Asianet Suvarna News Asianet Suvarna News

ಕೊರೋನಾಗೆ ಆಂಧ್ರದ ಹಳ್ಳಿಮದ್ದು, ಸರ್ಕಾರಕ್ಕೆ ಕೋರ್ಟ್‌ ಮಹತ್ವದ ಆದೇಶ!

* ಕೊರೋನಾಗೆ ಹಳ್ಳಿಮದ್ದು ನೀಡುತ್ತಿದ್ದ ಆಂಧ್ರದ ಆನಂದಯ್ಯ

* ಮದ್ದು ಕ್ಲಿನಿಕಲ್ ಪ್ರಯೋಗಕ್ಕೆ ರಾಜ್ಯ, ಕೇಂದ್ರ ಸರ್ಕಾರದ ನಿರ್ಧಾರ

* ಕ್ಲಿನಿಕಲ್ ಪ್ರಯೋಗ ಪ್ರಕ್ರಿಯೆ ಬೇಗ ಮುಗಿಸಲು ಸರ್ಕಾರಕ್ಕೆ ಕೋರ್ಟ್‌ ಮಹತ್ವದ ಆದೇಶ!

Take decision on distribution of Anandayya herbal medicine Andhra Pradesh high court pod
Author
Bangalore, First Published May 31, 2021, 4:43 PM IST

ಬೆಂಗಳೂರು(ಮೇ.31): ಬಿ. ಆನಂದಯ್ಯರವರು ನೀಡುವ ಆಯುರ್ವೇದ ಔಷಧ ವಿತರಣೆ ವಿಚಾರವಾಗಿ ಶೀಘ್ರವಾಗಿ ಯಾವುದಾದರೂ ನಿರ್ಧಾರ ತೆಗೆದುಕೊಳ್ಳುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಆಂಧ್ರ ಪ್ರದೇಶ ಹೈಕೋರ್ಟ್‌ ಸೂಚಿಸಿದೆ. ಈ ವಿಚಾರವಾಗಿ ಕ್ಲಿನಿಕಲ್ ಪ್ರಯೋಗದ ಕಾರಣ ನೀಡಿ ಪ್ರಕ್ರಿಯೆಯಲ್ಲಿ ವಿಳಂಬ ಮಾಡುವುದು ಬೇಡ ಎಂದಿದ್ದಾರೆ.

ಕೊರೋನಾ ಸೊಮಖಿನಿಂದ ಬಳಲುತ್ತಿರುವವರಿಗೆ ನೀಡಲಾಗುತ್ತಿದ್ದ ಆನಂದಯ್ಯ ನೀಡುತ್ತಿದ್ದ ಆಯುರ್ವೇದ ಔಷಧಿ ವಿತರಣೆಗೆ ಅನುವು ಮಾಡುವಂತೆ ಕೋರಿ ಅಡ್ವಕೇಟ್ ಪನ್ನಕಾಂತಿ ಮಲ್ಲಿಕಾರ್ಜುನ್ ರಾವ್ ಹಾಗೂ ಎಂ ಉಮಾಹೇಶ್ವರರವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಜಸ್ಟೀಸ್‌ ಡಿ. ರಮೇಶ್ ಹಾಗೂ ಜಸ್ಟೀಸ್‌ ಕೆ. ಸುರೇಶ್ ನೇತೃತ್ವದ ದ್ವಿಸದಸ್ಯ ಪೀಠವು ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಈ ಬಗ್ಗೆ ಶೀಘ್ರವಾಗಿ ನಿರ್ಧಾರ ತೆಗೆದುಕೊಳ್ಳುವಂತೆ ಆದೇಶಿಸಿದೆ. 

ಕೊರೋನಾಕ್ಕೆ ಗಿಡಮೂಲಿಕೆ ಮದ್ದು, ಸಾಗರೋಪಾದಿಯಲ್ಲಿ ಈ ಹಳ್ಳಿಗೆ ಬಂದ್ರು!

ಇನ್ನು ಅರ್ಜಿದಾರರ ಪರ ವಾದಿಸಿದ ಪಿ.ವಿ.ಕೃಷ್ಣಯ್ಯ ಮತ್ತು ಬಾಲಾಜಿ ವಾಡೆರಾ, ಸರ್ಕಾರಕ್ಕೆ ಈ ಔಷಧಿ ವಿತರಣೆ ತಡೆಯಲು ಯಾಔಉದೇ ಹಕ್ಕಿಲ್ಲ ಎಂದು ವಾದಿಸಿದ್ದಾರೆ. ಔಷಧಿ ವಿತರಣೆ ನಿಲ್ಲಿಸಿ ಈ ಬಗ್ಗೆ ವಿವರವಾದ ವರದಿ ನೀಡುವಂತೆ ಲೋಕಾಯುಕ್ತ ನೆಲ್ಲೂರ್‌ನ ಕಲೆಕ್ಟರ್‌ಗೆ ಆದೇಶಿಸಿತ್ತು. ಈ ವರದಿಯನ್ನಾಧರಿಸಿ ಉಚಿತ ಔಷಧಿ ವಿತರಣೆಗೆ ಯಾವುದೇ ರೀತಿಯ ಅಡ್ಡಿಪಡಿಸಬಾರದೆಂದು ಆದೇಶಿಸಲಾಗಿತ್ತು. ಆದರೆ ರಾಜ್ಯ ಸರ್ಕಾರ ಈ ಔಷಧಿ ವಿತರಣೆಯನ್ನು ನಿಲ್ಲಿಸಿತು. ಅನೇಕ ಮಂದಿಯ ಪ್ರಾಣ ಕಾಪಾಡಿದ್ದ ಈ ಔಷಧಿ ಪಡೆಯಲು ಭಾರೀ ಸಮರ್ಕಯೆಯಲ್ಲಿ ಜನರು ಬರಲಾರಂಭಿಸಿದ್ದರು. ಅನೇಕರು ಖಾಸಗಿಯಾಗಿ ನಕಲಿ ಔಷಧ ಮಾರಾಟ ಮಾಡಿ ಹಣ ಗಳಿಸುತ್ತಿದ್ದಾರೆ ಎಂದು ವಕೀಲರು ವಾದಿಸಿದ್ದಾರೆ.

ಹೀಗಿರುವಾಗ ಸರ್ಕಾರದ ಪರ ವಾದಿಸಿದ ವಕೀಲರು ಆನಂದಯ್ಯರವರು ಆಯುರ್ವೇದಿಕ್ ಕೌನ್ಸಿಲ್ನಲ್ಲಿ ಈ ಔಷಧಿಯ ನೋಂದಾವಣೆ ಮಾಡಿಸಿಲ್ಲ. ಹೀಗಾಗಿ ವಿವರವಾದ ವರದಿ ಅಗತ್ಯವಾಗಿದೆ ಎಂದು ವಾದಿಸಿದ್ದಾರೆ.

ಶನಿವಾರ ವರದಿ ಸಿಗುವ ಸಾಧ್ಯತೆ

ಇನ್ನು ಈ ಔಷಧಿಯ ಸ್ಯಾಂಪಲ್‌ಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಕ್ಲಿನಿಕಲ್ ಪರೀಕ್ಷೆಯ ವರದಿ ಶನಿವಾರದೊಳಗೆ ಸಿಗುವ ಸಾಧ್ಯತೆ ಇದೆ. ಔಷಧಿ ಜನರ ಪ್ರಾಣ ಕಾಪಾಡುವುದೇ ಆದರೆ ಈ ಬಗ್ಗೆ ನಮಗೆ ಯಾವುದೇ ತಕರಾರಿಲ್ಲ ಎಂದು ಸರ್ಕಾರದ ಪರ ವಕೀಲರು ಸ್ಪಷ್ಟಪಡಿಸಿದ್ದಾರೆ. 

ಏನಿದು ಔಷಧ?

ಆಂಧ್ರಪ್ರದೇಶದ ನೆಲ್ಲೂರು ಜಿಲ್ಲೆಯ ಕೃಷ್ಣಪಟ್ಟಂ ಎಂಬ ಗ್ರಾಮದ ವ್ಯಕ್ತಿಯೊಬ್ಬ ತಾನು ‘ಆಯುರ್ವೇದ ಔಷಧ’ ಕಂಡುಹಿಡಿದಿದ್ದೇನೆ ಎಂದು ಔಷಧ ಹಾಗೂ ಐ ಡ್ರಾಪ್‌ಗಳನ್ನು ಹಂಚುತ್ತಿರುವ ಪ್ರಸಂಗ ಬೆಳಕಿಗೆ ಬಂದಿತ್ತು. ಈತನಿಂದ ಔಷಧಿ ಪಡೆಯಲು ಭಾರೀ ಪ್ರಮಾಣದಲ್ಲಿ ಜನ ಹರಿದುಬರುತ್ತಿದ್ದರು. 

ಆನಂದಯ್ಯ ಎಂಬ ಹೆಸರಿನ ಈತನ ಔಷಧದ ಸುದ್ದಿ ಬಾಯಿಂದ ಬಾಯಿಗೆ ಹಬ್ಬಿ ಇಲ್ಲಿ ಕಳೆದ ಶುಕ್ರವಾರ 10000ಕ್ಕೂ ಹೆಚ್ಚು ಜನ ಆಗಮಿಸಿದ್ದು, ಕಾಲ್ತುಳಿತದ ಪರಿಸ್ಥಿತಿ ನಿರ್ಮಾಣವಾಗಿತ್ತು. ಭಾರೀ ಪ್ರಮಾಣದಲ್ಲಿ ಜನರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಆನಂದಯ್ಯನ ಮನೆ ಸಮೀಪ ಜನರ ನಿಯಂತ್ರಣಕ್ಕೆ ಬ್ಯಾರಿಕೇಡ್‌ಗಳನ್ನು ಹಾಕಲಾಗಿತ್ತು. ಶಂಕಿತ ಸೋಂಕಿತರು ಸೇರಿ ಸಾವಿರಾರು ಜನರು ಕೊರೋನಾ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಮುಗಿಬಿದ್ದು ಈ ಔಷಧ ಖರೀದಿಸುತ್ತಿದ್ದು, ಈ ಸ್ಥಳವೇ ಕೊರೋನಾದ ಹೊಸ ಹಾಟ್‌ಸ್ಪಾಟ್‌ ಆಗಿ ಪರಿವರ್ತನೆಯಾಗುವ ಆತಂಕ ಕಾಡಿತ್ತು.

‘ಈತನಿಂದ ಆಯುರ್ವೇದ ಔಷಧ ಪಡೆದವರಲ್ಲಿ ಯಾವುದೇ ಅಡ್ಡಪರಿಣಾಮ ಉಂಟಾಗಿಲ್ಲ. ಆದರೆ ಕಣ್ಣಿನ ಡ್ರಾಪ್‌ಗಳಿಂದ ದೀರ್ಘಾವಧಿ ಪರಿಣಾಮ ಉಂಟಾಗಬಹುದು’ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ. ಶಾಸಕ ಗೋವರ್ಧನ ರೆಡ್ಡಿ ಎಂಬುವರು ಈತನ ಔಷಧಿಯನ್ನು ಸಮರ್ಥಿಸಿಕೊಂಡಿದ್ದರು. ಮತ್ತೊಂದೆಡೆ, ಆಕ್ಸಿಜನ್‌ ಮಟ್ಟ83ಕ್ಕೆ ಕುಸಿದಿದ್ದ ವ್ಯಕ್ತಿಯೊಬ್ಬರಿಗೆ ಔಷಧ ಪಡೆದ ಕೆಲವೇ ಗಂಟೆಗಳಲ್ಲಿ ಆಕ್ಸಿಜನ್‌ ಪ್ರಮಾಣ 95ಕ್ಕೆ ಏರಿದೆ ಎಂಬ ಸುದ್ದಿಯನ್ನು ಸ್ಥಳೀಯ ಆರ್ಯುವೇದ ವೈದ್ಯರೊಬ್ಬರು ಖಚಿತಪಡಿಸಿದ್ದರು. 

ಇನ್ನು ಇದೇ ಜಿಲ್ಲೆಯವರಾದ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು, ಔಷಧಿ ಕುರಿತು ಅಧ್ಯಯನ ನಡೆಸಿ ಮಾಹಿತಿ ನೀಡುವಂತೆ ಕೇಂದ್ರ ಆಯುಷ್‌ ಖಾತೆ ಸಚಿವ ಕಿರಣ್‌ ರಿಜಿಜು ಮತ್ತು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ನಿರ್ದೇಶಕ ಬಲರಾಂ ಭಾರ್ಗವ ಅವರಿಗೆ ಸೂಚಿಸಿದ್ದರು. ಇದೇ ವೇಳೆ ಈ ಔಷಧವನ್ನು ಹೈದರಾಬಾದ್‌ನ ಆಯುಷ್‌ ಪ್ರಯೋಗಾಲಯಕ್ಕೆ ತಪಾಸಣೆಗೆಂದು ಕಳಿಸಲಾಗಿತ್ತು. ಮತ್ತೊಂದೆಡೆ ಇಡೀ ಪ್ರಕರಣದ ಕುರಿತು ವರದಿ ನೀಡುವಂತೆ ಸಿಎಂ ಜಗನ್ಮೋಹನ್‌ ರೆಡ್ಡಿ ಸೂಚಿಸಿದ್ದರು. ಅಲ್ಲದೆ ಔಷಧವನ್ನು ದೆಹಲಿಯಲ್ಲಿರುವ ಐಸಿಎಂಆರ್‌ಗೂ ಕಳುಹಿಸಿಕೊಡಲಾಗಿದೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

Follow Us:
Download App:
  • android
  • ios