನ್ಸ್ ಬಗ್ಗೆ ಅರಿವಿಲ್ಲ. ಇದರಲ್ಲಿರುವ ಫ್ಲೈಟ್ ರೇಡಿಯೋ ಆಪರೇಟರ್ ಎಂಬುದನ್ನು ನೋಡಿದ ಜನ ತೇಜ್ ಯಾದವ್ ಕೇವಲ ರೇಡಿಯೋ ಆಪರೇಟರ್ ಎಂದು ಟ್ರೋಲ್ ಮಾಡಿದ್ದಾರೆ.
ಇದು ಪೈಲಟ್ ಲೈಸೆನ್ಸ್ ಅಲ್ಲ ರೇಡಿಯೋ ಆಪರೇಟರ್ ಲೈಸೆನ್ಸ್ ಎಂದು ಕೆಲವರು ತಮಾಷೆ ಮಾಡಿದ್ದಾರೆ. ಮತ್ತೊಬ್ಬರು ಸಹೋದರ ಈ ದಾಖಲೆಗಳಲ್ಲಿ ನಿಮ್ಮನ್ನು ರೇಡಿಯೋ ಆಪರೇಟರ್ ಎಂದು ಉಲ್ಲೇಖಿಸಲಾಗಿದೆ ಇದೇನು ಅರ್ಥವಾಗುತ್ತಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಈ ಲೈಸೆನ್ಸ್ ಅವಧಿ 2021ರಲ್ಲಿ ಮುಗಿದು ಹೋಗಿದೆ ಎಂದು ಕಾಮೆಂಟ್ ಮಾಡಿದ್ದಾರೆ. ತೇಜು ಭಯ್ಯಾ ನಿಮ್ಮ ಉತ್ಸಾಹ ಮತ್ತು ಸ್ಪಿರಿಟ್‌ಗೆ ವಂದನೆಗಳು, ಇಸ್ಲಾಮಾಬಾದ್‌ನಲ್ಲಿರುವ ಐಎಸ್‌ಐ ಪ್ರಧಾನ ಕಚೇರಿಯ ಮೇಲೆ ದಾಳಿ ನಡೆಸಲು ತೇಜು ಭಯ್ಯಾ ಅವರನ್ನು ಪರಿಗಣಿಸಬೇಕು ಎಂದು @ಐಎಎಫ್_ಎಂಸಿಸಿಗೆ ಮನವಿ ಮಾಡುತ್ತೇನೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.


