ತಮಿಳುನಾಡಲ್ಲಿ ರಾಜ್ಯಪಾಲ ಆರ್‌.ಎನ್‌ ರವಿ ಮತ್ತು ಸರ್ಕಾರದ ನಡುವಿನ ಸಂಘರ್ಷ ಮತ್ತೊಂದು ಹಂತ ತಲುಪಿದ್ದು ‘ರಾಜ್ಯಪಾಲ ರವಿ ಅವರು ರಾಜ್ಯದ ಶಾಂತಿಗೆ ಅಪಾಯಕಾರಿ’ ಎಂದು ಮುಖ್ಯಮಂತ್ರಿ ಸ್ಟಾಲಿನ್‌ ರಾಷ್ಟ್ರಪತಿಗಳಿಗೆ ಪತ್ರ ಬರೆದಿದ್ದಾರೆ.

ಚೆನ್ನೈ: ತಮಿಳುನಾಡಲ್ಲಿ ರಾಜ್ಯಪಾಲ ಆರ್‌.ಎನ್‌ ರವಿ ಮತ್ತು ಸರ್ಕಾರದ ನಡುವಿನ ಸಂಘರ್ಷ ಮತ್ತೊಂದು ಹಂತ ತಲುಪಿದ್ದು ‘ರಾಜ್ಯಪಾಲ ರವಿ ಅವರು ರಾಜ್ಯದ ಶಾಂತಿಗೆ ಅಪಾಯಕಾರಿ’ ಎಂದು ಮುಖ್ಯಮಂತ್ರಿ ಸ್ಟಾಲಿನ್‌ ರಾಷ್ಟ್ರಪತಿಗಳಿಗೆ ಪತ್ರ ಬರೆದಿದ್ದಾರೆ. ‘ರಾಜ್ಯಪಾಲ ರವಿ ಕೋಮು ದ್ವೇಷ ಪ್ರಚೋದಿಸುತ್ತಿದ್ದಾರೆ. ಅವರು ತಮಿಳುನಾಡಿನ ಶಾಂತಿಗೆ ಅಪಾಯಕಾರಿಯಾಗಿದ್ದಾರೆ. ಸಂವಿಧಾನದ 159ನೇ ವಿಧಿಯಡಿ ತಾವು ನೀಡಿದ್ದ ಪ್ರಮಾಣ ವಚನವನ್ನು ಅವರು ಉಲ್ಲಂಘಿಸಿದ್ದಾರೆ’ ಎಂದು ಜು.8 ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಬರೆದಿರುವ ಪತ್ರದಲ್ಲಿ ಸ್ಟಾಲಿನ್‌ ಉಲ್ಲೇಖಿಸಿದ್ದಾರೆ. ಅಲ್ಲದೇ ‘ಇತ್ತೀಚೆಗೆ ಸಚಿವ ಸೆಂಥಿಲ್‌ ಬಾಲಾಜಿ ಅವರನ್ನು ಸಂಪುಟದಿಂದ ವಜಾಗೊಳಿಸಿದ ಮತ್ತು ಕೂಡಲೇ ಆದೇಶವನ್ನು ಹಿಂಪಡೆದ ನಿರ್ಧಾರದ ಮೂಲಕ ರಾಜ್ಯಪಾಲ ರವಿ ರಾಜಕೀಯವಾಗಿ ವರ್ತಿಸಿದ್ದಾರೆ’ ಎಂದು ಸ್ಟಾಲಿನ್‌ ದೂರಿದ್ದಾರೆ.

ತಮಿಳುನಾಡು ಗವರ್ನರ್‌ ವಿರುದ್ಧ ಅಣ್ಣಾಮಲೈ ಕಿಡಿ
ತಮಿಳುನಾಡು ರಾಜ್ಯಪಾಲರ ವಿರುದ್ಧ ಆಡಳಿತಾರೂಢ ಡಿಎಂಕೆ ಸಾಕಷ್ಟು ವಿರೋಧ ವ್ಯಕ್ತಪಡಿಸುತ್ತಲೇ ಇದೆ. ಅವರು ಬಿಜೆಪಿಯ ಏಜೆಂಟ್‌ ಎಂದೂ ಡಿಎಂಕೆ ನಾಯಕರು ಟೀಕಿಸಿದ್ದಾರೆ. ಈಗ, ತಮಿಳುನಾಡು ರಾಜ್ಯಪಾಲರ ವಿರುದ್ಧ ಅಲ್ಲಿನ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಅವರೇ ಮಾತನಾಡಿದ್ದು, ರಾಜ್ಯಪಾಲರು ರಾಜಕೀಯ ಮಾತನಾಡಬಾರದು ಎಂದಿದ್ದಾರೆ. ತಮಿಳುನಾಡಿನ ವಿಲ್ಲುಪುರಂನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಣ್ಣಾಮಲೈ, ರಾಜ್ಯಪಾಲರು ರಾಜಕೀಯ ಮಾತನಾಡುವ ರಾಜಕಾರಣಿಯಲ್ಲ. ಅದರ ಬಗ್ಗೆ ನನಗೆ ಸ್ಪಷ್ಟತೆ ಇದೆ. ಅವರು ಡಿಎಂಕೆ ಟೀಕಿಸಿದ್ದರೆ, ಅವರು ತಪ್ಪು ನಿದರ್ಶನವನ್ನು ನೀಡುತ್ತಾರೆ ಎಂದು ಅಣ್ಣಾಮಲೈ ಹೇಳಿದ್ದಾರೆ. ಮಂಗಳವಾರ ರಾಜಭವನದಲ್ಲಿ ಉಪಕುಲಪತಿಗಳೊಂದಿಗೆ ನಡೆದ ಸಭೆಯಲ್ಲಿ ರಾಜ್ಯಪಾಲ ರವಿ ಅವರು ವಿಶ್ವವಿದ್ಯಾಲಯಗಳಲ್ಲಿ ಖಾಲಿ ಇರುವ ಹುದ್ದೆಗಳ ಕುರಿತು ಪ್ರಸ್ತಾಪಿಸಿದ ಹಿನ್ನೆಲೆಯಲ್ಲಿ ಅಣ್ಣಾಮಲೈ ಈ ಬಗ್ಗೆ ಮಾತನಾಡಿದ್ದಾರೆ. ರಚನಾತ್ಮಕ ಟೀಕೆಗಳಿದ್ದರೆ, ರಾಜ್ಯಪಾಲರು ಸೂಕ್ತ ವೇದಿಕೆಗಳಲ್ಲಿ ವ್ಯಕ್ತಪಡಿಸಬೇಕು ಎಂದೂ ಅಣ್ಣಾಮಲೈ ಹೇಳಿದರು. 

ಸರ್ಕಾರದ ವಾಗ್ದಾಳಿ, ತಮಿಳುನಾಡು ರಾಜ್ಯಪಾಲರ ವಿವಾದಾತ್ಮಕ ಆದೇಶ ವಾಪಾಸ್‌!

ರಾಜ್ಯಪಾಲರು ನಿಜವಾಗಿಯೂ ಸರ್ಕಾರವನ್ನು ಟೀಕಿಸಲು ಬಯಸಿದರೆ, ಅವರು ರಾಜ್ಯಪಾಲರ ಭಾಷಣದ ಸಮಯದಲ್ಲಿ ರಾಜ್ಯ ವಿಧಾನಸಭೆಯಲ್ಲಿ ಹಾಗೆ ಮಾಡಬಹುದು. ರಾಜ್ಯಪಾಲರು ವಿರೋಧ ಪಕ್ಷಗಳಂತೆ ರಾಜ್ಯ ಸರ್ಕಾರವನ್ನು ಟೀಕಿಸಲು ಸಾಧ್ಯವಿಲ್ಲ. ರಾಜ್ಯಪಾಲರು ರಾಜ್ಯ ಸರ್ಕಾರವನ್ನು ಟೀಕಿಸಲು ಪ್ರಾರಂಭಿಸಿದರೆ, ಅದರ ಆಧಾರದ ಮೇಲೆ ಅವರು ತನ್ನ ಸ್ಥಾನವನ್ನು ಕಳೆದುಕೊಳ್ಳುತ್ತಾರೆ’’ ಎಂದೂ ಅಣ್ಣಾಮಲೈ ಹೇಳಿರುವುದು ಅಚ್ಚರಿ ಮೂಡಿಸಿದೆ.

ಸನಾತನ ಧರ್ಮದ ಮೇಲೆ ಬ್ರಿಟಿಷರ ದಾಳಿಗೆ ಸಹಾಯ ಮಾಡಿದ್ದು ಕಾರ್ಲ್‌ಮಾರ್ಕ್ಸ್‌: ತಮಿಳುನಾಡು ರಾಜ್ಯಪಾಲ

ಇತ್ತೀಚೆಗೆ, ಭ್ರಷ್ಟಾಚಾರದ ಆರೋಪಗಳನ್ನು ಹೊಂದಿರುವ ಕೆಲವು ಕೇಂದ್ರ ಸಚಿವರ ಹೆಸರುಗಳನ್ನು ಹೊಂದಿದ್ದ ಡಿಎಂಕೆಯ ಪೋಸ್ಟರ್‌ಗಳು ಚೆನ್ನೈನಲ್ಲಿ ಕಾಣಿಸಿಕೊಂಡಿದ್ದವು. ವಿ. ಸೆಂಥಿಲ್ ಬಾಲಾಜಿ ಅವರನ್ನು ತಮ್ಮ ಸ್ಥಾನದಿಂದ ತೆಗೆದುಹಾಕಿದಂತೆ, ರಾಜ್ಯಪಾಲರು ಕೇಂದ್ರ ಸಚಿವರನ್ನು ತೆಗೆಯುವಂತೆಯೂ ಕೇಂದ್ರ ಸರ್ಕಾರಕ್ಕೆ ಸಲಹೆ ನೀಡುತ್ತಾರೆಯೇ ಎಂದೂ ಈ ಪೋಸ್ಟರ್‌ಗಳಲ್ಲಿ ಕೇಳಲಾಗಿತ್ತು. ಅಲ್ಲದೆ, ಡಿಎಂಕೆ ಪೋಸ್ಟರ್‌ಗಳು ರಾಜ್ಯಪಾಲರನ್ನು ಮಾಧ್ಯಮಗಳೊಂದಿಗೆ ಮಾತನಾಡಲು ಮತ್ತು ಅವರ ಪ್ರಶ್ನೆಗಳಿಗೆ ಉತ್ತರಿಸಲು ಧೈರ್ಯಮಾಡುವಂತೆಯೂ ಹೇಳಿದ್ದರು.