* ತಮಿಳುನಾಡು ಸ್ಥಳೀಯ ಸಂಸ್ಥೆಗಳ ಚುನಾವಣೆಯ ಮತ ಎಣಿಕೆ ಆರಂಭ* ರಾಜ್ಯ ಚುನಾವಣಾ ಆಯೋಗ (TNSEC) ಪ್ರಕಾರ, ದ್ರಾವಿಡ ಮುನ್ನೇತ್ರ ಕಳಗಂ ಮುನ್ನಡೆ* ವೆಲ್ಲೂರಿನಲ್ಲಿ ಡಿಎಂಕೆ 14 ವಾರ್ಡ್‌ಗಳನ್ನು ಗೆದ್ದಿದೆ

ಚೆಬ್ಬೈ(ಫೆ.22): ಬಿಗಿ ಭದ್ರತೆಯಲ್ಲಿ ಇಂದು ಬೆಳಗ್ಗೆ 8 ಗಂಟೆಗೆ ತಮಿಳುನಾಡು ಸ್ಥಳೀಯ ಸಂಸ್ಥೆಗಳ ಚುನಾವಣೆಯ ಮತ ಎಣಿಕೆ ಆರಂಭವಾಗಿದೆ. ತಮಿಳುನಾಡು ರಾಜ್ಯ ಚುನಾವಣಾ ಆಯೋಗ (TNSEC) ಪ್ರಕಾರ, ದ್ರಾವಿಡ ಮುನ್ನೇತ್ರ ಕಳಗಂ (DMK) ಮುನ್ಸಿಪಲ್ ಕಾರ್ಪೊರೇಶನ್‌ಗಳು ಮತ್ತು ಪುರಸಭೆಗಳಲ್ಲಿ ಮುನ್ನಡೆ ಸಾಧಿಸಿದೆ. ಇದರಿಂದ ಎಐಎಡಿಎಂಕೆ ತೀರಾ ಹಿಂದುಳಿದಿದೆ. ಕಾಂಗ್ರೆಸ್ ಮೂರನೇ ಸ್ಥಾನದಲ್ಲಿದೆ. ಆದರೆ, ಮತ ಎಣಿಕೆಯ ಬಳಿಕವೇ ವಾಸ್ತವವೇನು ಎಂದು ತಿಳಿಯಲಿದೆ. ಸುದ್ದಿ ಸಂಸ್ಥೆ ಎಎನ್‌ಐ ಪ್ರಕಾರ, ವೆಲ್ಲೂರಿನಲ್ಲಿ ಡಿಎಂಕೆ 14 ವಾರ್ಡ್‌ಗಳನ್ನು ಗೆದ್ದಿದೆ. ಎಐಎಡಿಎಂಕೆ 4 ವಾರ್ಡ್, ಪಿಎಂಕೆ 4 ವಾರ್ಡ್, ಎಎಂಎಂಕೆ 1 ವಾರ್ಡ್ ಮತ್ತು ಪಕ್ಷೇತರರು 3 ವಾರ್ಡ್‌ಗಳಲ್ಲಿ ಗೆಲುವು ಸಾಧಿಸಿದ್ದಾರೆ. 

ಫೆಬ್ರವರಿ 19 ರಂದು ತಮಿಳುನಾಡಿನಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ನಡೆದವು. 60.70 ರಷ್ಟು ಜನರು ಈ ಚುನಾವಣೆಯಲ್ಲಿ ಮತ ಚಲಾಯಿಸಿದ್ದರು. ರಾಜ್ಯದ 21 ಪಾಲಿಕೆಗಳು, 138 ಪುರಸಭೆಗಳು ಮತ್ತು 490 ನಗರ ಪಂಚಾಯತ್‌ಗಳ 12,607 ಹುದ್ದೆಗಳಿಗೆ 57,778 ಅಭ್ಯರ್ಥಿಗಳು ಕಣದಲ್ಲಿದ್ದರು. ಇನ್ನು ಕೆಲವೇ ಗಂಟೆಗಳಲ್ಲಿ ಅವರ ಭವಿಷ್ಯ ನಿರ್ಧಾರವಾಗಲಿದೆ. ಚುನಾವಣೆಯಲ್ಲಿ ಡಿಎಂಕೆ ಗೆಲ್ಲುವ ಭರವಸೆ ಇದೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರು ಮತದಾನದ ನಂತರ ಹೇಳಿದ್ದರೆ, ಮಾಜಿ ಸಿಎಂ ಕೆ ಪಳನಿಸಾಮಿ ಅವರು ಆಡಳಿತ ಮತ್ತು ಕೊಡುಕೊಳ್ಳುವಿಕೆಯಲ್ಲಿ ವಿಫಲವಾಗಿರುವ ಡಿಎಂಕೆಗೆ ರಾಜ್ಯದ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದ್ದರು. 

Hijab Row ತಮಿಳುನಾಡು ಪೌರಾಡಳಿತ ಚುನಾವಣೆ ಮತದಾನದಲ್ಲಿ ಹಿಜಾಬ್‌ ಗದ್ದಲ!

ಸಿಸಿಟಿವಿ ಕ್ಯಾಮೆರಾ ಮೂಲಕ ಮತ ಎಣಿಕೆ ಮೇಲೆ ನಿಗಾ

ರಾಜ್ಯದ 15 ಕೇಂದ್ರಗಳಲ್ಲಿ ಮತ ಎಣಿಕೆ ಕಾರ್ಯ ನಡೆಯುತ್ತಿದೆ. ಮತ ಎಣಿಕೆಯನ್ನು ಸಿಸಿಟಿವಿ ಕ್ಯಾಮರಾಗಳ ಮೂಲಕ ಗಮನಿಸಲಾಗುತ್ತಿದೆ. 11 ವರ್ಷಗಳ ಬಳಿಕ ಇಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆದಿದೆ. ಇಂತಹ ಸಂದರ್ಭದಲ್ಲಿ ಅಭ್ಯರ್ಥಿಗಳಲ್ಲಿ ಭಾರೀ ಉತ್ಸಾಹ ಮೂಡಿದೆ. ಭದ್ರತೆ ದೃಷ್ಟಿಯಿಂದ ಕೇಂದ್ರದ ಹೊರಗೆ 7 ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ. ರಾಜ್ಯದಲ್ಲಿ ಪಾಲಿಕೆಯ ಮೇಯರ್, ಉಪಮೇಯರ್ ಸ್ಥಾನಕ್ಕೆ ಪರೋಕ್ಷ ಚುನಾವಣೆ ನಡೆಯಲಿದ್ದು, ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ನಗರ ಪಂಚಾಯಿತಿ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆ ಮಾ.4ರಂದು ನಡೆಯಲಿದೆ.

Uddhav Thackeray calls KCR: 2024ರ ಲೋಕಸಭೆ ಚುನಾವಣೆಗೆ ರೂಪ ಪಡೆದುಕೊಳ್ಳುತ್ತಿದೆ ತೃತೀಯ ರಂಗ!

ನಗರ ಸ್ಥಳೀಯ ಸಂಸ್ಥೆಗಳ ಚುನಾವಣಾ ಅಭ್ಯರ್ಥಿಗಳು

ತಮಿಳುನಾಡು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ (ನಗರ) ರಾಜಕೀಯ ಪಕ್ಷಗಳು 21 ಮುನ್ಸಿಪಲ್ ಕಾರ್ಪೊರೇಶನ್‌ಗಳು, 138 ಪುರಸಭೆಗಳು ಮತ್ತು 490 ನಗರ ಪಂಚಾಯತ್‌ಗಳಿಗೆ ಚುನಾವಣೆಯಲ್ಲಿ ಭಾಗವಹಿಸುತ್ತಿವೆ. ಅವುಗಳಲ್ಲಿ ದ್ರಾವಿಡ ಮುನ್ನೇತ್ರ ಕಳಗಂ (DMK), ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (AIADMK) ಮತ್ತು ಭಾರತೀಯ ಜನತಾ ಪಕ್ಷ (ಬಿಜೆಪಿ), ಕಾಂಗ್ರೆಸ್, ಪಟ್ಟಾಲಿ ಮಕ್ಕಳ್ ಕಚ್ಚಿ, ನಾಮ್ ತಮಿಳರ್ ಕಚ್ಚಿ, ಮಕ್ಕಳ್ ನಿಧಿ ಮೈಯಂ ಮತ್ತು ಅಮ್ಮ ಮಕ್ಕಳ್ ಮುನ್ನೇತ್ರ ಕಳಗಂ ಸೇರಿವೆ.