Asianet Suvarna News Asianet Suvarna News

ಇಂಡಿಯಾವನ್ನು ಹಿಂದಿಯಾ ಮಾಡುವ ಪ್ರಯತ್ನ ಮಾಡ್ಬೇಡಿ, ಅಮಿತ್‌ ಶಾಗೆ ತಮಿಳುನಾಡು ಸಿಎಂ ತಿರುಗೇಟು!

8ನೇ ಶೆಡ್ಯೂಲ್‌ನಲ್ಲಿರುವ ಎಲ್ಲಾ 22 ಭಾಷೆಗಳನ್ನು ಸರ್ಕಾರದ ಅಧಿಕೃತ ಭಾಷೆ ಎಂದು ಘೋಷಿಸಿ ಎಂದು ಎಂಕೆ ಸ್ಟಾಲಿನ್ ಹೇಳಿದ್ದಾರೆ. ಅದಲ್ಲದೆ, ಇಂಡಿಯಾವನ್ನು ಹಿಂದಿಯಾ ಮಾಡುವ ಪ್ರಯತ್ನ ಮಾಡಬೇಡಿ ಎಂದೂ ಕೇಂದ್ರಕ್ಕೆ ತಿರುಗೇಟು ನೀಡಿದ್ದಾರೆ.
 

Tamil Nadu CM MK Stalin to Amit Shah Stop Attempts To Make India Hindia san
Author
First Published Sep 15, 2022, 1:35 PM IST

ಚೆನ್ನೈ (ಸೆ. 15): ಹಿಂದಿ ಎನ್ನುವುದು ದೇಶದ ಯಾವುದೇ ಪ್ರಾದೇಶಿಕ ಭಾಷೆಗಳ ವಿರೋಧಿಯಲ್ಲ. ಅದು ಎಲ್ಲಾ ಭಾಷೆಗಳ ಸ್ನೇಹಿತ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಷಾ ನೀಡಿದ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟ್ಯಾಲಿನ್‌, ಇಂಡಿಯಾವನ್ನು ಹಿಂದಿಯಾ ಮಾಡುವ ಪ್ರಯತ್ನ ಮಾಡ್ಬೇಡಿ ಎಂದಿದ್ದಾರೆ. "ನಾನು ಒಂದು ವಿಷಯವನ್ನು ಸ್ಪಷ್ಟವಾಗಿ ಹೇಳಬಯಸುತ್ತೇನೆ. ಕೆಲವರು ಹಿಂದಿ ಮತ್ತು ಗುಜರಾತಿ, ಹಿಂದಿ ಮತ್ತು ತಮಿಳು, ಹಿಂದಿ ಮತ್ತು ಮರಾಠಿ ಸ್ಪರ್ಧಿಗಳು ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಹಿಂದಿ ದೇಶದ ಯಾವುದೇ ಭಾಷೆಗೆ ಪ್ರತಿಸ್ಪರ್ಧಿಯಾಗಲು ಸಾಧ್ಯವಿಲ್ಲ. ಹಿಂದಿ ಎಂಬುದನ್ನು ನೀವು ಅರ್ಥಮಾಡಿಕೊಳ್ಳಬೇಕು. ದೇಶದ ಎಲ್ಲಾ ಭಾಷೆಗಳ ಸ್ನೇಹಿತ" ಎಂದು ಹಿಂದಿ ದಿನದಂದು ಸೂರತ್‌ನಲ್ಲಿ ನಡೆದ ಅಖಿಲ ಭಾರತ ಅಧಿಕೃತ ಭಾಷಾ ಸಮ್ಮೇಳನದಲ್ಲಿ ಅಮಿತ್ ಶಾ ಬುಧವಾರ ಹೇಳಿದ್ದರು. ಗೃಹ ಸಚಿವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸ್ಟಾಲಿನ್, ಇಂಡಿಯಾವನ್ನು ಹಿಂದಿಯಾವನ್ನಾಗಿ ಮಾಡುವ ಯಾವುದೇ ಪ್ರಯತ್ನವನ್ನು ಬಿಜೆಪಿ ನಿಲ್ಲಿಸಬೇಕು ಎಂದು ಹೇಳಿದರು. "8 ನೇ ಶೆಡ್ಯೂಲ್‌ನಲ್ಲಿರುವ ಎಲ್ಲಾ 22 ಭಾಷೆಗಳನ್ನು ಸರ್ಕಾರದ ಅಧಿಕೃತ ಭಾಷೆ ಎಂದು ಘೋಷಿಸಿ. ಹಿಂದಿ ರಾಷ್ಟ್ರ ಭಾಷೆ ಅಥವಾ ಏಕೈಕ ಅಧಿಕೃತ ಭಾಷೆ ಅಲ್ಲ. ನಾವು ಹಿಂದಿ ದಿನದ ಬದಲಿಗೆ ಭಾರತೀಯ ಭಾಷಾ ದಿನವನ್ನು ಆಚರಿಸಬೇಕು" ಎಂದು ಸ್ಟಾಲಿನ್ ಹೇಳಿದ್ದಾರೆ.

"ಕೇಂದ್ರವು ಹಿಂದಿ ಮತ್ತು ಇತರ ಭಾಷೆಗಳ ಅಭಿವೃದ್ಧಿಗೆ ಖರ್ಚು ಮಾಡುವ ಸಂಪನ್ಮೂಲಗಳಲ್ಲಿನ ದೊಡ್ಡ ವ್ಯತ್ಯಾಸದತ್ತ ಗಮನ ನೀಡಬೇಕು. ಕೇಂದ್ರವು ಎನ್‌ಇಪಿ ಮೂಲಕ ಹಿಂದಿ ಮತ್ತು ಸಂಸ್ಕೃತವನ್ನು ಹೇರುವ ಪ್ರಯತ್ನ ಮಾಡುತ್ತಿದೆ; ಎಂದು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಉಲ್ಲೇಖಿಸಿ ಸ್ಟ್ಯಾಲಿನ್‌ (MK Stalin) ಆರೋಪಿಸಿದ್ದಾರೆ. ಹಿಂದಿಯನ್ನು ಹೇರಲು ಕೇಂದ್ರ ಪ್ರಯತ್ನಿಸುತ್ತಿದೆ ಎಂದು ತಮಿಳುನಾಡು ಹಿಂದಿನಿಂದಲೂ ಆರೋಪಿಸಿದೆ. ಶಾಲೆಗಳಲ್ಲಿ ತೃತೀಯ ಭಾಷೆಯಾಗಿ (Third Language) ಹಿಂದಿಯನ್ನು ಪರಿಚಯಿಸುವ ಕೇಂದ್ರದ ಆಪಾದಿತ ಯೋಜನೆಯ ವಿರುದ್ಧ ರಾಜ್ಯವು ಹೋರಾಡಿದ ನಂತರ ಭಾಷಾ ಹೋರಾಟ ಇನ್ನಷ್ಟು ತೀವ್ರವಾಗಿತ್ತು.ಅರವತ್ತರ ದಶಕದಲ್ಲಿ, ರಾಜ್ಯವು ಹಿಂದಿ-ವಿರೋಧಿ ಪ್ರತಿಭಟನೆಗಳನ್ನು ಕಂಡಿತು ಮತ್ತು ಕೇಂದ್ರ ಮತ್ತು ರಾಜ್ಯಗಳ ನಡುವೆ ಇಂಗ್ಲಿಷ್ ಅನ್ನು ಅಧಿಕೃತ ಲಿಂಕ್ ಭಾಷೆಯನ್ನಾಗಿ ಮಾಡಲು ಅಂದಿನ ಪ್ರಧಾನಿ ಭರವಸೆ ನೀಡಿದ್ದರು.

Hindi Diwas: ದೇಶದ ಏಕತೆಗೆ ಹಿಂದಿ ಅತ್ಯಂತ ನಿರ್ಣಾಯಕ; ಕೇಂದ್ರ ಶಿಕ್ಷಣ ಸಚಿವರ ವಾದ

ಈ ವರ್ಷದ ಏಪ್ರಿಲ್‌ನಲ್ಲಿ ಅಮಿತ್ ಶಾ ಅವರು ವಿವಿಧ ರಾಜ್ಯಗಳ ಜನರು ಪರಸ್ಪರ ಹಿಂದಿಯಲ್ಲಿ ಮಾತನಾಡಬೇಕು, ಇಂಗ್ಲಿಷ್‌ನಲ್ಲಿ (English) ಮಾತನಾಡಬಾರದು ಎಂದು ಹೇಳಿದ್ದರು. ಈ ಕುರಿತು ಸ್ಟಾಲಿನ್ ಅವರು, 'ಶಾ ಅವರ ಹೇಳಿಕೆ ದೇಶದ ಏಕತೆಯ ಮೇಲಿನ ದಾಳಿಯಾಗಿದೆ. ಬಿಜೆಪಿ ನಾಯಕತ್ವ ದೇಶದ ವೈವಿಧ್ಯತೆಯನ್ನು ನಾಶ ಮಾಡುವ ಕೆಲಸ ನಿರಂತರವಾಗಿ ಮಾಡುತ್ತಿದೆ.

Hindi Diwas: ''ಅಧಿಕೃತ ಭಾಷೆ ಹಿಂದಿ ದೇಶವನ್ನು ಒಗ್ಗೂಡಿಸುತ್ತದೆ'' ಎಂದ ಅಮಿತ್ ಶಾ

"ಎಲ್ಲರೂ ಇದನ್ನು ಒಪ್ಪಿಕೊಳ್ಳಬೇಕು ಮತ್ತು ಅರ್ಥಮಾಡಿಕೊಳ್ಳಬೇಕು. ಎಲ್ಲಿಯವರೆಗೆ ನಾವು ಭಾಷೆಗಳ ಸಹಬಾಳ್ವೆಯನ್ನು ಒಪ್ಪಿಕೊಳ್ಳುವುದಿಲ್ಲವೋ ಅಲ್ಲಿಯವರೆಗೆ, ನಮ್ಮ ಭಾಷೆಯಲ್ಲಿ ದೇಶವನ್ನು ನಡೆಸುವ ಕನಸನ್ನು ನಾವು ನನಸಾಗಿಸಲು ಸಾಧ್ಯವಿಲ್ಲ. ಮತ್ತು ಅದು ನಮ್ಮ ಗುರಿಯಾಗಬೇಕು ಎಂದು ನಾನು ಪ್ರಾಮಾಣಿಕವಾಗಿ ಹೇಳಲು ಬಯಸುತ್ತೇನೆ. ಎಲ್ಲಾ ಭಾಷೆಗಳು ಮತ್ತು ಮಾತೃಭಾಷೆಗಳನ್ನು ಜೀವಂತವಾಗಿ ಮತ್ತು ಸಮೃದ್ಧವಾಗಿ ಇರಿಸಿ, ಈ ಎಲ್ಲಾ ಭಾಷೆಗಳ ಏಳಿಗೆಯಿಂದ ಮಾತ್ರ ಹಿಂದಿ ಸಮೃದ್ಧಿಯಾಗುತ್ತದೆ ಎಂದು ಅಮಿತ್ ಶಾ ಹೇಳಿದ್ದರು. ಹಿಂದಿ ಎಲ್ಲರನ್ನೂ ಒಳಗೊಳ್ಳುವ ಭಾಷೆಯಾಗಿದ್ದು, ಹಿಂದಿಯೊಂದಿಗೆ (Hindi) ಸ್ಥಳೀಯ ಭಾಷೆಗಳನ್ನು ಬಲಪಡಿಸಲು ಕರೆ (amit shah) ನೀಡಿದ್ದರು.

ಹಿಂದಿಯಲ್ಲಿ 264, ಉರ್ದುದಲ್ಲಿ 58, ತಮಿಳಿನಲ್ಲಿ 19, ತೆಲುಗಿನಲ್ಲಿ 10, ಪಂಜಾಬಿ ಮತ್ತು ಗುಜರಾತಿಯಲ್ಲಿ ತಲಾ 22, ಮರಾಠಿಯಲ್ಲಿ 123, ಸಿಂಧಿಯಲ್ಲಿ 9, ಒಡಿಯಾದಲ್ಲಿ 11  ಬಾಂಗ್ಲಾದಲ್ಲಿ 24, ಮತ್ತು ಕನ್ನಡದಲ್ಲಿ ಒಂದು ಕವನಗಳು ಸೇರಿದಂತೆ ವಿವಿಧ ಭಾರತೀಯ ಭಾಷೆಗಳಲ್ಲಿ ಸಾಹಿತ್ಯ ಕೃತಿಗಳನ್ನು ಬ್ರಿಟಿಷರು ನಿಷೇಧಿಸಿದ್ದಾರೆ ಎಂದು  ಶಾ ಹೇಳಿದ್ದರು.

Follow Us:
Download App:
  • android
  • ios