ಮಳೆಗೆ ತಮಿಳುನಾಡು ತತ್ತರ: 4 ಜಿಲ್ಲೆಗಳಲ್ಲಿ ಭಾರಿ ಅನಾಹುತ; ಹಲವು ಪ್ರದೇಶ ಪೂರ್ಣ ಜಲಾವೃತ
ಮಳೆ ಸಂಬಂಧಿ ಘಟನೆಗೆ ತೂತ್ತುಕುಡಿ ಜಿಲ್ಲೆಯ ರಾಜಪಾಳ್ಯಂ ಎಂಬಲ್ಲಿ ವೃದ್ಧರೊಬ್ಬರು ಬಲಿಯಾಗಿದ್ದಾರೆ. ಮಳೆಯಲ್ಲಿ ಸಿಕ್ಕಿಬಿದ್ದಿದ್ದ ಸಾವಿರಾರು ಜನರನ್ನು ತೆರವುಗೊಳಿಸಿ ಸುರಕ್ಷಿತ ಪ್ರದೇಶಗಳಿಗೆ ರವಾನಿಸಲಾಗಿದೆ.
ಚೆನ್ನೈ (ಡಿಸೆಂಬರ್ 19, 2023): ಕೇವಲ 15 ದಿನಗಳ ಹಿಂದಷ್ಟೇ ಮೈಚಾಂಗ್ ಚಂಡಮಾರುತದಿಂದಾಗಿ ರಾಜಧಾನಿ ಚೆನ್ನೈ ಸೇರಿದಂತೆ ಆಸುಪಾಸಿನ ನಗರಗಳು ಪ್ರವಾಹ ಪರಿಸ್ಥಿತಿ ಎದುರಿಸಿ ಸುಧಾರಿಸಿಕೊಳ್ಳುವ ಹೊತ್ತಿನಲ್ಲೇ, ಇದೀಗ ದಕ್ಷಿಣ ತಮಿಳುನಾಡಿನ 4 ಜಿಲ್ಲೆಗಳು ಭಾರೀ ಮಳೆ ಮತ್ತು ಪ್ರವಾಹದ ಅನಾಹುತಕ್ಕೆ ಸಿಕ್ಕಿಹಾಕಿಕೊಂಡಿವೆ. ಸೋಮವಾರ 1 ಸಾವು ವರದಿಯಾಗಿದೆ.
ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತವಾಗಿರುವ ಕಾರಣ ಕನ್ಯಾಕುಮಾರಿ, ತಿರುನೆಲ್ವೇಲಿ, ತೂತ್ತುಕುಡಿ ಮತ್ತು ಟೆಂಕ್ಸಾಯ್ ಜಿಲ್ಲೆಗಳು ಭಾನುವಾರ ಬೆಳಗ್ಗೆಯಿಂದ ಸುರಿಯುತ್ತಿರುವ ಭಾರೀ ಮಳೆಗೆ ನಲುಗಿ ಹೋಗಿದೆ. ಭಾರೀ ಮಳೆಯಿಂದಾಗಿ ಗ್ರಾಮ, ಪಟ್ಟಣ, ನದಿ, ಸೇತುವೆ, ಕೃಷಿ ಪ್ರದೇಶಗಳು ಸಂಪೂರ್ಣ ಜಲಾವೃತವಾಗಿದೆ.
ಜೊತೆಗೆ ತಗ್ಗು ಪ್ರದೇಶಗಳಲ್ಲಿನ ನೂರಾರು ಮನೆ ಮತ್ತು ವಸತಿ ಸಮುಚ್ಚಯಗಳಿಗೆ ಪ್ರವಾಹದ ನೀರು ನುಗ್ಗಿದ್ದು, ಜನರು ಮನೆಯ ಮೇಲೇರಿ ನಿಂತು ರಕ್ಷಣೆಗಾಗಿ ಗೋಗರೆಯುತ್ತಿರುವ ದೃಶ್ಯಗಳು ಕಂಡುಬಂದಿವೆ. ಹಲವು ಗ್ರಾಮಗಳು ಇತರೆ ಪ್ರದೇಶಗಳೊಂದಿಗೆ ಸಂಪರ್ಕ ಕಡಿದುಕೊಂಡಿವೆ.
ಇದನ್ನು ಓದಿ: ತಮಿಳುನಾಡಲ್ಲಿ ಭಾರಿ ಮಳೆ: ಹಲವು ರೈಲುಗಳು ಸ್ಥಗಿತ; ರೈಲ್ವೆ ನಿಲ್ದಾಣದಲ್ಲೇ ಸಿಲುಕಿದ ನೂರಾರು ಪ್ರಯಾಣಿಕರು
ಪರಿಣಾಮ ಸರ್ಕಾರಿ ಸಾರಿಗೆ ವಾಹನಗಳು ಮತ್ತು ಇತರೆ ಸಾರಿಗೆ ವಾಹನಗಳ ಸಂಚಾರದಲ್ಲಿ ಭಾರೀ ವ್ಯತ್ಯಯವಾಗಿದೆ. ಕೆಲವೊಂದು ರೈಲುಗಳ ಸಂಚಾರವನ್ನೂ ರದ್ದುಗೊಳಿಸಲಾಗಿದೆ.
ರಾಜ್ಯದಲ್ಲೇ ಅತ್ಯಧಿಕ 95 ಸೆಂ.ಮೀ. ಮಳೆ ಆಗಿರುವ ತೂತ್ತುಕಡಿಯ ರೈಲು ನಿಲ್ದಾಣದ ಸುತ್ತ ನೀರು ಉಕ್ಕೇರಿದೆ. ಹೀಗಾಗಿ ನಿಲ್ದಾಣದಲ್ಲಿ ಹಾಗೂ ರೈಲಿನಲ್ಲಿರುವ 500 ಪ್ರಯಾಣಿಕರು ಸಿಲುಕಿದ್ದಾರೆ.
ಫೀಲ್ಡಿಗಿಳಿದ ಕನ್ನಿಮೋಳಿ:
ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಎಂ. ಕೆ. ಸ್ಟಾಲಿನ್ ತಮ್ಮ ಸಚಿವ ಸಂಪುಟದ ಸಹದ್ಯೋಗಿಗಳು ಮತ್ತು ಹಿರಿಯ ಅಧಿಕಾರಿಗಳನ್ನು ಜನರ ರಕ್ಷಣೆ ಮತ್ತು ಪರಿಹಾರ ಕಾರ್ಯಗಳಿಗೆ ನಿಯೋಜಿಸಿದ್ದಾರೆ. ಜೊತೆಗೆ ಜನರ ರಕ್ಷಣೆಗೆ ವಾಯುಪಡೆ ನೆರವು ನೀಡುವಂತೆ ಕೇಂದ್ರ ಸರ್ಕಾರವನ್ನು ಕೋರಿದ್ಧಾರೆ.
ಇದನ್ನು ಓದಿ: ಬೆಂಗಳೂರಲ್ಲಿ ಮಳೆಗಾಲ ಮುಗಿಯುತ್ತಿದ್ದಂತೆ ಘರ್ಜಿಸಲಿವೆ ಜೆಸಿಬಿ: ಇಂಥವರು ಕೂಡಲೇ ಎಚ್ಚೆತ್ತುಕೊಳ್ಳಿ!
ಡಿಎಂಕೆ ಸಂಸದೆ ಕನ್ನಿಮೋಳಿ ಅವರು ಖುದ್ದು ಪರಿಹಾರ ಕಾರ್ಯಕ್ಕೆ ಇಳಿದಿದ್ದು, ಬಸ್ಸುಗಳಲ್ಲಿ ಸ್ವತಃ ತಾವೇ ಕುಳಿತು ಸುರಕ್ಷಿತ ಸ್ಥಳಗಳಿಗೆ ಸಂತ್ರಸ್ತರನ್ನು ಸಾಗಿಸುತ್ತಿದ್ದಾರೆ. ಈ ನಡುವೆ ಸ್ಥಳೀಯ ಅಗ್ನಿಶಾಮಕ ಸಿಬ್ಬಂದಿ, ರಾಜ್ಯ ವಿಪತ್ತು ನಿರ್ವಹಣಾ ಪಡೆಯ ನೂರಾರು ಸಿಬ್ಬಂದಿ ನೀರಿನೊಳಗೆ ಸಿಕ್ಕಿಬಿದ್ದ ನೂರಾರು ಜನರನ್ನು ಹಗ್ಗ, ಬೋಟ್ ಬಳಸಿ ರಕ್ಷಣೆ ಮಾಡಿದ್ದಾರೆ. ಮಳೆ ಸಂಬಂಧಿ ಘಟನೆಗೆ ತೂತ್ತುಕುಡಿ ಜಿಲ್ಲೆಯ ರಾಜಪಾಳ್ಯಂ ಎಂಬಲ್ಲಿ ವೃದ್ಧರೊಬ್ಬರು ಬಲಿಯಾಗಿದ್ದಾರೆ. ಮಳೆಯಲ್ಲಿ ಸಿಕ್ಕಿಬಿದ್ದಿದ್ದ ಸಾವಿರಾರು ಜನರನ್ನು ತೆರವುಗೊಳಿಸಿ ಸುರಕ್ಷಿತ ಪ್ರದೇಶಗಳಿಗೆ ರವಾನಿಸಲಾಗಿದೆ.
ತೂತ್ತುಕುಡಿಯಲ್ಲಿ ರಾಜ್ಯದಲ್ಲೇ ಅತ್ಯಧಿಕ 95 ಸೆಂ.ಮೀ. ಮಳೆ
ತೂತ್ತುಕುಡಿ ಜಿಲ್ಲೆಯ ಕಾಯಲ್‌ಪಟ್ಟಿಣಂನಲ್ಲಿ 95 ಸೆ.ಮೀ, ತಿರುಚೆಂಡರ್‌ನಲ್ಲಿ ಕೇವಲ 15 ಗಂಟೆಗಳ ಅವಧಿಯಲ್ಲಿ 60 ಸೆ.ಮೀ., ತಿರುನೆಲ್ವೇಲಿ ಜಿಲ್ಲೆಯ ಮನ್‌ಜೊಲಾಯ್‌ನಲ್ಲಿ 50 ಸೆ.ಮೀ., ಟೆಂಕ್ಸಾಯ್ ಜಿಲ್ಲೆಯ ಗುಂಡೂರ್ ಡ್ಯಾಮ್‌ನಲ್ಲಿ 51 ಸೆಂ.ಮೀ, ತಿರುನೆಲ್ವೇಲಿಯಲ್ಲಿ 30 ಸೆ.ಮೀ,., ಪಾಲಯಂಕೊಟ್ಟೈನಲ್ಲಿ 26 ಸೆ.ಮೀ., ಕನ್ಯಾಕುಮಾರಿಯಲ್ಲಿ 17.3 ಸೆಂ.ಮೀ. ಮಳೆ ಸುರಿದಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.