* ಪಕ್ಷಕ್ಕೆ ಮರಳುವ ಅನುಮಾನ ಇರುವ ಶಿಂಧೆ ಸೇರಿ 12 ಶಾಸಕರ ಅನರ್ಹತೆಗೆ ಅರ್ಜಿ* ಅಧಿಕಾರ ಉಳಿಸಿಕೊಳ್ಳಲು ಉದ್ಧವ್‌ ಬಣ ಹೆಣಗಾಟ* 24 ಗಂಟೆಯಲ್ಲಿ ವಾಪಸ್‌ ಬನ್ನಿ, ಮಾತಾಡೋಣ: ಭಿನ್ನ ಶಾಸಕರಿಗೆ ಆಹ್ವಾನ* ಅಘಾಡಿ ಮೈತ್ರಿಕೂಟದ ಕಾಂಗ್ರೆಸ್‌, ಎನ್‌ಸಿಪಿಯಿಂದ ಉದ್ಧವ್‌ಗೆ ಬೆಂಬಲ

ಮುಂಬೈ(ಜೂ.24): ಶಿವಸೇನೆ ಮುಖಂಡ ಏಕನಾಥ ಶಿಂಧೆ ಬಂಡಾಯದಿಂದ ಕಂಗೆಟ್ಟರುವ ಮಹಾರಾಷ್ಟ್ರದ ಶಿವಸೇನೆ-ಎನ್‌ಸಿಪಿ-ಕಾಂಗ್ರೆಸ್‌ ಮೈತ್ರಿಕೂಟದ ‘ಮಹಾರಾಷ್ಟ್ರ ವಿಕಾಸ ಅಘಾಡಿ’ ಸರ್ಕಾರ, ತನ್ನ ಅಸ್ತಿತ್ವ ಉಳಿಸಿಕೊಳ್ಳಲು ಗುರುವಾರ ಅಂತಿಮ ಹೆಣಗಾಟ ಆರಂಭಿಸಿದೆ.

ಒಂದು ಕಡೆ ‘ಅಘಾಡಿ ಸರ್ಕಾರದಿಂದ ಹೊರಬರಲು ನಾವು ಸಿದ್ಧರಿದ್ದೇವೆ’ ಎಂದು ಶಿವಸೇನೆ ಹೇಳಿದೆಯಾದರೂ ‘ಅಸ್ಸಾಂನಲ್ಲಿ ಬೀಡುಬಿಟ್ಟಿರುವ ಶಾಸಕರು 24 ತಾಸಿನಲ್ಲಿ ಮಹಾರಾಷ್ಟ್ರಕ್ಕೆ ಮರಳಿ, ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಜತೆ ಮಾತುಕತೆ ನಡೆಸಬೇಕು’ ಎಂಬ ಕೋರಿದೆ. ಈ ಮೂಲಕ ಷರತ್ತು ವಿಧಿಸಿದರೂ ಮಾತುಕತೆಯ ಹಾದಿಯನ್ನು ತೆರೆದಿದೆ. ಆದರೆ ಪಕ್ಷಕ್ಕೆ ಕೆಲವು ಶಾಸಕರು ಮರಳುವುದು ಅನುಮಾನವಾಗಿರುವ ಹಿನ್ನೆಲೆಯಲ್ಲಿ ಏಕನಾಥ್‌ ಶಿಂಧೆ ಸೇರಿದಂತೆ 12 ಶಾಸಕರ ಅನರ್ಹತೆಗೆ ವಿಧಾನಸಭಾ ಉಪಸಭಾಪತಿಗೆ ಅರ್ಜಿಯನ್ನೂ ಶಿವಸೇನೆ ಸಲ್ಲಿಸಿದೆ. ಉಳಿದ ಕೆಲವರ ಅನರ್ಹತೆಗೆ ಶೀಘ್ರದಲ್ಲೇ ಅರ್ಜಿ ಸಲ್ಲಿಸುವ ಸುಳಿವು ನೀಡಿದೆ.

ಇನ್ನೊಂದು ಕಡೆ ಎನ್‌ಸಿಪಿ ಹಾಗೂ ಕಾಂಗ್ರೆಸ್‌ ಕೂಡ ಇದರ ಬೆನ್ನಲ್ಲೇ ಸಭೆ ನಡೆಸಿ ಸರ್ಕಾರ ರಕ್ಷಣೆಗೆ ಧುಮುಕಿವೆ. ‘ಉದ್ಧವ್‌ ಠಾಕ್ರೆ ಅವರಿಗೆ ನಾವು ಬೆಂಬಲ ನೀಡುತ್ತೇವೆ. ಬಹುಮತವನ್ನು ವಿಧಾನಸಭೆಯಲ್ಲಿ ಸಾಬೀತುಪಡಿಸಲು ಸಿದ್ಧರಿದ್ದೇವೆ’ ಎಂದು ಎನ್‌ಸಿಪಿ ಹೇಳಿದೆ. ಕಾಂಗ್ರೆಸ್‌ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ‘ನಾವು ಸರ್ಕಾರದಲ್ಲಿ ಭಾಗವಹಿಸದೇ ಬಾಹ್ಯ ಬೆಂಬಲ ನೀಡಲೂ ಸಿದ್ಧ’ ಎಂದು ಘೋಷಿಸಿದೆ. ತನ್ಮೂಲಕ ಒಂದಿಲ್ಲೊಂದು ಮಾರ್ಗದಲ್ಲಿ ಅಸ್ತಿತ್ವ ಉಳಿಸಿಕೊಳ್ಳಲು ಮೂರು ಪಕ್ಷಗಳು ಮುಂದಾಗಿವೆ.

ಚರ್ಚೆಗೆ ಬನ್ನಿ- ಶಿವಸೇನೆ:

ಅಘಾಡಿ ಮೈತ್ರಿ ಕಡಿದುಕೊಳ್ಳಬೇಕೆಂಬ ಅತೃಪ್ತರ ಬೇಡಿಕೆ ಕುರಿತು ಬೆಳಗ್ಗೆಯಷ್ಟೇ ಪ್ರತಿಕ್ರಿಯಿಸಿದ್ದ ಶಿವಸೇನೆ ನಾಯಕ ಸಂಜಯ್‌ ರಾವುತ್‌, ‘ಬಂಡುಕೋರರು ಬೇಕಿದ್ದರೆ ಬಿಜೆಪಿ ಸೇರಲಿ. ಶಿವಸೇನೆ ಯಾವತ್ತಿಗೂ ಪಕ್ಷವಾಗಿ ಉಳಿಯಲಿದೆ. ಬಂಡುಕೋರರಿಗೆ ಧೈರ್ಯವಿದ್ದರೆ ವಿಶ್ವಾಸಮತ ಎದುರಿಸಲಿ. ಅತೃಪ್ತ ಶಾಸಕರಿಗೆ ಮಹಾರಾಷ್ಟ್ರಕ್ಕೆ ಬಂದು ಓಡಾಡಲೂ ಕಷ್ಟವಾಗುತ್ತಿದೆ. ಪಕ್ಷ ಹಾಗೂ ರಾಜ್ಯ ಉದ್ಧವ್‌ ಠಾಕ್ರೆ ಜತೆಗಿದೆ. ಯಾರೋ ಒಂದಿಷ್ಟುಶಾಸಕರು ಹೊರಹೋದರು ಎಂದಾಕ್ಷಣ ಪಕ್ಷ ಎಲ್ಲೂ ಹೋಗುವುದಿಲ್ಲ’ ಎಂದು ಕೆಣಕಿದ್ದರು.

ಇದಾದ ಕೆಲವೇ ತಾಸಿನಲ್ಲಿ ಅವರ ಧ್ವನಿ ಮೆತ್ತಗಾಯಿತು. ‘ನಿಜವಾದ ಶಿವಸೈನಿಕರು ಪಕ್ಷ ತೊರೆಯುವುದಿಲ್ಲ. ಅತೃಪ್ತ ಶಾಸಕರ ಬೇಡಿಕೆ ಪರಿಶೀಲಿಸಲು ಪಕ್ಷ ಸಿದ್ಧವಿದೆ. ಈ ಎಲ್ಲ ಶಾಸಕರು ಅಘಾಡಿ ಸರ್ಕಾರದಿಂದ ವಾಪಸ್‌ ಬರಬೇಕು ಎಂಬ ಭಾವನೆ ಹೊಂದಿದ್ದರೆ 24 ತಾಸಿನಲ್ಲಿ ಮುಂಬೈಗೆ ಬಂದು ಉದ್ಧವ್‌ ಠಾಕ್ರೆ ಅವರ ಜತೆ ಚರ್ಚೆ ಮಾಡಬೇಕು. ಎಲ್ಲ ಬೇಡಿಕೆಗಳನ್ನೂ ಧನಾತ್ಮಕವಾಗಿ ಪರಿಶೀಲಿಸಲಾಗುವುದು. ಆದರೆ ಟ್ವೀಟರ್‌, ವಾಟ್ಸ್‌ಆ್ಯಪ್‌ನಲ್ಲಿ ಪತ್ರ ಬರೆಯಬೇಡಿ’ ಎಂದು ಮನವಿ ಮಾಡಿದರು. ಆದರೆ ಇದೇ ವೇಳೆ, ‘ಅಘಾಡಿ ಸರ್ಕಾರದಿಂದ ಹೊರಬರಲೂ ನಾವು ಸಿದ್ಧರಿದ್ದೇವೆ. ಮಾತುಕತೆಗೆ ಬನ್ನಿ’ ಎಂಬ ಹೇಳಿಕೆಯನ್ನೂ ನೀಡಿದರು.

ಉದ್ಧವ್‌ಗೇ ನಮ್ಮ ಬೆಂಬಲ-ಎನ್‌ಸಿಪಿ:

‘ಉದ್ಧವ್‌ ಸರ್ಕಾರಕ್ಕೆ ನಮ್ಮ ಬೆಂಬಲ ಮುಂದುವರಿಯಲಿದೆ. ಆದರೆ ಬರೀ ಫೋಟೋ, ವಿಡಿಯೋ ಬಿಡುಗಡೆ ಮಾಡಿದರೆ ಸಾಲದು. ವಿಧಾನಸಭೆಯಲ್ಲೇ ಬಹುಮತ ಸಾಬೀತಾಗಬೇಕು. ಸರ್ಕಾರ ಬಹುಮತ ಸಾಬೀತು ಮಾಡಲಿದೆ’ ಎಂದು ಎನ್‌ಸಿಪಿ ನಾಯಕ ಶರದ್‌ ಪವಾರ್‌ ಹೇಳಿದ್ದಾರೆ.

ಎನ್‌ಸಿಪಿ ಸಭೆ ಬಳಿಕ ಮಾತನಾಡಿದ ಅವರು, ‘ಬಂಡಾಯ ಶಾಸಕರನ್ನು ಮೊದಲು ಗುಜರಾತ್‌ಗೆ, ನಂತರ ಅಸ್ಸಾಂಗೆ ಒಯ್ಯಲಾಗಿದೆ. ಇದರ ಹಿಂದೆ ಯಾರಿದ್ದಾರೆ ಎಂದು ಗೊತ್ತು. ಏಕನಾಥ ಶಿಂಧೆ ಬಣ ವಿಧಾನಸಭೆಗೆ ಬರಬೇಕು. ಅವರು ಬಂದರæ ಪರಿಸ್ಥಿತಿಯೇ ಬದಲಾಗಲಿದೆ’ ಎಂದರು. ಈ ಮೂಲಕ ಶಾಸಕರ ಬಂಡಾಯದ ಹಿಂದೆ ಬಿಜೆಪಿ ಒತ್ತಡವಿದೆ. ವಾಸ್ತವಿಕವಾಗಿ ಶಾಸಕರಿಗೆ ಬಂಡೇಳಲು ಮನಸ್ಸಿಲ್ಲ ಎಂದು ಪರೋಕ್ಷವಾಗಿ ನುಡಿದರು.

ಬಾಹ್ಯ ಬೆಂಬಲಕ್ಕೂ ಸಿದ್ಧ:

‘ಉದ್ಧವ್‌ ಠಾಕ್ರೆ ಅವರೇ ಮುಂದುವರಿಯಬೇಕು ಎಂಬುದು ನಮ್ಮ ಇಚ್ಛೆ. ಇದಕ್ಕಾಗಿ ಸರ್ಕಾರದಿಂದ ಹೊರಹೋಗಿ ಬಾಹ್ಯಬೆಂಬಲ ನೀಡಲೂ ನಾವು ಸಿದ್ಧರಿದ್ದೇವೆ’ ಎಂದು ಮಹಾರಾಷ್ಟ್ರ ಕಾಂಗ್ರೆಸ್‌ ಅಧ್ಯಕ್ಷ ನಾನಾ ಪಟೋಲೆ ಹೇಳಿದ್ದಾರೆ. ಈ ಮೂಲಕ ತಮ್ಮ ವಿರುದ್ಧ ಹರಿಹಾಯುತ್ತಿರುವ ಬಂಡಾಯ ಶಿವಸೇನಾ ಶಾಸಕರ ಸಿಟ್ಟು ತಣಿಸುವ ಯತ್ನ ಮಾಡಿದ್ದಾರೆ.

ಕಾಂಗ್ರೆಸ್‌ನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಕೂಡ ಈ ವಿದ್ಯಮಾನದ ಹಿಂದೆ ಬಿಜೆಪಿ ಕೈವಾಡವಿದೆ ಎಂದು ಹರಿಹಾಯ್ದಿದ್ದಾರೆ.

ಶಿವಸೇನೆಯ 56 ಶಾಸಕರ ಪೈಕಿ 40ಕ್ಕೂ ಹೆಚ್ಚು ಮಂದಿ ಬಂಡೆದ್ದಿದ್ದು, ಅವರೆಲ್ಲಾ ಅಸ್ಸಾಂನ ಗುವಾಹಟಿಯಲ್ಲಿ ಬೀಡುಬಿಟ್ಟಿದ್ದಾರೆ. ಅವರ ಜತೆ 9 ಪಕ್ಷೇತರರೂ ಇದ್ದಾರೆ. ಬಂಡುಕೋರರ ಮನವೊಲಿಸಲು ರಾಜೀನಾಮೆ ಭರವಸೆ ನೀಡಿರುವ ಉದ್ಧವ್‌, ಮುಖ್ಯಮಂತ್ರಿಗಳ ಅಧಿಕೃತ ನಿವಾಸವನ್ನೂ ಖಾಲಿ ಮಾಡಿದ್ದಾರೆ. ಆದರೂ ಅತೃಪ್ತರು ಮಣಿದಿಲ್ಲ.