ಮತ್ತೊಂದು ಪಟಾಕಿ ದುರಂತ, ಫ್ಯಾಕ್ಟರಿ ಸ್ಫೋಟದಲ್ಲಿ 9 ಮಹಿಳೆಯರು ಸೇರಿ 11 ಮಂದಿ ಮೃತ!
ಮತ್ತೊಂದು ಪಟಾಕಿ ದುರಂತ ಸಂಭವಿಸಿದೆ. ಮಾದರಿ ಪರೀಕ್ಷೆ ವೇಳೆ ಸಂಭವಿಸಿದ ಸ್ಫೋಟದಿಂದ 9 ಮಹಿಳೆಯರು ಸೇರಿ 11 ಕಾರ್ಮಿಕರು ಮೃತಪಟ್ಟಿದ್ದಾರೆ.

ಚೆನ್ನೈ(ಅ.17) ಅತ್ತಿಬೆಲೆ ಪಟಾಕಿ ದರುಂತದ ಬೆನ್ನಲ್ಲೇ ಇದೀಗ ತಮಿಳುನಾಡಿನ ಶಿವಾಕಾಶಿಯಲ್ಲಿ ಭೀಕರ ದುರಂತ ನಡೆದಿದೆ. 2 ಪಾಟಕಿ ಫ್ಯಾಕ್ಟರಿಯಲ್ಲಿ ಸ್ಫೋಟ ಸಂಭವಿಸಿದೆ. ಪರಿಣಾಮ ಫ್ಯಾಕ್ಟರಿಯಲ್ಲಿದ್ದ 9 ಮಹಿಳೆಯರು ಸೇರಿ 11 ಮಂದಿ ಕಾರ್ಮಿಕರು ಮೃತಪಟ್ಟಿದ್ದಾರೆ. ಪಟಾಕಿ ಮಾದರಿಯನ್ನು ಪರೀಕ್ಷಿಸುವ ವೇಳೆ ಸ್ಫೋಟ ಸಂಭವಿಸಿದೆ. ಭೀಕರ ಸ್ಫೋಟದಲ್ಲಿ ಹಲವರು ಗಾಯಗೊಂಡಿದ್ದಾರೆ. ಪಟಾಕಿ ದಸ್ತಾನು, ಮದ್ದು ತುಂಬಿದ ದಾಸ್ತಾನು ಸ್ಫೋಟಗೊಂಡಿದೆ.
ಸ್ಥಳಕ್ಕೆ ಪೊಲೀಸರು ಹಾಗೂ ಅಗ್ನಿಶಾಮಕ ದಳ ಧಾವಿಸಿದ್ದು ರಕ್ಷಣಾ ಕಾರ್ಯದಲ್ಲಿ ನಿರತವಾಗಿದೆ. ಇತ್ತ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಎರಡೂ ಘಟಕಗಳು ಸರ್ಕಾರದಿಂದ ಪರವಾನಗೆ ಪಡೆದಿರುವುದು ಖಚಿತವಾಗಿದೆ. ಅನಧಿಕೃತ ದಾಸ್ತಾನು, ಹೆಚ್ಚುವರಿ ದಾಸ್ತಾನು ಕುರಿತು ತನಿಖೆ ನಡೆಯುತ್ತಿದೆ. ಇನ್ನು ಪಟಾಕಿ ಘಟಕಗಳು ಹೊಂದಿರಬೇಕಾದ ಸುರಕ್ಷತಾ ಮಾನದಂಡ ಪಾಲಿಸಲಾಗಿದೆಯೇ ಅನ್ನೋ ಕುರಿತು ತನಿಖೆ ನಡೆಯುತ್ತಿದೆ.
ಮೈಸೂರು : ಅನಧಿಕೃತವಾಗಿ ದಾಸ್ತಾನು ಮಾಡಿದ್ದ ಪಟಾಕಿ ವಶ
ಘಟನೆಗೆ ತೀವ್ರ ಬೇಸರ ವ್ಯಕ್ತಪಡಿಸಿರುವ ತಮಿಳುನಾಡು ಮುಖ್ಯಮಂತ್ರಿ ಮೃತರ ಕುಟುಂಬಕ್ಕೆ ತಲಾ 3 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಇನ್ನು ಗಾಯಾಳುಗಳಿಗೆ ಉತ್ತಮ ಚಿಕಿತ್ಸೆಗೆ ಸೂಚಿಸಿದ್ದಾರೆ. ಇದೇ ವೇಳೆ ತಮಿಳುನಾಡಿನ ಪಟಾಕಿ ಘಟಕದಲ್ಲಿನ ಸುರಕ್ಷತೆ ಕುರಿತು ಪರಿಶೀಲಿಸಲು ಸೂಚಿಸಿದ್ದಾರೆ. ಅನಧಿಕೃತ ದಾಸ್ತಾನು, ಅಕ್ರಮ ದಾಸ್ತನು ಕುರಿತು ಪರಿಶೀಲಿಸಲು ಪೊಲೀಸರಿಗೆ ಸೂಚನೆ ನೀಡಿದ್ದಾರೆ. ಸುರಕ್ಷತೆಗೆ ಮೊದಲ ಆದ್ಯತೆ ನೀಡುವಂತೆ ಸೂಚಿಸಿದ್ದಾರೆ.
ಇತ್ತೀಚೆಗೆ ಬೆಂಗಳೂರು ನಗರ ಜಿಲ್ಲೆಯ ಆನೇಕಲ್ ತಾಲೂಕಿನ ಅತ್ತಿಬೆಲೆ ಪಟಾಕಿ ಗೋದಾಮಿನಲ್ಲಿ ನಡೆದ ಅಗ್ನಿ ದುರಂತದಲ್ಲಿ ಒಟ್ಟು 16 ಮಂದಿ ಮೃತಪಟ್ಟಿದ್ದರು. ಇದೇ ತಿಂಗಳ 7ರಂದು ಕಂಟೈನರ್‌ನಿಂದ ಪಟಾಕಿ ಬಾಕ್ಸ್‌ಗಳನ್ನು ಅನ್‌ಲೋಡ್ ಮಾಡಿ ಗೋದಾಮಿಗೆ ಇರಿಸುವಾಗ ಅಗ್ನಿ ಅವಘಡ ಸಂಭವಿಸಿ 14 ಮಂದಿ ಕೆಲಸಗಾರರು ಸಜೀವ ದಹನವಾಗಿದ್ದರು. ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದರು. ನಾಲ್ವರು ಗಾಯಾಳುಗಳ ಪೈಕಿ ಮೂವರನ್ನು ಸೇಂಟ್ ಜಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಪೈಕಿ ಇಬ್ಬರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ಈ ಅಗ್ನಿ ದುರಂತ ಪ್ರಕರಣವನ್ನು ಸಿಐಡಿ ತನಿಖೆ ನಡೆಸುತ್ತಿದ್ದು, ಘಟನೆ ಸಂಬಂಧ ಪಟಾಕಿ ಅಂಗಡಿ ಮಾಲೀಕ ಸೇರಿದಂತೆ ಮೂವರನ್ನು ಬಂಧಿಸಲಾಗಿದೆ.