ಸನ್ನಡತೆ ಅಡಿ ಸ್ಫೋಟ ರೂವಾರಿ ಉಗ್ರನ ಬಿಡುಗಡೆಗೆ ಸರ್ಕಾರ ಸಿದ್ಧತೆ!
1998ರಲ್ಲಿ ಕೊಯಮತ್ತೂರಿಗೆ ಅಂದಿನ ಉಪ ಪ್ರಧಾನಿ ಎಲ್.ಕೆ.ಅಡ್ವಾಣಿ ಭೇಟಿ ನೀಡಿದ್ದ ವೇಳೆ ಸಂಭವಿಸಿದ ಸರಣಿ ಬಾಂಬ್ ಸ್ಫೋಟಗಳಲ್ಲಿ 58 ಮಂದಿ ಮೃತಪಟ್ಟಿದ್ದು, 200ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಎಸ್.ಎ.ಬಾಷಾ ಆ ಸರಣಿ ಸ್ಫೋಟದ ಪ್ರಮುಖ ರೂವಾರಿಯೆಂಬುದು ಸಾಬೀತಾಗಿ ಆತ ಜೀವಾವಧಿ ಜೈಲು ಶಿಕ್ಷೆ ಅನುಭವಿಸುತ್ತಿದ್ದಾನೆ.
ಚೆನ್ನೈ (ಸೆಪ್ಟೆಂಬರ್ 3, 2023): ಕುಖ್ಯಾತ ಪಾತಕಿ, ಕೊಯಮತ್ತೂರು ಸರಣಿ ಸ್ಫೋಟದ ರೂವಾರಿ, ಅಲ್ ಉಮ್ಮಾ ಭಯೋತ್ಪಾದಕ ಸಂಘಟನೆಯ ಸಂಸ್ಥಾಪಕ ಸೈಯದ್ ಅಹ್ಮದ್ ಬಾಷಾನನ್ನು ಜೈಲಿನಿಂದ ‘ಸನ್ನಡತೆ’ ಆಧರಿಸಿ ಬಿಡುಗಡೆ ಮಾಡಲು ತಮಿಳುನಾಡು ಸರ್ಕಾರ ಮುಂದಾಗಿದೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ. ತಮಿಳುನಾಡು ಸರ್ಕಾರದ ಈ ನಡೆ ತೀವ್ರ ವಿವಾದಕ್ಕೆ ಕಾರಣವಾಗಿದೆ.
1998ರಲ್ಲಿ ಕೊಯಮತ್ತೂರಿಗೆ ಅಂದಿನ ಉಪ ಪ್ರಧಾನಿ ಎಲ್.ಕೆ.ಅಡ್ವಾಣಿ ಭೇಟಿ ನೀಡಿದ್ದ ವೇಳೆ ಸಂಭವಿಸಿದ ಸರಣಿ ಬಾಂಬ್ ಸ್ಫೋಟಗಳಲ್ಲಿ 58 ಮಂದಿ ಮೃತಪಟ್ಟಿದ್ದು, 200ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಎಸ್.ಎ.ಬಾಷಾ ಆ ಸರಣಿ ಸ್ಫೋಟದ ಪ್ರಮುಖ ರೂವಾರಿಯೆಂಬುದು ಸಾಬೀತಾಗಿ ಆತ ಜೀವಾವಧಿ ಜೈಲು ಶಿಕ್ಷೆ ಅನುಭವಿಸುತ್ತಿದ್ದಾನೆ. ಇದೀಗ ಸೆಪ್ಟೆಂಬರ್ 15ರಂದು ಮಾಜಿ ಮುಖ್ಯಮಂತ್ರಿ ಸಿ.ಎನ್.ಅಣ್ಣಾದುರೈ ಅವರ ಹುಟ್ಟುಹಬ್ಬದಂದು ತಮಿಳುನಾಡು ಕಾರಾಗೃಹ ಇಲಾಖೆ 46 ಸಜಾ ಕೈದಿಗಳನ್ನು ಸನ್ನಡತೆ ಆಧಾರದಲ್ಲಿ ಬಿಡುಗಡೆ ಮಾಡಲು ಸರ್ಕಾರಕ್ಕೆ ಶಿಫಾರಸು ಮಾಡಿದ್ದು, ಆ ಪಟ್ಟಿಯಲ್ಲಿ ಬಾಷಾ ಹೆಸರು ಕೂಡ ಇದೆ.
ಇದನ್ನು ಓದಿ: ಗೋಲ್ಡ್ ಮೆಡಲಿಸ್ಟ್ ಡಾಕ್ಟರ್‌ಗೆ ಐಸಿಸ್ ನಂಟು! ಭಾಷಾ ನಿಪುಣ, 18 ಪುಸ್ತಕಗಳ ಲೇಖಕ ಅರೆಸ್ಟ್
ಬೆಂಗಳೂರು ಬಿಜೆಪಿ ಕಚೇರಿ ಬಳಿ ಸ್ಫೋಟ:
ಕುತೂಹಲಕರ ಸಂಗತಿಯೆಂದರೆ, 2013ರಲ್ಲಿ ಬೆಂಗಳೂರಿನ ಮಲ್ಲೇಶ್ವರದ ಬಿಜೆಪಿ ಕಚೇರಿ ಬಳಿ ಸಂಭವಿಸಿದ್ದ ಬಾಂಬ್ ಸ್ಫೋಟ ಪ್ರಕರಣದಲ್ಲೂ ಅಲ್ ಉಮ್ಮಾ ಸಂಘಟನೆಯ ಕೈವಾಡವಿತ್ತು ಎಂಬುದು ಪೊಲೀಸ್ ತನಿಖೆಯಲ್ಲಿ ಸಾಬೀತಾಗಿದೆ. ಟಿಫಿನ್ ಬಾಕ್ಸ್‌ನಲ್ಲಿ ಬಾಂಬ್ ಇರಿಸಿ ದಾಳಿ ಮಾಡುವುದಕ್ಕೆ ಈ ಸಂಘಟನೆ ಕುಖ್ಯಾತಿ ಪಡೆದಿದೆ.
ಸನ್ನಡತೆ ಆಧಾರದಲ್ಲಿ ಉಗ್ರ ಬಿಡುಗಡೆ:
ಬಾಂಬ್ ಸ್ಫೋಟದಂತಹ ಹೇಯ ಕೃತ್ಯದಲ್ಲಿ ಜೈಲುಶಿಕ್ಷೆ ಅನುಭವಿಸುತ್ತಿರುವ ಭಯೋತ್ಪಾದಕನನ್ನು ಹೇಗೆ ಸನ್ನಡತೆ ಆಧಾರದಲ್ಲಿ ಬಿಡುಗಡೆ ಮಾಡಲಾಗುತ್ತದೆ ಎಂದು ತೀವ್ರ ಟೀಕೆ ಕೇಳಿಬಂದಿದೆ. ಡಿಎಂಕೆ ಸರ್ಕಾರ ಮುಸ್ಲಿಂ ಓಲೈಕೆಗೆ ಈ ಕ್ರಮಕ್ಕೆ ಮುಂದಾಗಿದೆ ಎಂಬ ಆರೋಪವೂ ಕೇಳಿಬಂದಿದೆ. ಬಲಪಂಥೀಯರನ್ನು ಗುರುತಿಸಿ ಹತ್ಯೆಗೈಯುವ ಉದ್ದೇಶದ ಅಲ್ ಉಮ್ಮಾ ಸಂಘಟನೆಯ ಉಗ್ರನನ್ನು ಸರ್ಕಾರ ಬಿಡುಗಡೆ ಮಾಡಿದರೆ ಅದು ರಾಜ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟುಮಾಡಬಹುದು ಎಂಬ ಆತಂಕವನ್ನು ರಕ್ಷಣಾ ತಜ್ಞರು ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿ: ಕಾಶ್ಮೀರಲ್ಲಿ ಉಗ್ರ ಚಟುವಟಿಕೆ ಆರಂಭಕ್ಕೆ ಅಲ್ ಖೈದಾ ಸಿದ್ಧತೆ; AL QAEDA ಜತೆ ವಿಲೀನಕ್ಕೆ ಪಾಕ್ ತಾಲಿಬಾನ್ ಸಜ್ಜು!
ಇತ್ತೀಚೆಗೆ ಇನ್ನೊಂದು ಸ್ಫೋಟ:
ಕಳೆದ ವರ್ಷ ಕೊಯಮತ್ತೂರಿನಲ್ಲಿ ದೀಪಾವಳಿ ವೇಳೆ ಇನ್ನೊಂದು ಬಾಂಬ್ ಸ್ಫೋಟ ಸಂಭವಿಸಿತ್ತು. ಆಗ ರಾಷ್ಟ್ರೀಯ ತನಿಖಾ ದಳ (ಎನ್‌ಐಎ)ದಿಂದ ಬಂಧಿಸಲ್ಪಟ್ಟ ಮೊಹಮ್ಮದ್ ತಲ್ಕಾ ಎಂಬಾತ ಎಸ್.ಎ.ಬಾಷಾನ ಸಂಬಂಧಿಯಾಗಿದ್ದಾನೆ. ಹೀಗಾಗಿ ಈ ಸ್ಫೋಟದಲ್ಲೂ ಬಾಷಾ ಕೈವಾಡವಿದೆ ಎಂದು ಎನ್‌ಐಎ ಶಂಕಿಸಿದೆ.
ಕೊಯಮತ್ತೂರು ಸ್ಫೋಟ ರೂವಾರಿ ಬಿಡುಗಡೆಗೆ ತಮಿಳುನಾಡು ಸಿದ್ಧತೆ!
- 58 ಜನರ ಸಾವಿಗೆ ಕಾರಣನಾಗಿದ್ದ ಬಾಷಾ ‘ಸನ್ನಡತೆ’ ಮೇರೆಗೆ ಬಿಡುಗಡೆ ಸಾಧ್ಯತೆ
- ಕುಖ್ಯಾತ ಅಲ್ ಉಮ್ಮಾ ಉಗ್ರ ಸಂಘಟನೆಯ ಸ್ಥಾಪಕ ಬಾಷಾ
- 2013ರಲ್ಲಿ ಬೆಂಗಳೂರು ಬಿಜೆಪಿ ಕಚೇರಿ ಬಳಿ ಬಾಂಬ್ ಸ್ಫೋಟಿಸಿದ್ದ ಸಂಘಟನೆ
- ಮಾಜಿ ಉಪ ಪ್ರಧಾನಿ ಅಡ್ವಾಣಿ ಮೇಲೆ ಬಾಂಬ್ ದಾಳಿಗೆ ಯತ್ನಿಸಿದ್ದ ಬಾಷಾ
- ಹಲವು ಬಿಜೆಪಿ, ಆರೆಸ್ಸೆಸ್ ನಾಯಕರ ಮೇಲೆ ದಾಳಿಗೆ ಯತ್ನಿಸಿದ್ದ ಸಂಚುಕೋರ
- ಟಿಫಿನ್ ಬಾಕ್ಸ್‌ನಲ್ಲಿ ಬಾಂಬ್ ಇರಿಸಲು ಕುಖ್ಯಾತಿ ಪಡೆದ ಉಗ್ರ ಸಂಘಟನೆ
ಇದನ್ನೂ ಓದಿ: ಕಾಶ್ಮೀರದಲ್ಲಿ ನಾಪತ್ತೆಯಾದ 25 ವರ್ಷದ ಯೋಧ: ಕಾರಿನಲ್ಲಿ ರಕ್ತದ ಕಲೆ ಪತ್ತೆ; ಉಗ್ರರಿಂದ ಕಿಡ್ನ್ಯಾಪ್?