ಸಾಲದ ಸುಳಿಯಲ್ಲಿದ್ದ ಏರ್ ಇಂಡಿಯಾವನ್ನು ಟಾಟಾ ಖರೀದಿ ಕಳೆದ ವರ್ಷ ಅಕ್ಟೋಬರ್ 8 ರಂದು ಬಿಡ್ಡಿಂಗ್‌ನಲ್ಲಿ ಖರೀದಿಸಿದ್ದ ಟಾಟಾ ಹಸ್ತಾಂತರದ ಎಲ್ಲಾ ಪ್ರಕ್ರಿಯೆ ಪೂರ್ಣ, ಮೋದಿ ಭೇಟಿಯಾದ ಟಾಟಾ ಸನ್ಸ್
ನವದೆಹಲಿ(ಜ.27): ಬರೋಬ್ಬರಿ 90 ವರ್ಷಗಳ ಹಿಂದೆ ಟಾಟಾ ಸಂಸ್ಥೆ(Tata Group) ಆರಂಭಿಸಿದ ಏರ್ ಇಂಡಿಯಾ 1953ರಲ್ಲಿ ರಾಷ್ಟ್ರೀಕರಣ ಹೆಸರಿನಲ್ಲಿ ವಿಮಾನಯಾನ ಸಂಸ್ಥೆಯನ್ನು ಸರ್ಕಾರ ತನ್ನ ಸುಪರ್ದಿಗೆ ತೆಗೆದುಕೊಂಡಿತ್ತು. ಬಳಿಕ ನಷ್ಟದ ಮೇಲೆ ನಷ್ಟ ಅನುಭವಿಸಿದ್ದ ಅದೇ ಏರ್ ಇಂಡಿಯಾವನ್ನು(Air India) ಟಾಟಾ ಗ್ರೂಪ್ ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ 18,000 ಕೋಟಿ ರೂಪಾಯಿ ನೀಡಿ ಖರೀದಿ ಮಾಡಿತ್ತು. ಇದೀಗ ಖರೀದಿಯ ದಾಖಲೆ ಹಸ್ತಾಂತರ ಸೇರಿದಂತೆ ಇತರ ಎಲ್ಲಾ ಪ್ರಕ್ರಿಯೆಗಳು ಪೂರ್ಣಗೊಂಡಿದೆ. ಏರ್ ಇಂಡಿಯಾ ಸಂಸ್ಥೆಯನ್ನು ಅಧಿಕೃತವಾಗಿ ಟಾಟಾ ಗ್ರೂಪ್‌ಗೆ ಹಸ್ತಾಂತರಿಸುವ ಮೊದಲು ಟಾಟಾ ಸನ್ಸ್ ಅಧ್ಯಕ್ಷ ಎನ್ ಚಂದ್ರಶೇಖರನ್(N Chandrasekaran) ಪ್ರಧಾನಿ ನರೇಂದ್ರ ಮೋದಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ಏರ್ ಇಂಡಿಯಾ ಹಸ್ತಾಂತರಕ್ಕೆ ಸಹಕರಿಸಿದ ಪ್ರಧಾನಿ ನರೇಂದ್ರ ಮೋದಿಗೆ(PM Narendra Modi) ಟಾಟಾ ಸನ್ಸ್ ಅಧ್ಯಕ್ಷ ಎನ್ ಚಂದ್ರಶೇಖರನ್ ಧನ್ಯವಾದ ಹೇಳಿದ್ದಾರೆ. ಇದೇ ವೇಳೆ ಟಾಟಾ ಮುಂದಿನ ದಿನಗಳಲ್ಲಿ ಏರ್ ಇಂಡಿಯಾವನ್ನು ಭಾರತದ ಗತಕಾಲದ ವೈಭವ ಮರುಕಳಿಸುವ ರೀತಿಯಲ್ಲಿ ಸೇವೆ ನೀಡಲಿದೆ. ಈಗಾಗಲೇ ಸ್ಪಷ್ಟಪಡಿಸಿರುವಂತೆ ಏರ್ ಇಂಡಿಯಾ ಹೆಸರು ಬದಲಾಗುವುದಿಲ್ಲ ಎಂದು ಎನ್ ಚಂದ್ರಶೇಖರನ್ ಮೋದಿ ಜೊತೆಗಿನ ಮಾತುಕತೆಯಲ್ಲಿ ಸ್ಪಷ್ಟಪಡಿಸಿದ್ದಾರೆ.
Air India ಮಾರಾಟ: ಒಪ್ಪಂದಕ್ಕೆ ಸಹಿ ಹಾಕಿದ ಕೇಂದ್ರ ಸರ್ಕಾರ!
ಏರ್ ಇಂಡಿಯಾ ಹಸ್ತಾಂತರದ ಎಲ್ಲಾ ಪ್ರಕ್ರಿಯೆಗಳು ಮುಗಿದಿದೆ. ಯಾವುದೇ ಸಮಸ್ಯೆಗಳಿಲ್ಲ ಎಲ್ಲಾ ದಾಖಲೆ ಪತ್ರಗಳ ಪ್ರಕ್ರಿಯೆ ಮುಗಿದಿದೆ. ಈ ಮೂಲಕ ಏರ್ ಇಂಡಿಯಾ ಇದೀಗ ಅಧಿಕೃತವಾಗಿ ಟಾಟಾ ಗ್ರೂಪ್ ಪಾಲಾಗಿದೆ. ಸಾಲದ ಸುಳಿ, ಕಳಪೆ ಸರ್ವೀಸ್‌ನಿಂದ ಗ್ರಾಹಕರಿಂದ ನೀರಸ ಪ್ರತಿಕ್ರಿಯೆಗೆ ಕಾರಣವಾಗಿದ್ದ ಏರ್ ಇಂಡಿಯಾವನ್ನು ಪುನರ್ ನಿರ್ಮಾಣ ಮಾಡಲಿದೆ. ವಿಶ್ವ ದರ್ಜೆ ವಿಮಾನ ಯಾನ ಸೇವೆಯನ್ನು ಟಾಟಾ ಒದಗಿಸಲಿದೆ ಎಂದು ಎನ್ ಚಂದ್ರಶೇಕರನ್ ಹೇಳಿದ್ದಾರೆ.
ಆರ್‌ಜೆಡಿ ಟಾಟಾ ಸ್ಥಾಪಿಸಿದ ಏರ್ ಇಂಡಿಯಾ ವಿಮಾನ ಸರ್ಕಾರದ ಕೈಸೇರಿ ಅದ್ವಾನವಾಗಿತ್ತು. ಟಾಟಾದ ಉದ್ಯಮಗಳಲ್ಲಿ ಆರ್‌ಜೆಡಿ ಟಾಟಾ ಅವರ ನೆಚ್ಚಿನ ಉದ್ಯಮವಾಗಿದ್ದ ಏರ್ ಇಂಡಿಯಾವನ್ನು ಮರಳಿ ಪಡೆಯಲು ಆರ್‌ಜೆಡಿ ಟಾಟಾ ನಡೆಸಿದ ಹಲವು ಪ್ರಯತ್ನಗಳು ವಿಫಲವಾಗಿತ್ತು. ಇತ್ತ ಸರ್ಕಾರ ಏರ್ ಇಂಡಿಯಾವನ್ನು ಲಾಭದಲ್ಲಿ ತರಲು ಇದೇ ಆರ್‌ಜೆಡಿ ಟಾಟಾ ನೆರವು ಪಡೆದು ಮತ್ತೆ ಸುಸ್ಥಿತಿಗೆ ಮರಳಿತ್ತು. ಇದಾದ ಬಳಿಕ ಏರ್ ಇಂಡಿಯಾ ಸರ್ಕಾರದ ವಿಮಾನಯಾನ ಸಂಸ್ಥೆಯಾಗಿ ಬೆಳೆದು ನಿಂತಿತು. ಆದರೆ ಲಾಭ ಮಾತ್ರ ಮರೀಚಿಕೆಯಾಗಿತ್ತು. ಸದಾ ನಷ್ಟದಲ್ಲಿ ಓಡುತ್ತಿದ್ದ ಏರ್ ಇಂಡಿಯಾ ವಿಮಾನಯಾನ ಸಂಸ್ಥೆ ಮಾರಾಟ ಮಾಡಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನಿರ್ಧರಿಸಿ ಪ್ರಕ್ರಿಯೆ ಆರಂಭಿಸಿತು.
5G Rollout Concerns: USನ ಹಲವು ನಗರಗಳಿಗೆ ಏರ್ ಇಂಡಿಯಾ ಸೇರಿದಂತೆ ಇತರ ವಿಮಾನಗಳು ರದ್ದು!
2021ರ ಅಕ್ಟೋಬರ್ ತಿಂಗಳಲ್ಲಿ ನಡೆದ ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ಹಲವು ಸಂಸ್ಥೆಗಳು ಪಾಲ್ಗೊಂಡಿತ್ತು. ಭಾರಿ ಪೈಪೋಟಿಯಿಂದ ಕೂಡಿ ಬಿಡ್ಡಿಂಗ್‌ನಲ್ಲಿ 18,000 ಕೋಟಿ ರೂಪಾಯಿಗೆ ಟಾಟಾ ಅಂಗಸಂಸ್ಥೆಯಾಗಿರುವ ಟ್ಯಾಲೇಸ್ ಪ್ರೈವೇಟ್ ಲಿಮಿಟೆಡ್ ಏರ್ ಇಂಡಿಯಾ ತನ್ನ ತೆಕ್ಕೆಗೆ ತೆಗೆದುಕೊಂಡಿತು. ಈ ಮೊತ್ತದಲ್ಲಿ ಸರ್ಕಾರದ ಕೈಸೇರಲಿರುವ ಹಣ ಕೇವಲ 2,700 ಕೋಟಿ ರೂಪಾಯಿ. ಇನ್ನುಳಿದ ಹಣ ನೇರವಾಗಿ ಬಾಕಿ ಉಳಿಸಿಕೊಂಡಿರುವ ಸಾಲಕ್ಕೆ ಹೋಗಲಿದೆ.
ಏರ್ ಇಂಡಿಯಾ ಗೆದ್ದ ಟಾಟಾಗೆ ಫ್ಲೈಟ್ ಶೇಪ್ ಕುಕೀಸ್ ಗಿಫ್ಟ್
ಏರ್ ಇಂಡಿಯಾ ಕಾರ್ಯಾರಂಭಿಸಲು ಈಗಾಗಲೇ ಟಾಟಾಗ್ರೂಪ್ ಹೊಸ ಸಮಿತಿ ನೇಮಕ ಮಾಡಿದೆ. ಈ ಸಮಿತಿಯಲ್ಲಿ ಟಾಟಾ ಪಾಲುದಾರಿಕೆ ಹೊಂದಿರುವ ಏರ್ ಏಷ್ಯಾ ವಿಮಾನಯಾನ ಸಂಸ್ಥೆಯ ಹಿರಿಯ ಅಧಿಕಾರಿಗಳು ಇರಲಿದ್ದಾರೆ. ಟಾಟಾ ಸಂಸ್ಥೆಯಲ್ಲಿದ್ದ ಏರ್ ಇಂಡಿಯಾ ವಿಮಾನಯಾನ ಸಂಸ್ಥೆ ಮಹಾರಾಜನಂತೆ ಪ್ರಯಾಣಿಸಿ ಎಂಬ ಜಾಹೀರಾತು ಭಾರಿ ಸದ್ದು ಮಾಡಿತ್ತು. ಇದೀಗ ಅದೇ ಮಹಾರಾಜ ಮತ್ತೆ ಅರಮನೆಗೆ ಮರಳಿದ್ದಾನೆ. ಶೀಘ್ರದಲ್ಲೇ ಟಾಟಾ ಒಡೆತನದಲ್ಲಿ ಮೈಕೊಡವಿನಿಂತು ಹೊಸ ಸೇವೆ ನೀಡಲಿದೆ.
