ತಂದೆ ನಿಧನರಾದರೂ ಪರೇಡಲ್ಲಿ ಭಾಗಿಯಾದ ಮಹಿಳಾ ಇನ್ಸ್‌ಪೆಕ್ಟರ್‌| ಮಹಿಳಾ ಅಧಿಕಾರಿ ದೇಶಪ್ರೇಮಕ್ಕೆ ಭಾರಿ ಮೆಚ್ಚುಗೆ

ತಿರುನೆಲ್ವೇಲಿ(ಆ.17): ತನ್ನ ತಂದೆಯ ಅಗಲಿಕೆಯ ಹೊರತಾಗಿಯೂ ಮಹಿಳಾ ಪೊಲೀಸ್‌ ಇನ್ಸ್‌ಪೆಕ್ಟರ್‌ವೊಬ್ಬರು ಸ್ವಾತಂತ್ರ್ಯ ದಿನದ ಪರೇಡ್‌ ಮುನ್ನಡೆಸುವ ಮೂಲಕ ಕರ್ತವ್ಯ ಪ್ರಜ್ಞೆ ಮೆರೆದ ಘಟನೆಯೊಂದು ನಡೆದಿದೆ. ಈ ಅಧಿಕಾರಿಯ ದೇಶ ಪ್ರೇಮದ ಬಗ್ಗೆ ಭಾರಿ ಮೆಚ್ಚುಗೆಯೂ ವ್ಯಕ್ತವಾಗಿದೆ.

ಸಶಸ್ತ್ರ ಮೀಸಲು ಪೊಲೀಸ್‌ ಪಡೆಯಲ್ಲಿ ಇನ್ಸ್‌ಪೆಕ್ಟರ್‌ ಆಗಿ ಕಾರ್ಯನಿರ್ವಹಿಸುತ್ತಿರುವ ಎನ್‌. ಮಹೇಶ್ವರಿ ಅವರ 83 ವರ್ಷದ ತಂದೆ ನಾರಾಯಣ ಸ್ವಾಮಿ ತಿರುನೆಲ್ವೇಲಿಯಿಂದ 200 ಕಿ.ಮೀ. ದೂರದಲ್ಲಿರುವ ದಿಂಡಿಗಲ್‌ ಜಿಲ್ಲೆಯಲ್ಲಿ ನಿಧನರಾಗಿದ್ದರು.

ಸ್ವಾತಂತ್ರ್ಯ ದಿನಾಚರಣೆಗೆ ಪ್ರತಿ ವರ್ಷ ಬಾಲಕನ ವಿಡಿಯೋ ನೋಡಿ ಪುಳಕಿತರಾಗ್ತಾರೆ ಆನಂದ್ ಮಹೀಂದ್ರ!

ಆ.14ರ ರಾತ್ರಿ ತಂದೆ ತೀರಿಹೋದ ಸುದ್ದಿ ತಿಳಿದಿತ್ತು. ಇದರ ಹೊರತಾಗಿಯೂ ಮಹೇಶ್ವರಿ ಅವರು ಪರೇಡ್‌ನಲ್ಲಿ ಪಾಲ್ಗೊಂಡು ಜಿಲ್ಲಾಧಿಕಾರಿ ಶಿಲ್ಪಾ ಪ್ರಭಾಕರ್‌ ಸತೀಶ್‌ ಹಾಗೂ ಪೊಲೀಸ್‌ ವರಿಷ್ಠಾಧಿಕಾರಿ ಎನ್‌. ಮಣಿವಣ್ಣನ್‌ ಅವರಿಗೆ ಗೌರವ ಸಲ್ಲಿಸಿದ್ದಾರೆ.ಕರ್ತವ್ಯದ ವೇಳೆ ತಮ್ಮ ದುಃಖವನ್ನು ಕೊಂಚವೂ ತೋರಿಸಿಕೊಂಡಿಲ್ಲ. ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ಮುಗಿದ ಬಳಿಕ ತಂದೆಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.