2ನೇ ಅಲೆಯಲ್ಲಿ ವೆಂಟಿಲೇಟರ್‌ಗಿಂತ ಆಕ್ಸಿಜನ್ ಬೇಡಿಕೆ ಅಧಿಕ!
2ನೇ ಅಲೆಯಲ್ಲಿ ವೆಂಟಿಲೇಟರ್‌ಗಿಂತ ಆಕ್ಸಿಜನ್ ಬೇಡಿಕೆ ಅಧಿಕ: ಸರ್ಕಾರ| ಮೊದಲ ಅಲೆಯಲ್ಲಿ ವೆಂಟಿಲೇಟರ್ ಬೇಕಿತ್ತು| ಈಗ ಆಕ್ಸಿಜನ್ ಬೇಕು| ಎರಡೂ ಅಲೆಯಲ್ಲಿ 40 ದಾಟಿದವರಿಗೇ ಹೆಚ್ಚು ಸೋಂಕು| 2ನೇ ಅಲೆಯಲ್ಲಿ ಲಕ್ಷಣರಹಿತ ಸೋಂಕಿತರು ಹೆಚ್ಚು: ಕೇಂದ್ರ ಸರ್ಕಾರ
ನವದೆಹಲಿ(ಏ.20): ಕೊರೋನಾ ಮೊದಲ ಹಾಗೂ ಎರಡನೇ ಅಲೆಯಲ್ಲಿ 40 ವರ್ಷ ಮೇಲ್ಪಟ್ಟವರು ಮತ್ತು ವಯೋವೃದ್ಧರೇ ಹೆಚ್ಚಾಗಿ ಸೋಂಕಿಗೆ ತುತ್ತಾಗುತ್ತಿದ್ದಾರೆ. ಒಟ್ಟು ಸೋಂಕಿತರಲ್ಲಿ ಈ ವರ್ಗದವರ ಪಾಲು ಶೇ.70ಕ್ಕಿಂತ ಅಧಿಕವಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಇದೇ ವೇಳೆ, ಆಸ್ಪತ್ರೆಗೆ ದಾಖಲಾಗಿ ಮರಣ ಹೊಂದುವ ರೋಗಿಗಳಲ್ಲಿ ಮೊದಲ ಅಲೆಗೂ, ಎರಡನೇ ಅಲೆಗೂ ಯಾವುದೇ ವ್ಯತ್ಯಾಸ ಕಂಡುಬರುತ್ತಿಲ್ಲ. ಆದರೆ ಮೊದಲ ಅಲೆಯಲ್ಲಿ ವೆಂಟಿಲೇಟರ್‌ಗೆ ಹೆಚ್ಚು ಬೇಡಿಕೆ ಇತ್ತು. ಎರಡನೇ ಅಲೆಯಲ್ಲಿ ಆಮ್ಲಜನಕಕ್ಕೆ ಬೇಡಿಕೆ ಅಧಿಕವಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಮಹಾನಿರ್ದೇಶಕ ಬಲರಾಮ್ ಭಾರ್ಗವ ಅವರು ವಿವರಿಸಿದ್ದಾರೆ.
ಮೊದಲ ಅಲೆಯಲ್ಲಿ ಗಂಟಲು ಬೇನೆ, ಒಣ ಕೆಮ್ಮು, ಕೀಲು ನೋವು, ತಲೆನೋವು ಹಾಗೂ ಇನ್ನಿತರೆ ಲಕ್ಷಣಗಳು ಕಂಡುಬಂದಿದ್ದವು. ಆದರೆ ಎರಡನೇ ಅಲೆಯಲ್ಲಿ ಉಸಿರಾಟ ಸಮಸ್ಯೆ ಹೆಚ್ಚಾಗಿದೆ. ಮೊದಲ ಅಲೆಯಲ್ಲಿ ಶೇ.41.5ರಷ್ಟುರೋಗಿಗಳಿಗೆ ಆಮ್ಲಜನಕ ಸಾಕಾಗಿತ್ತು. ಆದರೆ ಈಗ ಶೇ.54.5ರಷ್ಟುರೋಗಿಗಳಿಗೆ ಆಮ್ಲಜನಕ ಬೇಕಾಗಿದೆ. ಯುವ ರೋಗಿಗಳ ಸಂಖ್ಯೆಯಲ್ಲಿ ಅತ್ಯಲ್ಪ ಏರಿಕೆಯಾಗಿದೆ ಎಂದು 2ನೇ ಅಲೆಯಲ್ಲಿ ಸೋಂಕಿತರಾದ 1885 ಮಂದಿ ಹಾಗೂ ಮೊದಲ ಅಲೆಯ 7600 ರೋಗಿಗಳ ಬಗ್ಗೆ ನಡೆದ ಅಧ್ಯಯನದ ಆಧಾರದಲ್ಲಿ ತಿಳಿಸಿದ್ದಾರೆ.
ಮೊದಲ ಅಲೆಯಲ್ಲಿ ಒಟ್ಟು ಸೋಂಕಿತರಲ್ಲಿ 30ರೊಳಗಿನವರು ಶೇ.31ರಷ್ಟಿದ್ದರು. ಆದರೆ ಅದು ಈಗ ಶೇ.32ಕ್ಕೆ ಏರಿಕೆಯಾಗಿದೆ. ಭಾರಿ ವ್ಯತ್ಯಾಸವೇನೂ ಕಂಡುಬಂದಿಲ್ಲ ಎಂದು ನೀತಿ ಆಯೋಗದ ಸದಸ್ಯ ವಿ.ಕೆ. ಪೌಲ್ ತಿಳಿಸಿದ್ದಾರೆ.