ಏಕನಾಥ್ ಶಿಂಧೆ ಹಾಗೂ 15 ಶಿವಸೇನೆ ಶಾಸಕರ ಅನರ್ಹ ಸಾಧ್ಯವಿಲ್ಲ: ಸುಪ್ರೀಂಕೋರ್ಟ್
ಉದ್ಧವ್ ಠಾಕ್ರೆ ಬಣ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ವಿಸ್ತೃತ ಪೀಠಕ್ಕೆ ವರ್ಗಾಯಿಸಿದೆ. ಈ ಹಿನ್ನೆಲೆ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಬಣಕ್ಕೆ ತಾತ್ಕಾಲಿಕ ರಿಲೀಫ್ ಸಿಕ್ಕಂತಾಗಿದೆ.
ನವದೆಹಲಿ ( ಮೇ 11, 2023): ಮಹಾರಾಷ್ಟ್ರದ ಶಿವಸೇನೆಯಲ್ಲಿ ಬಂಡಾಯ ಎದ್ದಿದ್ದ 16 ಮಂದಿ ಶಾಸಕರನ್ನು ಅನರ್ಹಗೊಳಿಸಬೇಕು ಎಂದು ಕೋರಿ ಉದ್ಧವ್ ಠಾಕ್ರೆ ಬಣ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ವಿಸ್ತೃತ ಪೀಠಕ್ಕೆ ವರ್ಗಾಯಿಸಿದೆ. ಈ ಹಿನ್ನೆಲೆ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಬಣಕ್ಕೆ ತಾತ್ಕಾಲಿಕ ರಿಲೀಫ್ ಸಿಕ್ಕಂತಾಗಿದೆ. ಇದರಿಂದ ಬಿಜೆಪಿ ನಾಯಕ ಹಾಗೂ ಡಿಸಿಎಂ ದೇವೇಂದ್ರ ಫಡ್ನವೀಸ್ ಅವರಿಗೂ ರಿಲೀಫ್ ಸಿಕ್ಕಿದೆ.
16 ಶಾಸಕರು ಅನರ್ಹಗೊಂಡರೆ ಮಹಾರಾಷ್ಟ್ರ ಸರ್ಕಾರ ಬೀಳಬಹುದು ಎನ್ನಲಾಗುತ್ತಿದ್ದರೂ, ನಮ್ಮ ಬಳಿ ಬಹುಮತ ಸಾಬೀತು ಮಾಡಲು ಶಾಸಕರಿದ್ದಾರೆ ಎಂದು ಆಡಳಿತ ಪಕ್ಷಗಳ ನಾಯಕರು ಹೇಳಲಾಗುತ್ತಿದೆ. ಶಿವಸೇನೆಯಲ್ಲಿ ಉಂಟಾದ ಬಿಕ್ಕಟ್ಟಿನ ಬಳಿಕ ಪಕ್ಷವನ್ನು ತೊರೆದು ಬಿಜೆಪಿ ಜತೆ ಕೈಜೋಡಿಸಿದ ಏಕನಾಥ ಶಿಂಧೆ ಬಣದ 16 ಶಾಸಕರನ್ನು ಅನರ್ಹ ಮಾಡಬೇಕು ಎಂದು ಠಾಕ್ರೆ ಬಣ ಕೋರಿತ್ತು. ಆದರೆ ಇದಕ್ಕೆ ಏಕನಾಥ್ ಶಿಂಧೆ ಆಕ್ಷೇಪಿಸಿದ್ದರು. ಈ ವಿವಾದ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು.
ಇದನ್ನು ಓದಿ: ಅಯೋಧ್ಯೆಯಲ್ಲಿ ಸೇನೆ, ಬಿಜೆಪಿ ಶಕ್ತಿಪ್ರದರ್ಶನ; ದ್ರೋಹಿಗಳನ್ನು ರಾಮ ಆಶೀರ್ವದಿಸಲ್ಲ: ಸಂಜಯ್ ರಾವುತ್ ಕಿಡಿ
ಇದಲ್ಲದೇ ಮಹಾರಾಷ್ಟ್ರ ಸರ್ಕಾರದಲ್ಲಿ ಉಂಟಾಗಿದ್ದ ಬಿಕ್ಕಟ್ಟಿನ ಕುರಿತು ಹಲವು ಅರ್ಜಿಗಳು ಸಲ್ಲಿಕೆಯಾಗಿದ್ದವು. ಈ ಅರ್ಜಿಗಳ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌ನ ಸಾಂವಿಧಾನಿಕ ಪೀಠ ಮಾರ್ಚ್ 16ರಂದು ತೀರ್ಪನ್ನು ಕಾಯ್ದಿರಿಸಿತ್ತು. ಇದರ ತೀರ್ಪು ಗುರುವಾರ ಪ್ರಕಟವಾಗಬೇಕಿತ್ತು, ಆದರೆ ಇದನ್ನು ಸದ್ಯ ವಿಸ್ತೃತ ಪೀಠಕ್ಕೆ ವರ್ಗಯಿಸಿದೆ. ಇನ್ನೊಂದೆಡೆ, ಉದ್ಧವ್ ಠಾಕ್ರೆ ಬಹುಪಾಲು ಶಾಸಕರ ಬೆಂಬಲವನ್ನು ಕಳೆದುಕೊಂಡಿದ್ದಾರೆ ಎಂಬ ತೀರ್ಮಾನಕ್ಕೆ ಬಂದಿರುವ ವಿಚಾರದಲ್ಲಿ ಮಹಾರಾಷ್ಟ್ರ ರಾಜ್ಯಪಾಲರು "ತಪ್ಪು" ಮಾಡಿದ್ದಾರೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯ ಪಟ್ಟಿದೆ.
ಸರ್ಕಾರ ಸೇಫ್!
ಕಳೆದ ವರ್ಷ ಜೂನ್‌ನಲ್ಲಿ ಅಂದಿನ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ಧ ಬಂಡಾಯವೆದ್ದಿದ್ದಕ್ಕಾಗಿ ಏಕನಾಥ್ ಶಿಂಧೆ ಮತ್ತು ಇತರ 15 ಶಾಸಕರನ್ನು ಅನರ್ಹಗೊಳಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಆದರೆ, ಉದ್ಧವ್ ಠಾಕ್ರೆ ಅವರ ಸರ್ಕಾರವನ್ನು ಮರುಸ್ಥಾಪಿಸುವ ವಿನಂತಿಯನ್ನು ಸಹ ಅದು ತಿರಸ್ಕರಿಸಿತು. ಏಕೆಂದರೆ ಅಸೆಂಬ್ಲಿಯಲ್ಲಿ ಬಲಾಬಲ ಪರೀಕ್ಷೆಯನ್ನು ಎದುರಿಸುವ ಬದಲು ರಾಜೀನಾಮೆ ನೀಡಲು ನಾಯಕ ಆಯ್ಕೆ ಮಾಡಿಕೊಂಡಿದದ್ದರು ಎಂದು ಸುಪ್ರೀಂಕೋರ್ಟ್ ಪಂಚಪೀಠ ಹೇಳಿದೆ. ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಸುಪ್ರೀಂ ಕೋರ್ಟ್‌ನ ಐವರು ನ್ಯಾಯಾಧೀಶರ ಪೀಠವು ಮುಖಾಮುಖಿಯಲ್ಲಿ ಎಂಟು ಅರ್ಜಿಗಳನ್ನು ಒಟ್ಟುಗೂಡಿಸಿ ಈ ನಿರ್ಧಾರವನ್ನು ನೀಡಿತು.
ಇದನ್ನೂ ಓದಿ: ಸೇನೆಯ ಹೆಸರು, ಚಿಹ್ನೆ ಖರೀದಿಸಲು 2,000 ಕೋಟಿ ರೂ. ಡೀಲ್: ಸಂಜಯ್ ರಾವತ್ ಸ್ಫೋಟಕ ಆರೋಪ
ಒಂದು ವೇಳೆ 16 ಶಾಸಕರ ಅನರ್ಹತೆಗೆ ಸುಪ್ರೀಂಕೋರ್ಟ್ ಒಪ್ಪಿಗೆ ಸೂಚಿಸಿದರೆ ಮಹಾರಾಷ್ಟ್ರದಲ್ಲಿ ಆಡಳಿತದಲ್ಲಿರುವ ಶಿಂಧೆ ಬಣ ಹಾಗೂ ಬಿಜೆಪಿ ನೇತೃತ್ವದ ಸರ್ಕಾರ ಬೀಳಲಿದೆ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ ಇದನ್ನು ನಿರಾಕರಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಚಂದ್ರಶೇಖರ್ ಬಾವನ್‌ಕುಳೆ ಹಾಗೂ ಸ್ಪೀಕರ್ ರಾಹುಲ್ ನಾರ್ವೇಕರ್, ಶಾಸಕರು ಅನರ್ಹರಾದರೂ ಸರ್ಕಾರ ಸುರಕ್ಷಿತವಾಗಿರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಬಹುಮತ ಸಾಬೀತಿಗೆ ಸೂಚಿಸಿದರೆ ನಮ್ಮ ಬಳಿ 184 ಮತಗಳಿವೆ. ಅಷ್ಟೇ ಅಲ್ಲದೇ ಮುಂದಿನ ಬಾರಿಯೂ ಇದೇ ಮೈತ್ರಿಕೂಟ ಸರ್ಕಾರ ರಚನೆ ಮಾಡುತ್ತದೆ ಎಂದು ಬಾವನ್‌ಕುಳೆ ಹೇಳಿದ್ದಾರೆ. ಇದೇ ವೇಳೆ, ಸುಪ್ರೀಂಕೋರ್ಟ್ ತೀರ್ಪು ಮೈಲಿಗಲ್ಲಿನದ್ದಾಗಲಿದೆ ಎಂದು ಶಿವಸೇನೆ (ಯುಬಿಟಿ) ವಕ್ತಾರ ಸಂಜಯ ರಾವುತ್ ಹೇಳಿದ್ದರು.
ಇದನ್ನೂ ಓದಿ: ಶಿವಸೇನೆಯ ಚಿಹ್ನೆ ಕದ್ದ ಕಳ್ಳನಿಗೆ ತಕ್ಕ ಪಾಠ ಕಲಿಸಿ; ಚುನಾವಣಾ ಆಯೋಗ ಮೋದಿ ಗುಲಾಮ: ಉದ್ಧವ್ ಠಾಕ್ರೆ ಕಿಡಿ