ನವದೆಹಲಿ(ಜೂ.12): ಬೆಂಗಳೂರಿನ ಐಐಎಸ್‌ಸಿ, ಐಐಎಂ, ನ್ಯಾಷನಲ್‌ ಲಾ ಸ್ಕೂಲ್‌, ಉಡುಪಿಯ ಮಣಿಪಾಲ್‌ ಫಾರ್ಮಾಸ್ಯುಟಿಕಲ್‌ ಕಾಲೇಜು, ಮಣಿಪಾಲ್‌ ಡೆಂಟಲ್‌ ಕಾಲೇಜು ಹಾಗೂ ಮೈಸೂರಿನ ಜೆಎಸ್‌ಎಸ್‌ ಕಾಲೇಜುಗಳು ಪ್ರಸಕ್ತ ವರ್ಷದಲ್ಲಿ ದೇಶದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.

ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯದ ರಾಷ್ಟ್ರೀಯ ಸಾಂಸ್ಥಿಕ ರ‍್ಯಾಂಕಿಂಗ್‌ ಫ್ರೇಮ್‌ವರ್ಕ್ (ಎನ್‌ಐಆರ್‌ಎಫ್‌) ವಿಭಾಗವು ಗುರುವಾರ ಈ ವರ್ಷದ ರ‍್ಯಾಂಕಿಂಗ್‌ ಪಟ್ಟಿ ಪ್ರಕಟಿಸಿದೆ. ಅದರಲ್ಲಿ ದೇಶದ ಅತ್ಯುತ್ತಮ ಶಿಕ್ಷಣ ಸಂಸ್ಥೆಗಳು ಎಂಬ ಹೆಗ್ಗಳಿಕೆಯನ್ನು ಕ್ರಮವಾಗಿ ಮದ್ರಾಸ್‌ ಐಐಟಿ, ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಹಾಗೂ ದೆಹಲಿ ಐಐಟಿ ಪಡೆದುಕೊಂಡಿವೆ. ದೇಶದ ಟಾಪ್‌ 10 ಅತ್ಯುತ್ತಮ ಶಿಕ್ಷಣ ಸಂಸ್ಥೆಗಳ 7 ಸ್ಥಾನ ಐಐಟಿಗಳ ಪಾಲಾಗಿದೆ.

ಉತ್ತಮ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಬೆಂಗಳೂರಿನ ಐಐಎಸ್‌ಸಿ ಪ್ರಥಮ ಸ್ಥಾನ ಪಡೆದಿದೆ. ನಂತರದ ಎರಡು ಸ್ಥಾನಗಳನ್ನು ದೆಹಲಿಯ ಜೆಎನ್‌ಯು ಹಾಗೂ ವಾರಾಣಸಿಯ ಬನಾರಸ್‌ ಹಿಂದು ವಿಶ್ವವಿದ್ಯಾಲಯ ಪಡೆದಿವೆ. ಇದೇ ವಿಭಾಗದಲ್ಲಿ ಮಣಿಪಾಲದ ಮಣಿಪಾಲ್‌ ಅಕಾಡೆಮಿ ಆಫ್‌ ಹೈಯರ್‌ ಎಜುಕೇಶನ್‌ 8ನೇ ಸ್ಥಾನ ಪಡೆದಿದೆ.

‘ಮೀಸಲಾತಿ’ ಮೂಲಭೂತ ಹಕ್ಕಲ್ಲ'; ಸುಪ್ರೀಂ ಕೋರ್ಟ್‌ ಮಹತ್ವದ ಅಭಿಪ್ರಾಯ

ಉತ್ತಮ ಮ್ಯಾನೇಜ್‌ಮೆಂಟ್‌ ಸಂಸ್ಥೆಗಳ ಪಟ್ಟಿಯಲ್ಲಿ ಬೆಂಗಳೂರಿನ ಐಐಎಂ ಎರಡನೇ ಸ್ಥಾನ ಪಡೆದಿದೆ. ಉತ್ತಮ ಫಾರ್ಮಸಿ ಕಾಲೇಜುಗಳ ಪಟ್ಟಿಯಲ್ಲಿ ಉಡುಪಿಯ ಮಣಿಪಾಲ್‌ ಕಾಲೇಜ್‌ ಆಫ್‌ ಫಾರ್ಮಾಸ್ಯುಟಿಕಲ್‌ ಸೈನ್ಸಸ್‌ 7ನೇ ಸ್ಥಾನ ಹಾಗೂ ಮೈಸೂರಿನ ಜೆಎಸ್‌ಎಸ್‌ ಕಾಲೇಜ್‌ ಆಫ್‌ ಫಾರ್ಮಸಿ 10ನೇ ಸ್ಥಾನ ಪಡೆದಿವೆ. ಉತ್ತಮ ಕಾನೂನು ಕಾಲೇಜುಗಳ ಪಟ್ಟಿಯಲ್ಲಿ ಬೆಂಗಳೂರಿನ ನ್ಯಾಷನಲ್‌ ಲಾ ಸ್ಕೂಲ್‌ ಆಫ್‌ ಇಂಡಿಯಾ ಯುನಿವರ್ಸಿಟಿ ಪ್ರಥಮ ಸ್ಥಾನ
ಪಡೆದಿದೆ. ಉತ್ತಮ ಡೆಂಟಲ್‌ ಕಾಲೇಜುಗಳ ಪಟ್ಟಿಯಲ್ಲಿ ಉಡುಪಿಯ ಮಣಿಪಾಲ್‌ ಕಾಲೇಜ್‌ ಆಫ್‌ ಡೆಂಟಲ್‌ ಸೈನ್ಸಸ್‌ 2ನೇ ಸ್ಥಾನ ಪಡೆದಿದೆ.

ಉತ್ತಮ 10 ಎಂಜಿನಿಯರಿಂಗ್‌ ಕಾಲೇಜುಗಳ ಪಟ್ಟಿಯಲ್ಲಿ, ಸಾಮಾನ್ಯ ಕಾಲೇಜುಗಳ ಪಟ್ಟಿಯಲ್ಲಿ, ಮೆಡಿಕಲ್‌ ಕಾಲೇಜು ಹಾಗೂ ಆರ್ಕಿಟೆಕ್ಚರ್‌ ಕಾಲೇಜುಗಳ ಪಟ್ಟಿಯಲ್ಲಿ ಕರ್ನಾಟಕದ ಯಾವುದೇ ಶಿಕ್ಷಣ ಸಂಸ್ಥೆ ಸ್ಥಾನ ಪಡೆದಿಲ್ಲ.