ಚೆನ್ನೈ(ಜೂ.12): ಅಚ್ಚರಿಯ ಬೆಳವಣಿಗೆಯೊಂದರಲ್ಲಿ ತಮಿಳುನಾಡು ಸರ್ಕಾರ ತನ್ನ ರಾಜ್ಯದಲ್ಲಿನ 1018 ಸ್ಥಳಗಳ ಹೆಸರಿನ ಇಂಗ್ಲಿಷ್‌ ಸ್ಪೆಲ್ಲಿಂಗನ್ನು ತಮಿಳು ಉಚ್ಚಾರಣೆಗೆ ತಕ್ಕಂತೆ ದಿಢೀರ್‌ ಬದಲಾವಣೆ ಮಾಡಿ ಆದೇಶ ಹೊರಡಿಸಿದೆ. ಇದಕ್ಕೆ ಸಾಮಾಜಿಕ ಜಾಲತಾಣಗಳೂ ಸೇರಿದಂತೆ ಎಲ್ಲೆಡೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.

ಹೊಸ ಆದೇಶದ ಪ್ರಕಾರ ಕೊಯಮತ್ತೂರ್‌ ಹೆಸರನ್ನು koyamapuththoor ಎಂದೂ, ಮೈಲಾಪೂರ್‌ ಹೆಸರನ್ನು mayilaappor ಎಂದೂ, ವೆಲ್ಲೂರ್‌ ಹೆಸರನ್ನ Veeloor ಎಂದೂ, ಪುದುಚೇರಿ ಹೆಸರನ್ನು Puthucherry ಎಂದೂ, ಧರ್ಮಪುರಿ ಹೆಸರನ್ನು Tharunapuri ಎಂದೂ ಬರೆಯಬೇಕಾಗುತ್ತದೆ. ಹೀಗೆ 1018 ಸ್ಥಳಗಳ ಹೆಸರನ್ನು ಬದಲಿಸಲಾಗಿದೆ. ವಾಸ್ತವವಾಗಿ ಕಳೆದ ಏಪ್ರಿಲ್‌ 1ರಂದೇ ತಮಿಳುನಾಡು ಸರ್ಕಾರ ಈ ನಿರ್ಧಾರ ಕೈಗೊಂಡಿತ್ತು. ಬುಧವಾರ ಈ ಬಗ್ಗೆ ಅಧಿಸೂಚನೆ ಹೊರಡಿಸಲಾಗಿದೆ.

ಬೆಂಗಳೂರಿನ ಐಐಎಸ್ಸಿ ದೇಶದ ನಂ.1 ಅತ್ಯುತ್ತಮ ವಿವಿ

ರಾಜ್ಯದ ತಮಿಳು ಭಾಷಿಕರನ್ನು ಖುಷಿಪಡಿಸಲು ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಎನ್ನಲಾಗಿದೆ. ಆದರೆ, ಇದೊಂದು ಅನಗತ್ಯ ಹಾಗೂ ಮೂರ್ಖತನದ ನಿರ್ಧಾರವೆಂದು ಎಲ್ಲೆಡೆ ಟೀಕೆ ವ್ಯಕ್ತವಾಗಿದೆ. ಕಾಂಗ್ರೆಸ್‌ ಸಂಸದ ಕಾರ್ತಿ ಚಿದಂಬರಂ, ‘ಇದು ಮೂರ್ಖತನದ ಕಸರತ್ತು. ಈಗ ಇದರ ಅಗತ್ಯವಿದೆಯೇ? ಬೋರ್ಡ್‌ಗಳನ್ನೆಲ್ಲ ಹೊಸತಾಗಿ ಬರೆಸುವುದರ ಖರ್ಚು ಯಾರು ಕೊಡುತ್ತಾರೆ’ ಎಂದು ಪ್ರಶ್ನಿಸಿದ್ದಾರೆ. ಕೊರೋನಾ ನಿಯಂತ್ರಣಕ್ಕೆ ಶ್ರಮಿಸುವುದರ ಬದಲು ಈ
ಅನಗತ್ಯ ಕೆಲಸ ಏಕೆ ಬೇಕಿತ್ತು ಎಂದು ಅನೇಕರು ಟ್ವೀಟ್‌ ಮಾಡಿದ್ದಾರೆ.