ಏರ್ ಇಂಡಿಯಾ ವಿಮಾನ ದುರಂತ ಭಾರತದ ಇತಿಹಾಸದಲ್ಲೇ ಅತೀ ದೊಡ್ಡ ದುರಂತವಾಗಿದೆ. ಮಡಿದ ಕುಟುಂಬಸ್ಥರ ಕಣ್ಣೀರು ನಿಲ್ಲುತ್ತಿಲ್ಲ. ಇದರ ನಡುವೆ ಏರ್ ಇಂಡಿಯಾ ಮಾಲೀಕತ್ವದ ಟಾಟಾ ಸನ್ಸ್ ಚೇರ್ಮೆನ್ ಮಹತ್ವದ ಭರವಸೆ ನೀಡಿದ್ದಾರೆ. 

ನವದೆಹಲಿ(ಜೂ.20) ಏರ್ ಇಂಡಿಯಾ ವಿಮಾನ ಅಪಘಾತದಲ್ಲಿ ಮನೆಮಂದಿಯನ್ನು ಕಳೆದುಕೊಂಡ ಕುಟುಂಬಗಳ ಜೊತೆ ಟಾಟಾ ಗ್ರೂಪ್ ಇರಲಿದೆ ಎಂದು ಟಾಟಾ ಸನ್ಸ್ ಚೇರ್ಮನ್ ಎನ್ ಚಂದ್ರಶೇಖರನ್ ಹೇಳಿದ್ದಾರೆ. ಅಹಮದಾಬಾದ್‌ನಲ್ಲಿ ಜೂನ್ 12 ರಂದು 275 ಜೀವಗಳನ್ನು ಬಲಿತೆಗೆದುಕೊಂಡ ಏರ್ ಇಂಡಿಯಾ ಫ್ಲೈಟ್ ಎಐ171 ದುರಂತಕ್ಕೆ ಸಂಬಂಧಿಸಿದಂತೆ ಅವರು ಇದೇ ಮೊದಲ ಬಾರಿಗೆ ಸಾರ್ವಜನಿಕ ಪ್ರತಿಕ್ರಿಯೆ ನೀಡಿದ್ದಾರೆ. ಇದೇ ಸಂದರ್ಭದಲ್ಲಿ ಅವರು ವಿಮಾನಕ್ಕೆ ಸಂಬಂಧಿಸಿದ ಸಮಗ್ರ ಸುರಕ್ಷತಾ ಕ್ರಮಗಳನ್ನು ಬಹಿರಂಗಪಡಿಸಿದ್ದಾರೆ.

ಖಾಸಗಿ ವಾಹಿನಿಯೊಂದರಲ್ಲಿ ಮಾತನಾಡಿರುವ ಚಂದ್ರಶೇಖರನ್ , "ದುರಂತಕ್ಕೆ ಒಳಗಾದ ಬೋಯಿಂಗ್ 787-8 ಡ್ರೀಮ್‌ಲೈನರ್ ವಿಮಾನವು ಉತ್ತಮ ನಿರ್ವಹಣೆ ಹೊಂದಿರುವ ದಾಖಲೆ ಹೊಂದಿತ್ತು. ಏರ್ ಇಂಡಿಯಾದ ಅತ್ಯಂತ ಅನುಭವಿ ಪೈಲಟ್‌ಗಳಲ್ಲೊಬ್ಬರು ಈ ವಿಮಾನವನ್ನು ನಿಯಂತ್ರಿಸುತ್ತಿದ್ದರು. 2023ರ ಜೂನ್ ನಲ್ಲಿ ಈ ವಿಮಾನದ ಪ್ರಮುಖ ತಪಾಸಣೆ ನಡೆದಿತ್ತು, ಮುಂದಿನ ತಪಾಸಣೆ 2025ರ ಡಿಸೆಂಬರ್ ನಲ್ಲಿ ನಿಗದಿಯಾಗಿತ್ತು. ಇದರ ಬಲಗಡೆಯ ಎಂಜಿನ್ ಅನ್ನು 2025ರ ಮಾರ್ಚ್ ನಲ್ಲಿ ನಿರ್ವಹಣೆ ಮಾಡಲಾಗಿತ್ತು. ಎಡಗಡೆಯ ಎಂಜಿನ್ 2025ರ ಏಪ್ರಿಲ್ ನಲ್ಲಿ ತಪಾಸಣೆಗೆ ಒಳಪಟ್ಟಿತ್ತು. ಈ ಕುರಿತು ಅವರು “ವಿಮಾನ ಮತ್ತು ಎಂಜಿನ್‌ಗಳೆರಡನ್ನೂ ನಿಯಮಿತವಾಗಿ ಮೇಲ್ವಿಚಾರಣೆ ಮಾಡಲಾಗುತ್ತಿತ್ತು. ಈ ವಿಮಾನವು ಈ ಮೊದಲು ಯಾವುದೇ ಸಮಸ್ಯೆಗಳನ್ನು ಹೊಂದಿರಲಿಲ್ಲ ಎಂದಿದ್ದಾರೆ.

ಏರ್ ಇಂಡಿಯಾ ಸಿಇಓ ಮತ್ತು ಎಂಡಿ ಕ್ಯಾಂಪ್‌ಬೆಲ್ ವಿಲ್ಸನ್ ಅವರು ಗ್ರಾಹಕರಿಗೆ ಕಳುಹಿಸಿರುವ ಸಂದೇಶದಲ್ಲಿ ವಿಮಾನ ಸಿಬ್ಬಂದಿ ಕುರಿತು ಹೆಚ್ಚಿನ ವಿವರಗಳನ್ನು ನೀಡಿದ್ದಾರೆ. ಈ ಕುರಿತು ಅವರು, “ವಿಮಾನ ಸಿಬ್ಬಂದಿಯ ತಂಡದ ನೇತೃತ್ವವನ್ನು ಕ್ಯಾಪ್ಟನ್ ಸುಮೀತ್ ಸಭರ್ವಾಲ್ ವಹಿಸಿಕೊಂಡಿದ್ದರು. ಅವರು 10,000 ಗಂಟೆಗಳಿಗಿಂತಲೂ ಹೆಚ್ಚು ದೊಡ್ಡ ಗಾತ್ರದ ವಿಮಾನಗಳನ್ನು ಓಡಿಸಿದ ಅತ್ಯಂತ ಅನುಭವಿ ಪೈಲಟ್ ಮತ್ತು ತರಬೇತುದಾರ ಎಂಬ ಹೆಗ್ಗಳಿಕೆ ಹೊಂದಿದ್ದಾರೆ. ಫಸ್ಟ್ ಆಫೀಸರ್ ಕ್ಲೈವ್ ಕುಂದರ್ ಅವರು ಕೂಡ 3,400 ಗಂಟೆಗಳಿಗಿಂತ ಹೆಚ್ಚು ವಿಮಾನ ಹಾರಾಟ ಅನುಭವವನ್ನು ಹೊಂದಿದ್ದರು ಎಂದಿದ್ದಾರೆ.

ಡಿಜಿಸಿಎ ತಿಳಿಸಿರುವ ಪ್ರಕಾರ ನಮ್ಮ ಬೋಯಿಂಗ್ 787 ವಿಮಾನ ಮತ್ತು ನಿರ್ವಹಣೆ ಪ್ರಕ್ರಿಯೆಗಳು ಸಂಪೂರ್ಣ ಸುರಕ್ಷತಾ ಮಾನದಂಡಗಳಿಗೆ ಅನುಗುಣವಾಗಿ ನಡೆಯುತ್ತವೆ ಎಂದು ಚಂದ್ರಶೇಖರನ್ ಹೇಳಿದ್ದಾರೆ. ಪೂರಕವಾಗಿ ವಿಮಾನಯಾನ ಸಂಸ್ಥೆಯು ತನ್ನ ಬೋಯಿಂಗ್ 787 ಮತ್ತು ಬೋಯಿಂಗ್ 777 ವಿಮಾನಗಳ ವಿಮಾನ ಹಾರಾಟಕ್ಕೂ ಮೊದಲಿನ ಅತ್ಯುನ್ನತ ಸುರಕ್ಷತಾ ತಪಾಸಣೆಯನ್ನು ಮುಂದುವರಿಸಲಿದೆ.

ಏರ್ ಇಂಡಿಯಾ ಸಂಸ್ಥೆಯಲ್ಲಿ ನಮಗೆ ನಿಮ್ಮ ಸುರಕ್ಷತೆಯೇ ಮೊದಲ ಆದ್ಯತೆಯಾಗಿದೆ. 2022ರಲ್ಲಿ ನಾವು ಈ ಸಂಸ್ಥೆಯನ್ನು ಖರೀದಿಸಿದಾಗಿನಿಂದಲೂ ನಾವು ಗ್ರಾಹಕರ ಸುರಕ್ಷತೆಗೆ ಆದ್ಯತೆ ನೀಡುತ್ತಿದ್ದೇವೆ” ಎಂದು ವಿಲ್ಸನ್ ಅವರು ಹೇಳಿದ್ದಾರೆ. ಜೊತೆಗೆ ನಿಯಂತ್ರಕ ಅವಶ್ಯಕತೆಗಳನ್ನು ಮೀರಿದ ಹೆಚ್ಚುವರಿ ಸುರಕ್ಷತಾ ಕ್ರಮಗಳನ್ನು ವಹಿಸುತ್ತಿರುವುದಾಗಿ ತಿಳಿಸಿದರು. ಈಗಾಗಲೇ ದುರಂತದ ಸ್ಥಳದಿಂದ ಎರಡೂ ಬ್ಲಾಕ್ ಬಾಕ್ಸ್‌ ಗಳನ್ನು ಪತ್ತೆಹಚ್ಚಲಾಗಿದೆ. ಭಾರತದ ಏರ್‌ಕ್ರಾಫ್ಟ್ ಆಕ್ಸಿಡೆಂಟ್ ಇನ್ವೆಸ್ಟಿಗೇಷನ್ ಬ್ಯೂರೋ, ಯು.ಎಸ್. ನ್ಯಾಷನಲ್ ಟ್ರಾನ್ಸ್‌ ಪೋರ್ಟೇಶನ್ ಸೇಫ್ಟಿ ಬೋರ್ಡ್, ಬೋಯಿಂಗ್, ಜಿಇ ಏರೋಸ್ಪೇಸ್, ಮತ್ತು ಯುಕೆಯ ಏರ್ ಆಕ್ಸಿಡೆಂಟ್ಸ್ ಇನ್ವೆಸ್ಟಿಗೇಷನ್ ಬ್ರಾಂಚ್‌ ನ ತಜ್ಞರನ್ನು ಒಳಗೊಂಡ ಬಹುರಾಷ್ಟ್ರೀಯ ತನಿಖಾ ತಂಡವು ಈ ಬ್ಲ್ಯಾಕ್ ಬಾಕ್ಸ್ ನಲ್ಲಿರುವ ಮಾಹಿತಿ ವಿಶ್ಲೇಷಣೆ ಮಾಡುತ್ತಿದೆ.

“ವಿಮಾನಯಾನ ಉದ್ಯಮದ ಜೊತೆಗೆ ನಾವೆಲ್ಲರೂ ಕೂಡ ಈ ವಿಮಾನ ದುರಂತದ ಹಿಂದಿನ ಕಾರಣವನ್ನು ತಿಳಿಯಲು ಅಧಿಕೃತ ತನಿಖಾ ವರದಿಗಾಗಿ ಕಾಯುತ್ತಿದ್ದೇವೆ,” ಎಂದು ಟಾಟಾ ಸನ್ಸ್ ಗ್ರೂಪ್ ಚೇರ್ ಮನ್ ಚಂದ್ರಶೇಖರನ್ ಹೇಳಿದ್ದಾರೆ. ಇದೇ ವೇಳೆ ಅವರು ವಿಮಾನ ದುರಂತದ ಕುರಿತು ಮುಂಚಿತವಾಗಿಯೇ ಊಹಾಪೋಹಾಗಳನ್ನು ಹರಡಬಾರದು ಎಂದು ಮನವಿ ಮಾಡಿದ್ದಾರೆ.