ಕೊರೋನಾ ವಿರುದ್ಧ ಹೋರಾಟಕ್ಕೆ ಟಾಟಾ ನೆರವು; ಚಿಕಿತ್ಸೆಗೆ 300 ಟನ್ ಆಕ್ಸಿಜನ್ ಪೂರೈಕೆ!
ಭಾರತಕ್ಕೆ ಕೊರೋನಾ ವಕ್ಕರಿಸಿದಾಗ ಸಂಸ್ಥೆಗಳು, ಸೆಲೆಬ್ರೆಟಿಗಳು ಸೇರಿದಂತೆ ದೇಶದ ಹಲವರು ಪಿಎಂ ಕೇರ್ ಫಂಡ್‌ಗೆ ನೆರವು ನೀಡಿದ್ದರು. ಇದರಲ್ಲಿ ಟಾಟಾ ಸಮೂಹ ಸಂಸ್ಥೆ ಒಟ್ಟು 1,500 ಕೋಟಿ ರೂಪಾಯಿ ನೀಡಿತ್ತು. ಇದು ಅತ್ಯಂತ ಗರಿಷ್ಠ ಕೂಡ ಆಗಿದೆ. ಇದೀಗ 2ನೇ ಅಲೆ ಕೊರೋನಾಗೆ ಭಾರತ ತತ್ತರಿಸಿದೆ. ಈ ವೇಳೆಯೂ ಸಂಕಷ್ಟದಲ್ಲಿರುವಾಗ ನೆರವು ನೀಡುವ ಟಾಟಾದ ಕಳಕಳಿ ಮುಂದುವರಿದಿದೆ. ಈ ಬಾರಿ ಎಲ್ಲೆಂದರಲ್ಲಿ ಕೇಳಿಬರುುತ್ತಿರುವ ಆಕ್ಸಿಜನ್ ಕೊರತೆ ನೀಗಿಸಲು ಟಾಟಾ ಮಹತ್ವದ ಹೆಜ್ಜೆ ಇಟ್ಟಿದೆ.
ನವದೆಹಲಿ(ಏ.20): ಕೊರೊನಾ ಸೋಂಕು ದಿನದಿಂದ ಏರಿಕೆಯಾಗುತ್ತಲೇ ಇದೆ. ದಿನ ಕಳೆದಂತೆ ಕೊರೊನಾ ಸೋಂಕಿಗೆ ಸಾವಿರಾರು ಜನ ಬಲಿಯಾಗುತ್ತಿದ್ದಾರೆ. ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾದಂತೆ ಆಸ್ಪತ್ರೆಗಳು ತುಂಬಿ ತುಳುಕುತ್ತಿವೆ. ಜೊತೆಗೆ ಸೋಂಕಿತರ ಚಿಕಿತ್ಸೆಗೆ ಬೇಕಾಗಿರುವ ಆಕ್ಸಿಜನ್ ಕೂಡ ಕೊರತೆಯಾಗುತ್ತಿದೆ. ಮೊದಲ ಅಲೆಯಲ್ಲಿ ಟಾಟಾ ಸಮೂಹ ಒಟ್ಟು 1,500 ಕೋಟಿ ರೂಪಾಯಿ ನೆರವು ನೀಡಿದ್ದರೆ, ಇದೀಗ ಚಿಕಿತ್ಸೆಗೆ ಪ್ರತಿದಿನ 300 ಟನ್ ಆಕ್ಸಿಜನ್ ಪೂರೈಕೆ ಜವಾಬ್ದಾರಿ ಹೊತ್ತುಕೊಂಡಿದೆ.
2ನೇ ಅಲೆಯಲ್ಲಿ ವೆಂಟಿಲೇಟರ್‌ಗಿಂತ ಆಕ್ಸಿಜನ್ ಬೇಡಿಕೆ ಅಧಿಕ!.
ಈ ನಿಟ್ಟಿನಲ್ಲಿ ದೇಶದ 100 ಆಸ್ಪತ್ರೆಗಳಲ್ಲಿ ಆಕ್ಸಿಜನ್ ಪ್ಲಾಂಟ್ಗಳನ್ನು ನಿರ್ಮಾಣ ಮಾಡುವುದಾಗಿ ಕೇಂದ್ರ ಸರಕಾರ ಹೇಳಿದೆ. ದೇಶದ 12 ರಾಜ್ಯಗಳಲ್ಲಿ ಆಕ್ಸಿಜನ್ ಕೊರತೆ ಉಂಟಾಗಿದ್ದು ವಿದೇಶಗಳಿಂದ 50 ಸಾವಿರ ಮೆಟ್ರಿಕ್ ಟನ್ ಆಕ್ಸಿಜನ್ ಆಮದು ಮಾಡಿಕೊಳ್ಳಲು ಸರ್ಕಾರ ಮುಂದಾಗಿದೆ. ಈ ಮಧ್ಯೆ ರತನ್ ಟಾಟಾ ಮಾಲೀಕತ್ವದ ಟಾಟಾ ಸ್ಟೀಲ್ ಸಂಸ್ಥೆ ಕೊರೊನಾ ಸೋಂಕಿತರ ಚಿಕಿತ್ಸೆಗಾಗಿ ತನ್ನ ಸ್ಟೀಲ್ ಘಟಕಗಳಿಂದ ದಿನಕ್ಕೆ ಸುಮಾರು 300 ಟನ್ ಆಕ್ಸಿಜನ್ ಪೂರೈಕೆ ಮಾಡುತ್ತಿದೆ.
ಕೊರೋನಾ ಕಾರಣ ಆಕ್ಸಿಜನ್‌ಗೆ ಹೆಚ್ಚಿದ ಬೇಡಿಕೆ; ಕೈಗಾರಿಕೆಗೆ ಆಮ್ಲಜನಕ ಪೂರೈಕೆ ನಿಷೇಧಿಸಿದ ಸರ್ಕಾರ!
ಟಾಟಾ ಸ್ಟೀಲ್ ಪ್ರತಿ ದಿನ 200ರಿಂದ 300 ಟನ್ ಆಕ್ಸಿಜನ್ ಪೂರೈಕೆ ಮಾಡುತ್ತಿರುವುದಾಗಿ ಮಾಹಿತಿ ನೀಡಿದ್ದಾರೆ. ಜಾರ್ಖಂಡ್, ಉತ್ತರಪ್ರದೇಶ ಬಿಹಾರ ಮತ್ತು ಒರಿಸ್ಸಾ ರಾಜ್ಯಗಳಿಗೆ ಆಕ್ಸಿಜನ್ ಪೂರೈಕೆಯಾಗುಯತ್ತಿದೆ. ಜೊತೆಗೆ ಕೇಂದ್ರದ ಸಹಾಯದೊಂದಿಗೆ ಪಶ್ಷಿಮ ಬಂಗಾಳಕ್ಕೂ ಆಕ್ಸಿಜನ್ ಪೂರೈಕೆಯಾಗುತ್ತಿದೆ ಎಂದು ಟಾಟಾ ಸ್ಟೀಲ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಟಿ.ವಿ ನರೇಂದ್ರರನ್ ಹೇಳಿದ್ದಾರೆ.
ಈ ಬಗ್ಗೆ ಟಾಟಾ ಸ್ಟಿಲ್ ತನ್ನ ಅಧಿಕೃತ ಖಾತೆಯಿಂದ ಟ್ವೀಟ್ ಮಾಡಿದೆ. ʼಕೊರೊನಾ ರೋಗಿಗಳ ಚಿಕಿತ್ಸೆಯಲ್ಲಿ ಆಕ್ಸಿಜನ್ ಅತ್ಯಂತ ಮುಖ್ಯ ಪಾತ್ರವಹಿಸುತ್ತದೆ. ಹಾಗಾಗಿ ದೇಶದಲ್ಲಿ ನಿರ್ಮಾಣವಾಗಿರುವ ತುರ್ತು ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಬೇರೆ ಬೇರೆ ರಾಜ್ಯ ಸರ್ಕಾರಗಳಿಗೆ ಮತ್ತು ಆಸ್ಪತ್ರೆಗಳಿಗೆ ದಿನಕ್ಕೆ ಸುಮಾರು 200ರಿಂದ 300 ಟನ್ ಆಕ್ಸಿಜನ್ ಪೂರೈಕೆ ಮಾಡುತ್ತಿದ್ದೇವೆ. ಕೊರೊನಾ ವಿರುದ್ಧದ ಹೋರಾಟದಲ್ಲಿ ನಾವು ನಿಮ್ಮ ಜೊತೆಗಿದ್ದೇವೆ ಮತ್ತು ಈ ಹೋರಾಟದಲ್ಲಿ ನಾವು ಗೆಲುವು ಸಾಧಿಸುತ್ತೇವೆʼ ಎಂದು ಟಾಟಾ ಸ್ಟೀಲ್ಸ್ ಹೇಳಿದೆ.
ಟಾಟಾ ಸಂಸ್ಥೆಯ ಜೊತೆಗೆ ಇನ್ನೂ ಹಲವಾರು ಸಂಸ್ಥೆಗಳು ಕೂಡ ಆಕ್ಸಿಜನ್ ಪೂರೈಕೆ ಮಾಡುತ್ತಿವೆ. ಭಾರತದ ಅತಿ ದೊಡ್ಡ ಸ್ಟೀಲ್ ಉತ್ಪಾದಿಸುವ ಸ್ಟೀಲ್ ಆಥೋರಿಟಿ ಆಫ ಇಂಡಿಯಾ ( SAIL) ಕೂಡ ಕೊರೊನಾ ಚಿಕಿತ್ಸೆಗಾಗಿ 33,300 ಟನ್ ಆಕ್ಸಿಜನ್ ಪೂರೈಕೆ ಮಾಡಿರುವುದಾಗಿ ಟ್ವೀಟರ್ನಲ್ಲಿ ತಿಳಿಸಿದೆ. ಆರ್ಸೆಲೋರಮಿತ್ತಲ್ ನಿಪ್ಪೋನ್(AMNS India) ಕೂಡ ಗುಜರಾತ್ನಲ್ಲಿ ಕೊರೊನಾ ಚಿಕಿತ್ಸೆಗಾಗಿ 200 ಟನ್ ಆಕ್ಸಿಜನ್ ಪೂರೈಕೆ ಮಾಡುತ್ತಿರುವುದಾಗಿ ತಿಳಿಸಿದೆ. ಈ ನಿಟ್ಟಿನಲ್ಲಿ ದೇಶದಲ್ಲಿ ಲಭ್ಯವಿರುವ ಆಕ್ಸಿಜನ್ ಬಗ್ಗೆ ಮಾಹಿತಿ ಪಡೆದುಕೊಳ್ಳಲು ಕೇಂದ್ರದ ಉಕ್ಕು ಸಚಿವ ಧರ್ಮೇಂದ್ರ ಪ್ರಧಾನ್ ಹಿರಿಯ ಅಧಿಕಾರಿಗಳೊಂದಿಗೆ ಸಭೆ ಕೂಡ ನಡೆಸಿದ್ದಾರೆ. ಉಕ್ಕು ಸಚಿವಾಲಯದ ಪ್ರಕಾರ ಸರಕಾರಿ ಮತ್ತು ಖಾಸಗಿ ಸೇರಿ ಸ್ಟೀಲ್ ಉತ್ಪಾದಿಸುವ ಘಟಕಗಳಲ್ಲಿರುವ ಒಟ್ಟು 28 ಆಕ್ಸಿಜನ್ ಘಟಕಗಳು ದಿನನಿತ್ಯ 1,500 ಟನ್ ಚಿಕಿತ್ಸೆಗೆ ಬಳಸಬಹುದಾದ ಆಕ್ಸಿಜನ್ ಪೂರೈಕೆ ಮಾಡುತ್ತಿವೆ. ಇತ್ತಿಚಿಗೆ ಮುಕೇಶ್ ಅಂಬಾನಿ ಮಾಲೀಕತ್ವದ ರೀಲಯನ್ಸ ಇಂಡಸ್ಟ್ರೀಸ್ ಲಿಮಿಟೆಡ್ನಿಂದ ಕೂಡ ಮಹಾರಾಷ್ಟ್ರಕ್ಕೆ 100 ಟನ್ ಆಕ್ಸಿಜನ್ ಪೂರೈಕೆ ಮಾಡಲಾಗುವುದು ಎಂದು ಸಂಸ್ಥೆ ತಿಳಿಸಿತ್ತು.
ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಆಕ್ಸಿಜನ್ ಪೂರೈಕೆ ಕಡಿಮೆಯಾಗದಂತೆ ನೋಡಿಕೊಳ್ಳುವುದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಹೊಣೆಯಾಗಿದೆ. ಈ ಪರಿಸ್ಥಿತಿಯಲ್ಲಿ ಆಕ್ಸಿಜನ್ ಪೂರೈಕೆಯಲ್ಲಿ ಖಾಸಗಿ ಕಂಪನಿಗಳು ಕೂಡ ಸರಕಾರದ ಜೊತೆ ಕೈ ಜೋಡಿಸಿದರೆ ಸರಕಾರದ ಮೇಲಿನ ಭಾರ ಸ್ವಲ್ಪ ಕಡಿಮೆಯಾಗುವ ಸಾಧ್ಯತೆಗಳಿವೆ. ಭಾರತದಲ್ಲಿ ನಿನ್ನೆ(ಏಪ್ರಿಲ್ 19) ಎರಡುವರೆ ಲಕ್ಷಕ್ಕೂ ಅಧಿಕ ಕೊರೊನಾ ಪ್ರಕರಣಗಳು ದಾಖಲಾಗಿದ್ದು 1,757 ಜನ ಕೊರೊನಾಗೆ ಬಲಿಯಾಗಿದ್ದಾರೆ.